ವಿದ್ಯಾಗಮ ಯೋಜನೆಯನ್ವಯ ಬಂಟ್ವಾಳ ತಾಲೂಕಿನ ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳು ನಿಂತ ನೀರಾಗದಂತೆ ನೋಡಿಕೊಳ್ಳುವ ಕಾರ್ಯ ನಡೆಯುತ್ತಿದೆ.
ಪ್ರಸ್ತುತ ವಿದ್ಯಾರ್ಥಿಗಳ ತರಗತಿವಾರು ಗುಂಪು ಮಾಡಿ ವಾಟ್ಸಪ್ ನಲ್ಲಿ ಕಲಿಕಾ ಸಾಮಗ್ರಿಗಳ ಚಟುವಟಿಕೆ ವಿಡಿಯೋಗಳನ್ನುಕಳುಹಿಸಿದರೂ ಕೂಡ ಅದು ನಿರಂತರವಾಗಿ ಮಕ್ಕಳನ್ನು ತಲುಪುತ್ತಿದೆಯೇ ಇಲ್ಲವೇ ಎಂದು ವಿದ್ಯಾಗಮದ ಮೂಲಕ ನೋಡಲಾಗುತ್ತಿದೆ. ಜನವಸತಿ ಪ್ರದೇಶದಲ್ಲಿ ಒಮ್ಮೆ ಸೇರುವಾಗ ವಿದ್ಯಾರ್ಥಿಗಳ ಕಲಿಕಾ ಸಂದೇಹಗಳನ್ನು ಪರಿಹರಿಸಲು ಕಲಿಕಾ ಚಟುವಟಿಕೆ ನೀಡಲು ಸಹಾಯವಾಗುತ್ತಿದೆ. ಡಿಡಿ ಚಂದನ ದಲ್ಲಿ ಬರುವ ಸಂವೇಗ ಕಾರ್ಯಕ್ರಮದಲ್ಲಿ ಬರುವ ಪಾಠಕ್ಕೆ ಪೂರಕವಾದ ಚಟುವಟಿಕೆಗಳನ್ನು ಅಭ್ಯಾಸ ಹಾಳೆ ಮೂಲಕ ನೀಡಲಾಗುತ್ತಿದೆ ಹಾಗೂ ಮುಂದಿನ ಭೇಟಿಯು ವಿದ್ಯಾರ್ಥಿಗಳಿಂದ ಅಭ್ಯಾಸ ಹಾಳೆಗಳನ್ನು ಪಡೆದು, ಪರಿಶೀಲಿಸಿ ಮೌಲ್ಯಮಾಪನ ಮಾಡಿ ಸೂಕ್ತ ಮಾರ್ಗದರ್ಶನ ನೀಡಲು ಸಹಕಾರಿಯಾಗಿದೆ. ಈ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚಿನ ಒತ್ತು ಸಿಗುವುದು. ಮೊಬೈಲ್ ಇಲ್ಲದ ವಿದ್ಯಾರ್ಥಿಗಳನ್ನು ಕಲಿಕಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಈ ಮೂಲಕ ಸುಲಭ ಸಾಧ್ಯ .ಶಿಕ್ಷಕರು ವಿದ್ಯಾರ್ಥಿಗಳನ್ನು ಕನಿಷ್ಠ ಸಂಖ್ಯೆಯಲ್ಲಿ ಭೇಟಿ ಮಾಡುವುದರಿಂದ ಪ್ರತಿಯೊಂದು ವಿದ್ಯಾರ್ಥಿಗೂ ವೈಯಕ್ತಿಕ ಗಮನ ನೀಡಿ ಕಲಿಕಾ ಕೊರತೆಯನ್ನು ನೀಗಿಸಲು ಅನುಕೂಲವಾಗುವುದು .ಕನಿಷ್ಠ ಕಲಿಕಾ ಮಟ್ಟವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ವಿದ್ಯಾಗಮದಿಂದ ಸಾಧ್ಯ. ಸ್ಥಳೀಯ ಸಂಘ ಸಂಸ್ಥೆ , ವಿದ್ಯಾಭಿಮಾನಿ ಸ್ಥಳೀಯರು ಹಾಗೂ ಪೋಷಕರು ಶಿಕ್ಷಕರೊಂದಿಗೆ ಕೈಜೋಡಿಸುವ ಅಗತ್ಯ ಇಲ್ಲಿದೆ.
ಪೊಳಲಿಯಲ್ಲಿ: ಪೊಳಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಗಮ ಕಾರ್ಯಕ್ರಮ ನಡೆಯಿತು. ಇಲ್ಲಿ 250 ಮಕ್ಕಳಿದ್ದು, ಅವರನ್ನು ವಿದ್ಯಾಗಮ ಮೂಲಕ ತಲುಪುವ ಸಲುವಾಗಿ ರೂಪುರೇಷೆಗಳು ನಡೆದವು. ಪೊಳಲಿ, ಕರಿಯಂಗಳ ಪಲ್ಲಿಪಾಡಿ, ಬಡಗಬೆಳ್ಳೂರು ,ತೆಂಕಬೆಳ್ಳೂರು ,ಬಡಕಬೈಲು, ಅಮ್ಮುಂಜೆ ನಾಣೂರ ಪದವು, ಅಡ್ಡೂರು ಎಂಬ ಹತ್ತು ಜನವಸತಿ ಪ್ರದೇಶಗಳನ್ನು ಗುರುತಿಸಲಾಯಿತು .ಶಾಲೆಯ ವಿದ್ಯಾರ್ಥಿಗಳಲ್ಲಿ ಆಂಡ್ರಾಯ್ಡ್ ಮೊಬೈಲ್ ಹೊಂದಿರುವವರ ಹಾಗೂ ಹೊಂದಿಲ್ಲದವರಮತ್ತು ಟಿವಿ ಇರುವವರ ಹಾಗೂ ಟಿವಿ ಇಲ್ಲದವರ ದತ್ತಾಂಶಗಳನ್ನು ಸಂಗ್ರಹಿಸಲಾಯಿತು. ಶಾಲೆಯ ಹತ್ತು ಶಿಕ್ಷಕರು 5 ಶಿಕ್ಷಕರ ಎರಡು ತಂಡಗಳನ್ನು ಮಾಡಿ ದಿನಕ್ಕೊಂದು ಜನವಸತಿ ಪ್ರದೇಶಕ್ಕೆ ಭೇಟಿ ನೀಡುವುದಾಗಿ ನಿರ್ಧರಿಸಲಾಯಿತು.
ಅಮ್ಮುಂಜೆಯಲ್ಲಿ ಗ್ರಾಮಪಂಚಾಯತ್ ಸಭಾಭವನದಲ್ಲಿ, ಕರಿಯಂಗಳ ದಲ್ಲಿ ಮಾಜಿ ಅಧ್ಯಕ್ಷರ ಮನೆಯ ತಾರಸಿಯಲ್ಲಿ, ತೆಂಕಬೆಳ್ಳೂರು ಚರ್ಚ್ ಆವರಣದಲ್ಲಿ, ಬಡಕಬೈಲ್ ನಲ್ಲಿ ಒಬ್ಬ ಸ್ಥಳೀಯವಿದ್ಯಾಭಿಮಾನಿ ಅವರ ಮನೆಯ ತಾರಸಿಯಲ್ಲಿ, ಬಡಗಬೆಳ್ಳೂರಿನಲ್ಲಿ ಆದಿಶಕ್ತಿ ಚಾಮುಂಡಿ ದೇವಸ್ಥಾನದ ಸಭಾಭವನದಲ್ಲಿ, ಪೊಳಲಿಯಲ್ಲಿ ಸರ್ವಮಂಗಳ ಸಭಾ ಭವನದ ಆವರಣದಲ್ಲಿ ವಿದ್ಯಾಗಮನ ನಡೆಸಲಾಗುತ್ತಿದೆ.
ವೀರಕಂಭದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ವೀರಕಂಬ ಗ್ರಾಮ ವ್ಯಾಪ್ತಿಯ ವಿವಿಧೆಡೆ ಕಲಿಕಾ ತರಗತಿಗಳನ್ನು ನಡೆಸಲಾಗುತ್ತಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮಾತೃಶ್ರೀ ಗೆಳೆಯರ ಬಳಗ ವೀರಕಂಭ ದಲ್ಲಿ ಕಲ್ಲಡ್ಕ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ಮೆಟಿಲ್ಡಾ ಲೋಬೊ ನೆರವೇರಿಸಿದರು.ಮುಖ್ಯಶಿಕ್ಷಕ ನಾರಾಯಣ ಪೂಜಾರಿ ವಿದ್ಯಾಗಮದ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಮುಖ್ಯಶಿಕ್ಷಕ ನಾರಾಯಣ ಪೂಜಾರಿ ಅವರು ಗುಡ್ಡೆತೋಟ ,ಸಿಂಗೇರಿ, ಗಿಳ್ಕಿಂಜ, ನಂದಂತಿಮಾರು, ಪ್ರದೇಶದ ಮಕ್ಕಳಿಗೆ ,ಶಿಕ್ಷಕಿ ಶಕುಂತಲಳಾ. ಎಂ .ಬಿ. ಕಂಪದ ಬೈಲು, ಕೋಡಪದವು, ತಾಳಿತ್ತನೂಜಿ ,ಮಜಿ, ಮಜ್ಜೋನಿ ಪ್ರದೇಶದ ಮಕ್ಕಳಿಗೆ, ಶಿಕ್ಷಕಿ ಸಿಸಿಲಿಯ, ಎಮೆ೯ಮಜಲು ,ನಕ್ಕರಾಜೆ , ಗಣೇಶ್ ಕೊಡಿ, ಪ್ರದೇಶದ ಮಕ್ಕಳಿಗೆ, ಶಿಕ್ಷಕಿ ಸಂಗೀತ ಶರ್ಮ, ಬಾಯಿಲ ಅರೆಬೆಟ್ಟು ,ಮಜಿ ಬೆತ್ತ ಸರವು, ಕೆಮ್ಮ ಟೆ, ಕುಮೇರು,ವೀರಕಂಬ, ಕೇಪುಳ ಕೊಡಿ , ವ್ಯಾಪ್ತಿಯ ಮಕ್ಕಳಿಗೆ , ಶಿಕ್ಷಕಿ ಅನುಷಾ, ಕೆಲಿಂಜ, ಪೆಲತ್ತಡ್ಕ ,ಬೆಂಜನತಿಮಾರು, ಪಾತ್ರ ತೋಟ, ಮಂಗಿಲಪದವು ಮಕ್ಕಳಿಗೆ ಶಿಕ್ಷಕಿ ಮುರ್ಷೀದಾ ಬಾನು ,ಮೈರ ,ಕೊಂಬಿಲ , ಅನಂತಾಡಿ ,ಚಾಕೊಟೆ ಮಾರು , ವ್ಯಾಪ್ತಿಯ ಮಕ್ಕಳಿಗೆ, ಹಾಗೂ ಅತಿಥಿ ಶಿಕ್ಷಕಿಯರಾದ ಜಯಲಕ್ಷ್ಮಿ ಹಾಗೂ ಶ್ವೇತಾ ಎಲ್ಲಾ ಶಿಕ್ಷಕರ ಜೊತೆ ಸೇರಿಕೊಂಡು ಈ ಕಾರ್ಯಕ್ರಮದ ಯಶಸ್ವಿಗೆ ಶ್ರಮಪಡುತ್ತಿದ್ದಾರೆ.
Be the first to comment on "ಶಿಕ್ಷಕರಿಂದ ಪ್ರತಿಯೊಬ್ಬ ವಿದ್ಯಾರ್ಥಿಗೂ ವೈಯಕ್ತಿಕ ಗಮನ – ಇದು ವಿದ್ಯಾಗಮದ ವಿಶೇಷ"