ಲಾಕ್ ಡೌನ್ ಅನ್ನು ಸದುಪಯೋಗಪಡಿಸಿಕೊಂಡ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪ ಕೊಳ್ನಾಡು ಗ್ರಾಮದ ಸುರಿಬೈಲು ಸರ್ಕಾರಿ ಶಾಲೆ, ತರಕಾರಿ ತೋಟ ಮಾಡುವ ಮೂಲಕ ಗಮನ ಸೆಳೆದಿದೆ. 25ಕ್ಕೂ ಅಧಿಕ ತರಕಾರಿಗಳನ್ನು ಇಲ್ಲಿ ಬೆಳೆಸಲಾಗುತ್ತಿದೆ. ಇದಲ್ಲದೆ ಇಲ್ಲಿರುವ ಅಡಕೆ ತೋಟವೂ ಸಮೃದ್ಧ ಬೆಳೆ ಒದಗಿಸಿದ್ದು, ರಾಜ್ಯಕ್ಕೇ ಮಾದರಿ ಎನಿಸಿದೆ.
ಬಂಟ್ವಾಳ: ಇದು ಬಂಟ್ವಾಳ ತಾಲೂಕಿನ ವಿಟ್ಲ ಸಮೀಪ ಕೊಳ್ನಾಡು ಗ್ರಾಮದಲ್ಲಿರುವ ಸರ್ಕಾರಿ ಶಾಲೆ. ಸಾಮಾನ್ಯವಾಗಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಕ್ಕಳಷ್ಟೇ ಅಲ್ಲ, ಶಾಲಾಭಿವೃದ್ಧಿ ಸಮಿತಿ ಸದಸ್ಯರೂ ಶಾಲೆಯತ್ತ ಬರುವುದು ವಿರಳ. ಆದರೆ ಸುರಿಬೈಲಿನಲ್ಲಿ ಹಾಗಲ್ಲ. ಶಾಲೆಯ ಪಠ್ಯ ಚಟುವಟಿಕೆಗಳ ಕುರಿತು ಇರುವಷ್ಟೇ ಹೊರಾಂಗಣ ಚಟುವಟಿಕೆಯಲ್ಲೂ ಕಾಳಜಿಯನ್ನು ಶಾಲಾಭಿವೃದ್ಧಿ ಸಮಿತಿ ವಹಿಸಿಕೊಂಡ ಕಾರಣ ಇಡೀ ಶಾಲೆಯಲ್ಲಿ ಹಸಿರು ನಳನಳಿಸುತ್ತಿದೆ. ಸಮೃದ್ಧ ತರಕಾರಿ ತೋಟದಿಂದ ಶಾಲೆ ಕಂಗೊಳಿಸುತ್ತಿದೆ.
ಈಗಾಗಲೇ ಇಲ್ಲಿ 25ಕ್ಕೂ ಹೆಚ್ಚು ಬೇರೆ ಬೇರೆ ತರಕಾರಿಗಳನ್ನು ಬೆಳೆಸಲಾಗುತ್ತಿದೆ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಎಂ. ಅಬೂಬಕ್ಕರ್ ಹಾಗೂ ಶಾಲಾ ಮುಖ್ಯ ಶಿಕ್ಷಕ ಗೋಪಾಲ ಎಸ್ ನೇತೃತ್ವದಲ್ಲಿ ಸಮಿತಿ ಸದಸ್ಯರು, ಅಧ್ಯಾಪಕರು, ಸ್ಥಳೀಯರ ಸಹಕಾರ ಇಲ್ಲಿದೆ.ಜೂನ್ ತಿಂಗಳಿನಲ್ಲಿ ವಿವಿಧ ಬಗೆಯ ತರಕಾರಿ ಬೀಜಗಳನ್ನು ಬಿತ್ತಿದ್ದರು. ಅದೀಗ ಫಲ ನೀಡಿದೆ. ಶಾಲೆಗೆ ಸಂಬಂಧಪಟ್ಟ ೨೫ ಸೆಂಟ್ಸ್ ಜಾಗದಲ್ಲಿ ಅಲಸಂಡೆ, ಕೆಂಪು ಬೆಂಡೆ, ಬಿಳಿಬೆಂಡೆ, ಸೋರೆಕಾಯಿ, ಪಡುವಲಕಾಯಿ, ಕುಂಬಳಕಾಯಿ, ಚೀನಿಕಾಯಿ, ಹರಿವೆ, ಮರಗೆಣಸು, ಸಿಹಿಗೆಣಸು, ಸೌತೆಕಾಯಿ, ಮುಳ್ಳುಸೌತೆ, ಹಾಗಲಕಾಯಿ, ಶುಂಠಿ, ಅರಸಿನ, ಬಾಳೆ, ಅನನಾಸ್, ಟೊಮೊಟೊ ಮೊದಲಾದ ತರಕಾರಿಗಳು ತೋಟದಲ್ಲಿ ಲಭ್ಯ. ಕಳೆದ ಮೂರು ವಾರದಿಂದ ತರಕಾರಿಗಳನ್ನು ಕೊಯ್ಯಲಾಗುತ್ತಿದೆ. ತರಕಾರಿ ಬೆಳೆಸಲೆಂದೇ ಪ್ರತ್ಯೇಕ ಜಾಗವನ್ನು ಕಾಯ್ದಿರಿಸಲಾಗಿದೆ. ಇದಲ್ಲದೆ, ಶಾಲೆಯ 1.5 ಎಕ್ರೆ ಜಾಗದಲ್ಲಿ ಅಡಕೆ ತೋಟ ನಿರ್ಮಿಸಲಾಗಿದೆ. ಇದರಿಂದ ಶಾಲೆಗೆ ೧.೮೦ ಲಕ್ಷ ರೂ ಆದಾಯ ಬರುತ್ತಿದೆ. ಅದಲ್ಲದೇ ಸುತ್ತಮುತ್ತಲಿನಲ್ಲಿ ಹಲಸು, ಬದನೆ ಮೊದಲಾದ ಕೃಷಿಗಳನ್ನು ನಡೆಸುತ್ತಿದೆ. ತರಕಾರಿ, ಅನನಾಸ್, ಅಡಿಕೆ ತೋಟ, ಬಾಳೆಗಿಡ ಹೀಗೆ ಪ್ರತ್ಯೇಕ ಪ್ರತ್ಯೇಕವಾಗಿ ಜಾಗದಲ್ಲಿ ಬೆಳಸಲಾಗುತ್ತಿದೆ.
Be the first to comment on "ತರಕಾರಿ, ಕೃಷಿ ಮೂಲಕ ಲಾಕ್ ಡೌನ್ ನಲ್ಲೂ ವಿರಮಿಸದ ಸುರಿಬೈಲ್ ಸರ್ಕಾರಿ ಶಾಲೆಯ ಚಟುವಟಿಕೆ"