ಬಂಟ್ವಾಳ ಎಪಿಎಂಸಿಯಲ್ಲಿ ತನ್ನ ಎರಡು ಅವಧಿಯ ಅಧಿಕಾರದಲ್ಲಿ 1.7 ಕೋಟಿ ರೂ ವೆಚ್ಚದಲ್ಲಿ ತಾಲೂಕಿನ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ 59 ರಸ್ತೆಗಳನ್ನು ನಿರ್ಮಿಸಲಾಗಿದ್ದು, ಮಾಣಿ, ಮಣಿನಾಲ್ಕೂರು ಮತ್ತು ಸಾಲೆತ್ತೂರುಗಳಲ್ಲಿ ಸಂತೆ ಮಾರುಕಟ್ಟೆ ನಿರ್ಮಿಸಲಾಗಿದೆ ಎಂದು ನಿರ್ಗಮನ ಅಧ್ಯಕ್ಷ ಪದ್ಮನಾಭ ರೈ ಹೇಳಿದ್ದಾರೆ.
ಕೈಕುಂಜೆಯಲ್ಲಿರುವ ಎಪಿಎಂಸಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ ಬಂಟ್ವಾಳ ಎಪಿಎಂಸಿ ತೆಗೆದುಕೊಂಡ ಕ್ರಮ ರಾಜ್ಯದ ಇತರೆ ಎಪಿಎಂಸಿಗಳಿಗೂ ಪ್ರಯೋಜನವಾಯಿತು. ಮಾಜಿ ಸಚಿವ ಬಿ.ರಮಾನಾಥ ರೈ ಅವರ ಮುತುವರ್ಜಿಯಲ್ಲಿ ಇದು ಸಾಧ್ಯವಾಯಿತು ಎಂದರು.
ಎಪಿಎಂಸಿ ಮಾರುಕಟ್ಟೆ ಜಮೀನನ್ನು ಮೇಲ್ಕಾರ್ ಸಮೀಪ ಗುರುತಿಸಲಾಗಿದ್ದು, ಎಪಿಎಂಸಿ ಹೆಸರಿಗೆ ಮೀಸಲಿಡಲಾಗಿದೆ. ನಬಾರ್ಡ್ ಯೋಜನೆಯಡಿ 75 ಲಕ್ಷ ರೂ ವೆಚ್ಚದಲ್ಲಿ ಮಾಣಿ, ಮಣಿನಾಲ್ಕೂರುಗಳಲ್ಲಿ ಮುಚ್ಚು ಹರಾಜುಕಟ್ಟೆ ನಿರ್ಮಿಸಿ ಆಯಾ ಗ್ರಾಪಂಗಳಿಗೆ ನಿರ್ವಹಣೆಗೆ ಒಪ್ಪಿಸಲಾಗಿದೆ. ರೈತಸಂಜೀವಿನಿ ಅಪಘಾತ ವಿಮೆಯಡಿ 9 ಫಲಾನುಭವಿಗಳಿಗೆ 9.4 ಲಕ್ಷ ರೂ ವಿತರಣೆ, ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ 25 ಲಕ್ಷ ರೂ ದೇಣಿಗೆ, 1.25 ಕೋಟಿ ರೂ ವ ೆಚ್ಚದಲ್ಲಿ 1000 ಮೆಟ್ರಿಕ್ ಟನ್ ಸಾಮರ್ಥ್ಯದ ಗೋಡೌನ್ ನಿರ್ಮಾಣಕ್ಕೆ ಹಣ ಮೀಸಲು, ಕೃಷಿಕರಿಗೆ 6 ತಿಂಗಳು ಬಡ್ಡಿರಹಿತ ಸಾಲ ನೀಡುವ ಯೋಜನೆಗೆ ಗೋಡೌನ್ ಕೊರತೆಯಿಂದಾಗಿ ಖಾಸಗಿ ಬಾಡಿಗೆ ಪಡೆಯಲು ಪ್ರಸ್ತಾಪ, ತಾಲೂಕಿನ ಅಲ್ಲಲ್ಲಿ ಮಾರುಕಟ್ಟೆ ಸಪ್ತಾಹ, ಕ್ಯಾಂಪ್ಕೊ ಮೂಲಕ ರೈತರ ಬೆಳೆ ಮಾರಾಟಕ್ಕೆ ಅವಕಾಶವನ್ನು ತನ್ನ ಅವಧಿಯಲ್ಲಿ ಕಲ್ಪಿಸಲಾಗಿದೆ ಎಂದವರು ಹೇಳಿದರು.
ಮುಂದಿನ 20 ತಿಂಗಳ ಅವಧಿಯಲ್ಲಿ ನೂತನ ಅಧ್ಯಕ್ಷರು, ಸಮಿತಿಯೊಂದಿಗೆ ಸಹಕರಿಸಿ, ಬಾಕಿ ಉಳಿದ ಕಾಮಗಾರಿ ನಿರ್ವಹಣೆಗೆ ಸಹಕಾರ ನೀಡಲಿದ್ದೇವೆ ಎಂದವರು ತಿಳಿಸಿದರು. ಈ ವೇಳೆ ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ನಿರ್ದೇಶಕರಾದ ಪದ್ಮರಾಜ ಬಲ್ಲಾಳ, ಚಂದ್ರಶೇಖರ ರೈ ಉಪಸ್ಥಿತರಿದ್ದರು.
Be the first to comment on "ತನ್ನ ಅವಧಿಯಲ್ಲಿ ಸಂತೆ ಮಾರುಕಟ್ಟೆ, 59 ಸಂಪರ್ಕ ರಸ್ತೆಗಳ ನಿರ್ಮಾಣ: ಪದ್ಮನಾಭ ರೈ"