ಕಲ್ಲಡ್ಕ ಸಮೀಪ ದಾಸಕೋಡಿ ಎಂಬಲ್ಲಿ ಬೈಕ್ ಸ್ಕಿಡ್ ಆಗಿ ಅಪಘಾತಕ್ಕೀಡಾದ ಕಣ್ಣೂರಿನ ಇಬ್ಬರು ಮುತಅಲ್ಲಿಮ್ (ಉಸ್ತಾದರು) ಮತ್ತು ಆರು ವರ್ಷದ ಮಗುವನ್ನು ಸಕಾಲಕ್ಕೆ ಚಿಕಿತ್ಸೆ ಒದಗಿಸಿ ಪ್ರಾಣ ಉಳಿಸಿ ಮಾನವೀಯತೆ ಮೆರೆದ ಕಲ್ಲಡ್ಕದ ಸಂದೇಶ್ ಕಲ್ಲಡ್ಕ ಈಗ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಟ್ಟಡ ನಿರ್ಮಾಣ ಗುತ್ತಿಗೆ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಸಂದೇಶ್, ಮಂಗಳವಾರ ಬೆಳಗ್ಗೆ ತನ್ನ ಕೆಲಸಗಾರರೊಂದಿಗೆ ಕಾರಿನಲ್ಲಿ ನಿರ್ಮಾಣ ಕೆಲಸದತ್ತ ತೆರಳುತ್ತಿದ್ದ ಸಂದರ್ಭ ಮಗುಚಿಬಿದ್ದ ಸ್ಥಿತಿಯಲ್ಲಿ ಮಗುವೊಂದು ರಸ್ತೆಯಲ್ಲಿ ಬಿದ್ದಿದ್ದು ಕಂಡುಬಂತು. ನೋಡುವಾಗ ಬೈಕ್ ಸ್ಕಿಡ್ ಆಗಿ ಇಬ್ಬರು ಪುರುಷರು ಮತ್ತು ಓರ್ವ ಮಗು ಬಿದ್ದಿದ್ದರು.
ಈ ವೇಳೆ ಕೂಡಲೇ ಕಾರಿನಲ್ಲಿ ಮೂವರನ್ನು ಕರೆದುಕೊಂಡು ಬಿ.ಸಿ.ರೋಡಿನ ಸೋಮಯಾಜಿ ಆಸ್ಪತ್ರೆಗೆ ಒಯ್ದ ಸಂದೇಶ್, ಪ್ರಥಮ ಚಿಕಿತ್ಸೆ ನೀಡಲು ನೆರವಾದರು. ಈ ವೇಳೆ ಕೆ.ಕೆ.ಸಯೀದ್ ಎಂಬವರಿಗೆ ಕರೆಮಾಡಿ ವಿಷಯ ತಿಳಿಸಿದರು, ಕಲ್ಲಡ್ಕ ಎಸ್ಕೆಎಸ್ಸೆಸ್ಸೆಫ್ ಆಂಬುಲೆನ್ಸ್ ಚಾಲಕರಾದ ಖಾಸಿಂ ಅವರಿಗೂ ವಿಷಯ ತಿಳಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ದಾಖಲು ಮಾಡಲು ನೆರವಾದರು. ಇದೀಗ ಜಾತಿ, ಧರ್ಮ ನೋಡದೆ, ಮಾನವೀಯತೆಯೇ ನಿಜವಾದ ಧರ್ಮ ಎಂದು ಸಾರಿದ ಕಲ್ಲಡ್ಕದ ಸಂದೇಶ್ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆಗೆ ಒಳಗಾಗಿದ್ದಾರೆ.
ಅಪಘಾತ ನಡೆದ ಸ್ಥಳದಲ್ಲಿ ಮೊಬೈಲ್ ನಲ್ಲಿ ಫೊಟೊ ಕ್ಲಿಕ್ ಮಾಡುವವರು ಇದ್ದರೇ ಹೊರತು, ಯಾರೂ ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ ಮಾಡಿರಲಿಲ್ಲ. ತಲೆಯಿಂದ ರಕ್ತ ಒಸರುತ್ತಿದ್ದ ಕಾರಣ ತುರ್ತು ಚಿಕಿತ್ಸೆ ಅತ್ಯಗತ್ಯ ಎಂದು ಮನಗಂಡು ನಾನು ಅವರನ್ನು ಕರೆದುಕೊಂಡು ಆಸ್ಪತ್ರೆಗೆ ಸೇರಿಸಿದೆ ಎನ್ನುತ್ತಾರೆ ಸಂದೇಶ್.
Be the first to comment on "ಅಪಘಾತಕ್ಕೀಡಾದವರನ್ನು ರಕ್ಷಿಸಿ ಮಾನವೀಯತೆ ಮೆರೆದ ಕಲ್ಲಡ್ಕದ ಸಂದೇಶ್"