ಕೋವಿಡ್ ಹಿನ್ನೆಲೆಯಲ್ಲಿ ಶಾಲಾರಂಭವಾಗದೇ ಇರುವ ಸಂದರ್ಭ ಈಗಾಗಲೇ ಕೆಲ ಖಾಸಗಿ ಶಾಲೆಗಳು ಫೀಸ್ ಕಟ್ಟುವಂತೆ ಪೋಷಕರ ಮೇಲೆ ಒತ್ತಡ ಹೇರುವ ಪ್ರಕರಣಗಳು ಕಂಡುಬಂದಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ತಿಳಿಸಿದ್ದು, ಇಂಥದನ್ನು ನಡೆಸಿದರೆ, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
2020-21ನೇ ಸಾಲಿನ ವಿದ್ಯಾರ್ಥಿಗಳಿಂದ ಶುಲ್ಕ ಪಾವತಿ ಬಗ್ಗೆ ಖಾಸಗಿ ಶಾಲೆಗಳಿಗೆ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಸೂಚನೆಯೊಂದನ್ನು ಹೊರಡಿಸಿದ್ದು, ಇದರಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಸುತ್ತೋಲೆಯಂತೆ ವಿದ್ಯಾರ್ಥಿಗಳಿಂದ ಬೋಧನಾ ಶುಲ್ಕ ಪಡೆಯುವ ಕುರಿತು ಶುಲ್ಕ ಪಾವತಿಸಲು ಸಾಧ್ಯವಿಲ್ಲವೆಂದು ನಿರಾಕರಿಸುವ ಪೋಷಕರಿಂದ ಮುಂದಿನ ಆದೇಶದವರೆಗೆ ಯಾವುದೇ ರೀತಿಯ ಒತ್ತಡ ಹೇರಬಾರದು. ಶುಲ್ಕವನ್ನು ಪಾವತಿಸದ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಿರುವ ಕುರಿತು ದೂರುಗಳು ಬಂದರೆ ಅಂಥ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಿಇಒ ಹೇಳಿದ್ದಾರೆ. ಜಿಲ್ಲಾಧಿಕಾರಿಯವರಿಗೆ ಹಾಗೂ ಉಪನಿರ್ದೇಶಕರಿಗೆ ಪೋಷಕರಿಂದ ಕೆಲವು ಖಾಸಗಿ ಶಾಲೆಯವರು ಶಾಲಾ ಶುಲ್ಕವನ್ನು ವಸೂಲು ಮಾಡುತ್ತಿರುವ ಬಗ್ಗೆ ದೂರವಾಣಿ ಮೂಲಕ ದೂರುಗಳು ಬರುತ್ತಿವೆ. ಹೀಗಾಗಿ ಶಾಲಾ ಶುಲ್ಕ ವಸೂಲಾತಿ ಕುರಿತಂತೆ ಯಾವುದೇ ವಿದ್ಯಾರ್ಥಿ ಪೋಷಕರಿಗೆ ಒತ್ತಡ ಹೇರುವಂತಿಲ್ಲ ಒಂದು ವೇಳೆ ಈ ಕುರಿತು ದೂರು ದಾಖಲಾದಲ್ಲಿ ಅಂತಹ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಕ್ಷಣ ಹಕ್ಕು ಕಾಯಿದೆಯಡಿ ಶಿಸ್ತು ಕ್ರಮ ವಹಿಸಲಾಗುವುದು ಹಾಗೂ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರಕ್ಕೆ ವರದಿ ಮಾಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ತಿಳಿಸಿದ್ದಾರೆ.
Be the first to comment on "ಫೀಸ್ ಕಟ್ಟಲು ಒತ್ತಡ ಹೇರಿದರೆ ನಿರ್ದಾಕ್ಷಿಣ್ಯ ಕ್ರಮ – ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬಿಇಒ ಎಚ್ಚರಿಕೆ"