ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬಂಟ್ವಾಳದ ಪೊಲೀಸ್ ಠಾಣೆಗಳಿಗೂ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದ್ದು, ಬಂಟ್ವಾಳ ಉಪವಿಭಾಗ ವ್ಯಾಪ್ತಿಯ ಠಾಣೆಗಳಲ್ಲಿ ಠಾಣೆಯ ಹೊರಭಾಗದಲ್ಲೇ ಸಾಮಾಜಿಕ ಅಂತರದ ಮೂಲಕ ಸೇವೆಗಳನ್ನು ಒದಗಿಸಲಾಗುತ್ತಿದೆ.
ಸಾರ್ವಜನಿಕ ಸಂಪರ್ಕದಿಂದ ಇದೀಗ ಕೊರೊನಾ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಕಟ್ಟುನಿಟ್ಟಿನ ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ಬಂಟ್ವಾಳ ಡಿವೈಎಸ್ಪಿ ವೆಲಂಟೈನ್ ಡಿಸೋಜ ತಿಳಿಸಿದ್ದಾರೆ.
ಸಾರ್ವಜನಿಕರು ಗುಂಪುಗುಂಪಾಗಿ ದೂರು ನೀಡಲು ಬರುವ ಅಗತ್ಯ ಇಲ್ಲ, ದೂರು ನೀಡಲು ಬರುವ ವ್ಯಕ್ತಿಯೊಬ್ಬರಿಗಷ್ಟೇ ಪ್ರವೇಶ ಕಲ್ಪಿಸಲಾಗುತ್ತದೆ. ಯಾವುದೇ ಸಂದರ್ಭವೂ ಸಾಮಾಜಿಕ ಅಂತರ ಕಾಪಾಡುವುದು ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ತಿಳಿಸಿದ್ದಾರೆ. ಈಗಾಗಲೇ ವಿಟ್ಲ ಠಾಣೆಯ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳಿಂದ ಎಲ್ಲ ಸ್ತರದ ಸಿಬ್ಬಂದಿವರೆಗೆ ಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಗತ್ಯವಿದ್ದಲ್ಲಿ ಆರೋಗ್ಯ ತಪಾಸಣೆ ಸಹಿತ ಕ್ರಮಗಳನ್ನು ಕೈಗೊಳ್ಳಲು ಇಲಾಖೆ ತಯಾರಾಗಿದ್ದು, ಸಾರ್ವಜನಿಕರು ಹೆಚ್ಚಾಗಿ ಸಂಪರ್ಕವಿಡುವ ಇಲಾಖೆಯಾಗಿರುವ ಕಾರಣ ತಮ್ಮ ಆರೋಗ್ಯವನ್ನು ಕಾಪಾಡುವುದೂ ಸಿಬ್ಬಂದಿಗೆ ಅವಶ್ಯಕವಾಗಿದೆ ಎಂದವರು ತಿಳಿಸಿದ್ದಾರೆ.
Be the first to comment on "ಕೊರೊನಾ ಬಾರದಂತೆ ಪೊಲೀಸ್ ಠಾಣೆಗಳಲ್ಲಿ ಕಟ್ಟುನಿಟ್ಟಿನ ಭದ್ರತೆ"