ಕೊರೊನಾ ಲಾಕ್ ಡೌನ್ ಸಂದರ್ಭ ಹಲವು ವರ್ಗಗಳು ಸಂಕಷ್ಟಕ್ಕೀಡಾಗಿವೆ. ಇವುಗಳಲ್ಲಿ ಬ್ರಾಹ್ಮಣ ಸಮುದಾಯದ ಅರ್ಚಕರ ಸಹಾಯಕರು, ಅಡುಗೆ ಸಹಾಯಕರು, ಅಡುಗೆಯವರೂ ಇದ್ದಾರೆ. ಇಂಥ ಸಂಕಷ್ಟದಲ್ಲಿರುವ ಸುಮಾರು 100 ಮಂದಿಯನ್ನು ಆಯ್ದು ಅವರ ಅಕೌಂಟ್ ಗೆ ತಲಾ 5 ಸಾವಿರ ರೂಗಳನ್ನು ಒದಗಿಸಿ ಉದಾರತೆ ಮೆರೆದವರು ಬಂಟ್ವಾಳ ತಾಲೂಕಿನ ಶಂಭೂರು ಸಮೀಪ ಎರಕಳ ಮೂಲದ ಉದ್ಯಮಿ ಎರಕಳ ರಘುನಾಥ ಸೋಮಯಾಜಿ.
ಎರಡು ತಿಂಗಳ ಅವಧಿಯಲ್ಲಿ ಮದುವೆ, ಉಪನಯನದಂಥ ಸಮಾರಂಭಗಳಿದ್ದರೆ ಕೈತುಂಬಾ ಕೆಲಸ ಹೊಂದಿರುತ್ತಿದ್ದ ಈ ವರ್ಗಕ್ಕೆ ಇದೀಗ ನಿರುದ್ಯೋಗ. ಇವರಲ್ಲಿ ಒಪ್ಪೊತ್ತಿನ ಊಟಕ್ಕೂ ತತ್ವಾರ ಎನ್ನುವಂಥ ಪರಿಸ್ಥಿತಿ ಇದೆ. ಕೆಲವು ಕೌಟುಂಬಿಕ ಸಮಸ್ಯೆಗಳಿಂದ ನಷ್ಟವೂ ಅನುಭವಿಸಿದ್ದಾರೆ. ಇಂಥ ಸಂದರ್ಭ ಸ್ಥಳೀಯ ಪ್ರಮುಖರ ಬಳಿ ವಿಚಾರ ವಿಮರ್ಶೆ ನಡೆಸಿದ ರಘುನಾಥ ಸೋಮಯಾಜಿ, ಸಂಕಷ್ಟದಲ್ಲಿರುವ ಅರ್ಚಕರು, ಅರ್ಚಕರ ಸಹಾಯಕರು, ಅಡುಗೆಯವರು, ಅಡುಗೆ ಸಹಾಯಕರ ಪಟ್ಟಿ ಮತ್ತು ಅವರ ಅಕೌಂಟ್ ನಂಬರ್ ಅನ್ನು ಪಡೆದುಕೊಂಡರು. ಇದಕ್ಕಾಗಿ ಯಾವುದೇ ಸಮಾರಂಭವನ್ನೂ ಮಾಡಲಿಲ್ಲ, ಬಳಿಗೆ ಕರೆಸಿಕೊಳ್ಳಲೂ ಇಲ್ಲ, ಫೊಟೋ ಸೆಶನ್ ಕೂಡ ಮಾಡಿಸಲಿಲ್ಲ. ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಇವರ ಜೀವನಕ್ಕೆ ತೊಂದರೆ ಯಾಗಬಾರದು ಎಂಬ ಉದ್ದೇಶದಿಂದ ಈ ವರ್ಗಕ್ಕೆ ಗೌರವಯುತವಾದ ಬಾಳ್ವೆ ಸಾಗಿಸುವ ಸಲುವಾಗಿ ನೇರ ಅಕೌಂಟ್ ಗೇ ಹಣ ಪಾವತಿಸಿ ಮಾದರಿಯಾಗಿದ್ದಾರೆ ಎಂದು ಅರ್ಚಕ ಸಹಾಯಕ, ಅಡುಗೆ ಸಹಾಯಕ ಕೆಲಸ ಕಾರ್ಯಗಳಿಗೆ ತೆರಳುವವರು ಹೇಳುತ್ತಿದ್ದಾರೆ.
ಮಾದರಿ ಕಾರ್ಯ: ಇವತ್ತು ಅರ್ಚಕರ ಸಹಾಯಕರಾಗಿ, ಅಡುಗೆ ಸಹಾಯಕರಾಗಿ ಹೋಗುವವರನ್ನು ಗುರುತಿಸುವವರು ವಿರಳ. ಆದರೆ ರಘುನಾಥ ಸೋಮಯಾಜಿಯವರು ನಮ್ಮ ಕಷ್ಟಗಳನ್ನು ಗುರುತಿಸಿ, ನಮ್ಮ ಅಕೌಂಟ್ ಗೆ 5 ಸಾವಿರ ರೂಗಳನ್ನು ಒದಗಿಸಿದ್ದಾರೆ. ಅವರಿಗೆ ಕೃತಜ್ಞತೆಗಳು. ಇದೊಂದು ಮಾದರಿ ಕಾರ್ಯ ಎನ್ನುತ್ತಾರೆ ಅರ್ಚಕ ಸಹಾಯಕ ರಾಘವೇಂದ್ರ ಉಪಾಧ್ಯಾಯ.
ಕೊರೊನ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾದ ಬ್ರಾಹ್ಮಣ ಸಮಾಜದ 100ಕ್ಕೂ ಅಧಿಕ ಬಡ ಕುಟುಂಬಗಳ ಬ್ಯಾಂಕ್ ಖಾತೆಗೆ ನೇರವಾಗಿ 5000 ಸಾವಿರ ರೂಪಾಯಿಯನ್ನು ಉದ್ಯಮಿ ಎರಕಳ ರಘುನಾಥ ಸೋಮಯಾಜಿಯವರು ವೈಯಕ್ತಿಕವಾಗಿ ನೀಡಿರುತ್ತಾರೆ. ಅವರಿಗೆ ಬ್ರಾಹ್ಮಣ ಸಮಾಜ ಬಾಂದವರ ಪರವಾಗಿ ಅನಂತ ಧನ್ಯವಾದಗಳು ಎನ್ನುತ್ತಾರೆ ಶರತ್ ಕುಮಾರ್.ಬಿ.ಸಿ.ರೋಡ್
ಹೆಚ್ಚಿನ ಸುದ್ದಿಗಳಿಗೆ ಈ ವಾಟ್ಸಾಪ್ ಗುಂಪಿಗೆ ಸೇರಲು ಕ್ಲಿಕ್ ಮಾಡಿರಿ
Be the first to comment on "ಯಾವುದೇ ಪ್ರಚಾರ ಬಯಸದೆ ಅಕೌಂಟಿಗೆ 5 ಸಾವಿರ ರೂ ಹಾಕುವ ಮೂಲಕ ನೆರವು ನೀಡಿದರು"