ಕ್ಯಾಟಲ್ ಫೀಡ್ ಸಾಗಿಸುತ್ತಿದ್ದ ಲಾರಿ ಬ್ರೇಕ್ ವೈಫಲ್ಯದಿಂದ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಸಂಪೂರ್ಣ ಸುಟ್ಟು ಹೋದ ಘಟನೆ ಸಜೀಪಮುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರ್ನಬೈಲಿನಲ್ಲಿ ನಡೆದಿದೆ.
ಕಂದೂರಿನಿಂದ ಕ್ಯಾಟಲ್ ಫುಡ್ ಅನ್ನು ಪುತ್ತೂರು ಕಡೆಗೆ ಸಾಗಿಸುತ್ತಿದ್ದ ಲಾರಿ ಮಾರ್ನಬೈಲು ಇಳಿಜಾರು ತಲುಪುತ್ತಿದ್ದಂತೆಯೇ ಬ್ರೇಕ್ ವೈಫಲ್ಯಗೊಂಡಿತು ಎನ್ನಲಾಗಿದೆ. ಇದರಿಂದಾಗಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕ ಚಲಿಸಿ ಅಲ್ಲಿದ್ದ ವಿದ್ಯುತ್ ಕಂಬ ಹಾಗೂ ಮನೆಯೊಂದರ ಆವರಣಗೋಡೆಗೆ ಡಿಕ್ಕಿಯಾಗಿದೆ. ಈ ಸಂದರ್ಭವೇ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತು ಉರಿದಿರುವುದಾಗಿ ಪ್ರ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಲಾರಿ ಚಾಲಕ ಉಮೇಶ್ ಅವರಿಗೆ ಗಂಭೀರ ಗಾಯವಾಗಿದ್ದು ಕ್ಲೀನರ್ ರತನ್ ಅವರಿಗೂ ಗಾಯವಾಗಿದೆ.
ಲಾರಿ ಉರಿಯುತ್ತಿದ್ದಂತೆಯೇ ಇಬ್ಬರು ಲಾರಿಯಿಂದ ಜಿಗಿದಿದ್ದು ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಅಗ್ನಿಶಾಮಕದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಆದರೆ ಅದಾಗಲೇ ಲಾರಿ ಭಾಗಶಃ ಸುಟ್ಟು ಹೋಗಿದೆ. ಬಂಟ್ವಾಳ ನಗರ ಠಾಣಾ ಎಸೈ, ಟ್ರಾಫಿಕ್ ಎಸೈ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾರಿಯಲ್ಲಿದ್ದ ಆಹಾರವನ್ನು ಲಾರಿಯಿಂದ ತೆರವುಗೊಳಿಸಲು ಹಾಗೂ ಮುರಿದು ಬಿದ್ದ ವಿದ್ಯುತ್ ಕಂಬ ಸ್ಥಳಾಂತರಿಸಲು ಸ್ಥಳೀಯರು ನೆರವಾದರು.
Be the first to comment on "ಕ್ಯಾಟಲ್ ಫೀಡ್ ಸಾಗಾಟ ಲಾರಿ ಬ್ರೇಕ್ ವೈಫಲ್ಯ: ಕಂಬಕ್ಕೆ ಡಿಕ್ಕಿಯಾಗಿ ಅಗ್ನಿಅವಘಡ"