ಬಂಟ್ವಾಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕಕಾರಿ ಎಂದಿರುವ ಮಾಜಿ ಸಚಿವ ಬಿ.ರಮಾನಾಥ ರೈ, ಈ ಕುರಿತು ಸಮುದಾಯ ಪರೀಕ್ಷೆ ಅಗತ್ಯವಿದೆ. ಲಾಕ್ ಡೌನ್ ಮಾತ್ರವಷ್ಟೇ ಇದಕ್ಕೆ ಪರಿಹಾರವಲ್ಲ, ರೋಗ ಪತ್ತೆಹಚ್ಚಲು ಇದೀಗ ರ್ಯಾಪಿಡ್ ಟೆಸ್ಟ್ ಗಳನ್ನು ನಡೆಸಬೇಕಾಗುತ್ತದೆ ಎಂದು ಸಲಹೆ ನೀಡಿದರು.
ಬಿ.ಸಿ.ರೋಡಿನಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಪಾಸಣೆ ಮಾಡುವ ಕಿಟ್ ಗಳ ಬಗ್ಗೆ ಸಂಶಯ ಬಂದಿರುವುದು ಆತಂಕಕಾರಿ, ರಾಪಿಡ್ ಟೆಸ್ಟಿಂಗ್ ಆಗಬೇಕು, ಸಮುದಾಯಕ್ಕೆ ಹರಡದಂತೆ ಮುತುವರ್ಜಿ ವಹಿಸಬೇಕು ಎಂದು ಹೇಳಿದರು.,
ಬಂಟ್ವಾಳ ಪೇಟೆ ಸೀಲ್ ಡೌನ್ ವ್ಯಾಪ್ತಿಯಲ್ಲಿ ಇರುವ ರಾಷ್ಟ್ರೀಕೃತ ಬ್ಯಾಂಕುಗಳ ವ್ಯವಹಾರವನ್ನು ಬೇರೆಡೆಗೆ ಮಾಡುವಂತೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ ಅವರು, ಕೇಂದ್ರ ಸರಕಾರ ಘೋಷಿಸಿದ ಪಡಿತರವನ್ನು ಶೀಘ್ರ ವಿತರಿಸುವಂತೆ ಒತ್ತಾಯಿಸಿದರು. ಕೇರಳದಲ್ಲಿ ಪಡಿತರದಲ್ಲಿ ದಿನಸಿ ವಸ್ತು, ತರಕಾರಿಗಳನ್ನು ನೀಡುತ್ತಿದ್ದು, ಇಲ್ಲೂ ಅದೇ ಮಾದರಿಯನ್ನು ಅನುಸರಿಸುವಂತೆಸಲಹೆ ನೀಡಿದ ಅವರು, ಕೂಲಿ ಕಾರ್ಮಿಕರು ಇಲ್ಲಿ ನೋಂದಾವಣೆ ಆಗದವರೂ ಜಾಸ್ತಿ ಇದ್ದಾರೆ. ಹೀಗಾಗಿ ಜಿಲ್ಲೆಯ ಮಟ್ಟಿಗೆ ಸರಕಾರ ವಿಧಿಸಿರುವ ಕೆಲ ನಿಬಂಧನೆಗಳನ್ನು ಸಡಿಲಗೊಳಿಸಬೇಕು ಎಂದರು. ಪಂಚಾಯಿತಿಯನ್ನು ಕೇಂದ್ರೀಕರಿಸಿ ಗಂಜಿಕೇಂದ್ರ ಸ್ಥಾಪಿಸಿ ಬಡವರಿಗೆ ನೆರವಾಗಬೇಕು ಎಂದರು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಜತೆಗಿದ್ದರು.
Be the first to comment on "ಬಂಟ್ವಾಳದಲ್ಲಿ ಕೊರೊನಾ ಆತಂಕಕಾರಿ: ಸಮುದಾಯ ಪರೀಕ್ಷೆಗೆ ಆದ್ಯತೆ ನೀಡಿ"