- ದರಪಟ್ಟಿ ಇಲ್ಲದಿದ್ದರೆ ದಿನಸಿ ಅಂಗಡಿ ವಿರುದ್ಧ ಕ್ರಮ
- ಇತರ ಇಲಾಖೆ, ಶಾಸಕರೊಂದಿಗೆ ತಾಲೂಕು ಪಂಚಾಯತ್ ನಿಂದ ತಳಮಟ್ಟದಲ್ಲಿ ಕೆಲಸ
www.bantwalnews.com Editor: Harish Mambady
For Video Click Here:
ಬಂಟ್ವಾಳ ತಾಲೂಕಿನಲ್ಲಿ ಲಾಕ್ ಡೌನ್ 1.0 ಯಶಸ್ವಿಯಾಗಿದ್ದು, ಇದಕ್ಕೆ ತಾಲೂಕು ಮಟ್ಟದ ಎಲ್ಲ ಸ್ತರದ ಅಧಿಕಾರಿಗಳು ಜೀವದ ಹಂಗು ತೊರೆದು ಬದ್ಧತೆಯಿಂದ ಕೆಲಸ ಮಾಡಿದ್ದು ಕಾರಣ, ಈಗಾಗಲೇ ತಳಮಟ್ಟದಲ್ಲಿ ತಾಲೂಕು ಪಂಚಾಯತ್ ಗೆ ಸೇರಿದ ಸಿಬ್ಬಂದಿ ಉಳಿದ ಎಲ್ಲ ಇಲಾಖೆಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಿದ್ದು, ಜನರ ಸಂಪೂರ್ಣ ಸಹಕಾರವೂ ದೊರೆತಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ ಮತ್ತು ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ತಿಳಿಸಿದ್ದಾರೆ.
ಟಾಸ್ಕ್ ಫೋರ್ಸ್ ಗಳನ್ನು ಸಕ್ರಿಯವಾಗಿಟ್ಟುಕೊಂಡು, ಮೂರು ಶಾಸಕರೊಂದಿಗೆ ಸೇರಿ ಕೋವಿಡ್ 19 ನಿರ್ಮೂಲನೆ ಮಾಡಲು ಪಣ ತೊಟ್ಟಿದ್ದು, ಈವರೆಗೆ ಯಶಸ್ವಿಯಾಗಿದ್ದೇವೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಕೆ.ಚಂದ್ರಹಾಸ ಕರ್ಕೇರ ಹೇಳಿದರು.
ಬಂಟ್ವಾಳ ತಾಲೂಕಿನ 58 ಗ್ರಾಮಗಳಲ್ಲಿ 477 ಮಂದಿ ಕ್ವಾರಂಟೈನ್ ನಲ್ಲಿದ್ದರು. ಆರೋಗ್ಯ ಇಲಾಖೆ ಡಾ. ದೀಪಾ ಪ್ರಭು ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಟಾಸ್ಕ್ ಫೋರ್ಸ್ ಮೂಲಕ ಮೂರು ಶಾಸಕರಾದ ರಾಜೇಶ್ ನಾಯ್ಕ್, ಸಂಜೀವ ಮಠಂದೂರು ಮತ್ತು ಯು.ಟಿ.ಖಾದರ್ ಮಾರ್ಗದರ್ಶನದಲ್ಲಿ ಎಲ್ಲ ಇಲಾಖೆ ಸಹಕಾರದೊಂದಿಗೆ ಜನರ ಅಗತ್ಯಗಳ ಕುರಿತು ಗಮನಹರಿಸಿದ್ದೇವೆ ಎಂದವರು ಹೇಳಿದರು.
ತಾಲೂಕು ಪಂಚಾಯತ್ ವತಿಯಿಂದ ಗ್ರಾಮದ ಎಲ್ಲರಿಗೂ ಗ್ರಾಪಂ ಅಧ್ಯಕ್ಷರು ಒಗ್ಗಟ್ಟಾಗಿ ಮಾನಸಿಕವಾಗಿ ಹತ್ತಿರವಾಗಿದ್ದು ಕೆಲಸ ಮಾಡುತ್ತಿದ್ದಾರೆ, ಸರಳತೆಯಿಂದ ಜೀವನ ರೂಢಿಸಿಕೊಂಡು ಮುಂದಿನ ದಿನಗಳನ್ನು ಎದುರಿಸಬೇಕು ಎಂದು ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ ಹೇಳಿದರು.
ದರಪಟ್ಟಿಯಲ್ಲಿ ವ್ಯತ್ಯಾಸವಿದ್ದರೆ ಕ್ರಮ:
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮಾಹಿತಿ ನೀಡಿ, ತಾಲೂಕಿನ ಯಾವುದೇ ಸಮಸ್ಯೆಗಳು ಬಂದರೂ ನೇರವಾಗಿ ಸ್ಪಂದಿಸಲು ನಿರ್ಧರಿಸಲಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ದರಪಟ್ಟಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ದರಪಟ್ಟಿಯನ್ನು ಹಾಕಲು ಸೂಚಿಸಲಾಗಿದೆ. ಯಾರಾದರೂ ಅದನ್ನು ಉಲ್ಲಂಘಿಸಿದರೆ, ಅವರ ಲೈಸನ್ಸ್ ರದ್ದುಗೊಳಿಸಲು ಸೂಚಿಸಲಾಗಿದೆ. ಅಂಗಡಿಗಳಲ್ಲಿ ದಾಸ್ತಾನು ಕೊರತೆಯಾದರೆ ಮಾರ್ಕೆಟ್ ನಿಂದ ತರಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಸ್ಥಳೀಯ ಮಟ್ಟದಲ್ಲಿ ಎನ್.ಒ.ಸಿ. ಬೇಕು ಎಂದರೆ, ಪಂಚಾಯತ್ ನಲ್ಲಿ ಆಗುವ ಕೆಲಸಗಳನ್ನು ಮಾಡಲಾಗುತ್ತಿದ್ದು, ಸಾರ್ವಜನಿಕರು ಪರದಾಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕೂಲಿ ಕಾರ್ಮಿಕರಿಗೆ ನೆರವು:
ಕೂಲಿ ಕಾರ್ಮಿಕರಿಗೆ ಊಟ, ಆಹಾರ ಧಾನ್ಯ ವ್ಯವಸ್ಥೆ ಟಾಸ್ಕ್ ಫೋರ್ಸ್ ವತಿಯಿಂದ ಮಾಡಲಾಗಿದೆ. ವಲಸೆ ಬಂದ ಕೂಲಿ ಕಾರ್ಮಿಕರಿಗೆ ಬಡಗಬೆಳ್ಳೂರು, ಬೆಂಜನಪದವು, ಕಳ್ಳಿಗೆ, ಕೋಳ್ನಾಡು, ಸಾಲೆತ್ತೂರುನಲ್ಲಿರುವ ಕೂಲಿ ಕಾರ್ಮಿಕರು ಮತ್ತು ನಿರ್ಗತಿಕರಿಗೆ ಹಾಲಿನ ವ್ಯವಸ್ಥೆಯನ್ನು ಸರ್ಕಾರದಿಂದ ಮಾಡಲಾಗಿದೆ. ಅವರ ಬಳಿ ರೇಷನ್ ಕಾರ್ಡ್ ಇದ್ದರೆ, ಅದು ಅವರ ಬಳಿ ಇಲ್ಲದಿದ್ದರೂ ಹತ್ತಿರದ ನ್ಯಾಯಬೆಲೆ ಅಂಗಡಿಯಿಂದ ಆಹಾರ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು. ಗಡಿಪ್ರದೇಶಗಳಲ್ಲಿ ಎಲ್ಲ ಕಡೆಗಳಲ್ಲೂ ಬಂದ್ ಮಾಡಲಾಗಿದ್ದು, ಪಂಚಾಯತ್ ಸಿಬ್ಬಂದಿಗೆ ಸಮಸ್ಯೆಯಾದಾಗ ಪೊಲೀಸ್ ನೆರವನ್ನೂ ಪಡೆಯಲಾಗಿದೆ, ಸಮಸ್ಯೆಗಳು ಇದ್ದರೆ, ಟಾಸ್ಕ್ ಫೋರ್ಸ್ ಜೊತೆ ಚರ್ಚೆ ಮಾಡಿ ಯಾರಿಗೂ ತೊಂದರೆ ಆಗದಂತೆ ನಡೆಸಲಾಗುತ್ತಿದೆ ಎಂದರು.
Be the first to comment on "58 ಗ್ರಾಮಗಳಲ್ಲೂ ಟಾಸ್ಕ್ ಫೋರ್ಸ್ ಸಕ್ರಿಯ, ಸಂಘಟಿತ ಪ್ರಯತ್ನದಿಂದ ಲಾಕ್ ಡೌನ್ ಯಶಸ್ಸು"