- ತುಂಬೆ ಡ್ಯಾಂ ಪರಿಶೀಲನೆ ಬಳಿಕ ಮೇಯರ್ ದಿವಾಕರ್ ಪಾಂಡೇಶ್ವರ, ಕಮೀಷನರ್ ಅಜಿತ್ ಹೆಗ್ಡೆ ಅಭಿಪ್ರಾಯ
ಬಂಟ್ವಾಳನ್ಯೂಸ್ , ಸಂಪಾದಕ : ಹರೀಶ ಮಾಂಬಾಡಿ
ಮಂಗಳೂರಿಗೆ ನೀರೊದಗಿಸುವ ಬಂಟ್ವಾಳದ ತುಂಬೆ ವೆಂಟೆಡ್ ಡ್ಯಾಂನಲ್ಲಿ 6 ಮೀಟರ್ ನೀರು ಸಂಗ್ರಹವಾಗಿದ್ದು, ಕಳೆದ ಎರಡು ದಿನಗಳಿಂದ ಶಂಭೂರು ಎಎಂಆರ್ ಡ್ಯಾಂನಿಂದ ನೀರು ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುಮಾರು 50 ದಿನಗಳಿಗೆ ಬೇಕಾಗುವ ನೀರು ಇಲ್ಲಿ ಸಂಗ್ರಹಗೊಂಡಿದ್ದು, ಈ ಬಾರಿ ಜನತೆ ನೀರಿನ ಸಂಕಷ್ಟ ಅನುಭವಿಸಬೇಕಾಗಿಲ್ಲ, ರೇಷನಿಂಗ್ ಮಾಡುವ ಅವಶ್ಯಕತೆಯೂ ಇರುವುದಿಲ್ಲ ಎಂದು ಮಂಗಳೂರು ಮೇಯರ್ ದಿವಾಕರ ಪಾಂಡೇಶ್ವರ ಹೇಳಿದ್ದಾರೆ.
ಗುರುವಾರ ತುಂಬೆ ವೆಂಟೆಡ್ ಡ್ಯಾಂಗೆ ಭೇಟಿ ನೀಡಿ ನೀರಿನ ಮಟ್ಟವನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವರ್ಷ ಮಂಗಳೂರಿನ ಜನತೆಗೆ ನೀರಿನ ಅಭಾವ ಬರುವುದಿಲ್ಲ. ಕಳೆದ ವರ್ಷ ಈ ಸಮಯಕ್ಕೆ ರೇಷನಿಂಗ್ ವ್ಯವಸ್ಥೆಯ ಮೂಲಕ ಎರಡು ದಿನಕ್ಕೊಮ್ಮೆ ನೀರು ನೀಡಲಾಗುತ್ತಿತ್ತು ಎಂದು ತಿಳಿಸಿದರು. ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಮಾತನಾಡಿ ಜೂನ್‌ಗಿಂತ ಮೊದಲು ಮಳೆ ಬಂದರೆ ಯಥೇಚ್ಛವಾಗಿ ನೀರು ಸಿಗಲಿದೆ. ನೀರಿನ ಲಭ್ಯತೆಯ ಬಗ್ಗೆ ಜನರಿಗೆ ಆತಂಕ ಬೇಡ ಎಂದರು. ಸಹಾಯಕ ಕಮೀಷನರ್ ಡಾ. ಸಂತೋಷ್, ಇಇ ರವಿಶಂಕರ್, ಎಇಇ ನರೇಶ್ ಶೆಣೈ, ಜೆಇ ರಿಚ್ಚಾರ್ಡ್ ಮೊದಲಾದವರಿದ್ದರು.
Be the first to comment on "ಮಂಗಳೂರು ಮಹಾನಗರಕ್ಕೆ ಈ ಬಾರಿ ನೀರಿನ ಕೊರತೆ ಇಲ್ಲ, ರೇಷನಿಂಗ್ ಅವಶ್ಯಕತೆ ಇಲ್ಲ"