- ಬಡವರು ಹಸಿವಿನಿಂದ ಸಾಯುವ ಪರಿಸ್ಥಿತಿ ನಿರ್ಮಾಣವಾಗಬಾರದು
ಲಾಕ್ ಡೌನ್ ಪಾಲನೆ ಸಂದರ್ಭ ಬಡವರು ಹಸಿವಿನಿಂದ ಸಾಯುವ ಪರಿಸ್ಥಿತಿ ನಿರ್ಮಾಣವಾಗಬಾರದು. ಕೇರಳದಲ್ಲಿ ಅಂಗನವಾಡಿ ಮೂಲಕ ಬಡವರಿಗೆ ಧರ್ಮಾರ್ಥ ನಿತ್ಯ ಪಡಿತರ ವಿತರಿಸುವಂತೆ ದ.ಕ.ಜಿಲ್ಲೆಯಲ್ಲೂ ಕ್ರಮ ಕೈಗೊಳ್ಳುವುದು ತುರ್ತು ಅಗತ್ಯ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಿ.ಸಿ.ರೋಡಿನಲ್ಲಿ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಂಗಳವಾರ ಮಾತನಾಡಿ, ಇಂದು ಕೊರೊನಾ ಜಾಗತಿಕವಾಗಿ ವ್ಯಾಪಿಸಿದ್ದು, ನಿಗ್ರಹಕ್ಕೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳಿಗೆ ನಮ್ಮ ಸಹಕಾರ ಇದೆ ಎಂದ ಅವರು, ಅಕ್ಕಿಯ ಜೊತೆಗೆ ಎಲ್ಲಾ ದಿನಬಳಕೆಯ ವಸ್ತುಗಳನ್ನು ಉಚಿತವಾಗಿ ಸರಕಾರ ಬಡವರ ಪ್ರತಿ ಮನೆಗೂ ಪಡಿತರ ವ್ಯವಸ್ಥೆ ಕಲ್ಪಿಸುವ ಕಾರ್ಯ ಶೀಘ್ರ ನಡೆಯಬೇಕು ಎಂದರು. ಗ್ರಾಮ ಪಂಚಾಯಿತಿಗಳನ್ನು ಕೇಂದ್ರೀಕರಿಸಿಕೊಂಡು ಜನರಿಗೆ ನೆರವಾಗಬೇಕು ಎಂದು ಸಲಹೆ ನೀಡಿದ ಅವರು, ಅತಿಥಿ ಕಾರ್ಮಿಕರಿಗೆ ಪಂಚಾಯಿತಿಯಲ್ಲಿ ಗಂಜಿಕೇಂದ್ರ ತೆರೆಯುವಂತೆ ಒತ್ತಾಯಿಸಿದರು.
ಮಂಗಳವಾರ ದಿನಸಿ ಸಾಮಾಗ್ರಿ ಖರೀದಿಗೆ ಅವಕಾಶ ನೀಡಲಾದ ಸಂದರ್ಭ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕಾರ್ಯ ನಿರೀಕ್ಷೆಯಂತೆ ನಡೆದಿಲ್ಲ, ಈ ಹಿನ್ನೆಲೆಯಲ್ಲಿ ಜನರ ಮನೆಗೇ ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದವರು ತಿಳಿಸಿದರು. ಪುರಸಭಾ ವ್ಯಾಪ್ತಿಯಲ್ಲೂ ಕಾರ್ಯಪಡೆ ರಚನೆ ಆಗಿಲ್ಲ ಎಂಬ ಮಾಹಿತಿ ಬಂದಿದ್ದು, ಸರ್ಕಾರದ ಸುತ್ತೋಲೆಗೆ ಅವರು ಕಾಯಬೇಕಾಗಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭಾ ಸದಸ್ಯ ಲುಕ್ಮಾನ್ ಉಪಸ್ಥಿತರಿದ್ದರು.
Be the first to comment on "ಹಸಿವು ನೀಗಿಸಲು ತುರ್ತು ಕ್ರಮ ಅಗತ್ಯ, ಕೇರಳದಂತೆ ಉಚಿತ ಪಡಿತರ ವಿತರಿಸಿ: ರಮಾನಾಥ ರೈ"