- ಕಲಾಪದಲ್ಲೂ ಪ್ರಸ್ತಾಪವಾಯ್ತು ತ್ಯಾಜ್ಯದ ವಿಚಾರ
ಬಂಟ್ವಾಳ ಪುರಸಭೆ ಸಜಿಪನಡು ಗ್ರಾಮದ ಕಂಚಿನಡ್ಕಪದವಿನ ಡಂಪಿಂಗ್ ಯಾರ್ಡ್ ನಲ್ಲಿ ಬುಧವಾರ ಹಾಕಿದ್ದ ತ್ಯಾಜ್ಯವನ್ನು ರಾತ್ರಿ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಬಂಟ್ವಾಳ ಪುರಸಭೆ ಸಹಾಯಕ ಕಮೀಷನರ್ ಆದೇಶದನ್ವಯ ಪೊಲೀಸ್ ಸಹಾಯದೊಂದಿಗೆ ಸಜಿಪನಡು ಕಂಚಿನಡ್ಕಪದವಿನ ತನ್ನ ಸ್ವಾದೀನದಲ್ಲಿದ್ದ ಜಾಗದಲ್ಲಿ ತ್ಯಾಜ್ಯ ವಿಲೇವಾರಿಯನ್ನು ಬುಧವಾರ ಮಾಡಿದ್ದು, ಈ ಸಂದರ್ಭ ಸ್ಥಳೀಯರ ವಿರೋಧ ವ್ಯಕ್ತವಾಗಿತ್ತು. ರಾತ್ರಿ ಯಾರೋ ಕಿಡಿಗೇಡಿಗಳು ತ್ಯಾಜ್ಯದ ಮೂಟೆಗಳಿಗೆ ಬೆಂಕಿ ಹಚ್ಚಿದ್ದಾಗಿ ಪುರಸಭೆ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದೆ.
ವಿಧಾನಸೌಧದಲ್ಲಿ ತ್ಯಾಜ್ಯ ಸದ್ದು: ಈ ಮಧ್ಯೆ ತ್ಯಾಜ್ಯ ವಿಲೇವಾರಿಯನ್ನು ಬೇರೆಡೆಗೆ ವರ್ಗಾಯಿಸುವಂತೆ ವಿಧಾನಸಭೆ ಅಧಿವೇಶನದಲ್ಲಿ ಮಂಗಳೂರು ಶಾಸಕ ಯು.ಟಿ.ಖಾದರ್ ಹೇಳಿದರೆ, ಅದೇ ಜಾಗದಲ್ಲಿ ಹಾಕದೆ ಬೇರೆಲ್ಲಿ ಹಾಕುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಪ್ರಶ್ನಿಸಿದ ಘಟನೆಯೂ ನಡೆಯಿತು.
ನನ್ನ ಕ್ಷೇತ್ರದ ಸಜಿಪನಡು ಗ್ರಾಮಕ್ಕೆ ಬಂಟ್ವಾಳ ಪುರಸಭೆಯಿಂದ ಕಸ ವಿಲೇವಾರಿ ವಾಹನ ತರುವಾಗ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪೊಲೀಸ್ ಭದ್ರತೆಯಲ್ಲಿ ವಿಲೇವಾರಿ ಮಾಡಿದ್ದಾರೆ ಅಲ್ಲಿಗೆ ಹಾಕುವ ಕಸವನ್ನು ತಕ್ಷಣ ನಿಲ್ಲಿಸಲು ಆದೇಶ ಮಾಡಬೇಕು. ಗ್ರಾಪಂ ಸದಸ್ಯರನ್ನು ವಿಶ್ವಾಸಕ್ಕೆತೆಗೆದುಕೊಂಡು ಕಾರ್ಯ ಮಾಡಿರಿ ಎಂದು ಶಾಸಕ ಯು.ಟಿ.ಖಾದರ್ ಗುರುವಾರ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.
ಈ ಸಂದರ್ಭ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ಯು. ನಾಯ್ಕ್, ಕಂಚಿನಡ್ಕಪದವಿನ ಬಂಟ್ವಾಳ ಪುರಸಭೆಯ ಜಾಗದಲ್ಲಿ ತ್ಯಾಜ್ಯ ವಿಲೇವಾರಿಗೆ ಸದನ ಸಮಿತಿ, ಪರಿಸರ ಇಲಾಖೆ ಅನುಮತಿ ನೀಡಿದೆ, ಈ ವಿಷಯದಲ್ಲಿ ನಾನು ಮತ್ತು ಖಾದರ್ ಅವರು ಕುಳಿತು ಮಾತನಾಡಬಹುದು ಎಂದರು. ಈ ಸಂದರ್ಭ ತಾತ್ಕಾಲಿಕವಾಗಿ ನಿಲ್ಲಿಸಿ ಎಂದು ಖಾದರ್ ಹೇಳಿದರೆ, ಕಸವನ್ನು ಎಲ್ಲಿಗೆ ಹಾಕುವುದು ಎಂದು ನಾಯ್ಕ್ ಪ್ರಶ್ನಿಸಿದರು. ಇದೇ ವೇಳೆ ಉತ್ತರಿಸಿದ ಗೃಹಸಚಿವ ಬಸವರಾಜ ಬೊಮ್ಮಾಯಿ, ಕಸ ವಿಲೇವಾರಿ ಪುರಸಭೆಗೆ ಸಂಬಂಧಿಸಿದ್ದು, ಪೊಲೀಸ್ ರಕ್ಷಣೆ ಕೇಳಿದ ಕಾರಣ ಅದನ್ನು ಒದಗಿಸಿದ್ದೇವೆ ಎಂದರು. ರಾಜೇಶ್ ನಾಯ್ಕ್ ಮತ್ತು ಯು.ಟಿ.ಖಾದರ್ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
Be the first to comment on "ಪುರಸಭೆಯ ತ್ಯಾಜ್ಯಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು"