ಕ್ರೈಸ್ತ ಶಿಕ್ಷಣ ನಮ್ಮ ಬದುಕಿಗೆ ಸುಂದರವಾದ ರೂಪ ನೀಡುತ್ತದೆ, ಇದರ ಮಹತ್ವವನ್ನು ಅರಿಯುವುದರ ಜೊತೆಗೆ ಸಮಾಜದಲ್ಲಿ ಮಾದರಿ ಪ್ರಜೆಗಳಾಗಿ ಬಾಳ್ವೆ ನಡೆಸಬೇಕು ಎಂದು ಸೂರಿಕುಮೇರು ಬರಿಮಾರ್ ಸೈಂಟ್ ಜೋಸೆಫ್ ಚರ್ಚಿನ ಧರ್ಮಗುರು ವಂ.ಫಾದರ್ ಗ್ರೆಗರಿ ಪಿರೇರಾ ಹೇಳಿದರು.
ಸೂರಿಕುಮೇರು ವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಭಾನುವಾರ ದಿವ್ಯ ಬಲಿಪೂಜೆಯನ್ನು ನೆರವೇರಿಸಿದ ಬಳಿಕ ಕ್ರೈಸ್ತ ಶಿಕ್ಷಣ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದರು. ಚರ್ಚ್ ನ ಪಾಲನಾ ಮಂಡಳಿ ಉಪಾಧ್ಯಕ್ಷ ಎಲಿಯಾಸ್ ಪಿರೇರಾ ಮಾತನಾಡಿ, ಕ್ರೈಸ್ತ ಶಿಕ್ಷಣ ಸಾರಿ ಹೇಳುವ ಎಲ್ಲಾ ಸಂಸ್ಕಾರಗಳನ್ನು ಅಳವಡಿಸುವುದರ ಜೊತೆಗೆ ತಂದೆತಾಯಿಗೆ ವಿಧೇಯರಾಗಿ ಒಳ್ಳೆಯ ಜೀವನ ನಡೆಸುವಂತೆ ಕರೆ ನೀಡಿದರು. ಸಿಸ್ಟರ್ ನ್ಯಾನ್ಸಿ, ಮೇರಿ ಡಿ’ಸೋಜ, ಅನಿತಾ ಮಾರ್ಟೀಸ್, ಸ್ಟೀವನ್ ಪಾಯ್ಸ್, ಲೂಸಿ ಡಿಕುನ್ಹಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಶಿಷ್ಟವಾಗಿ ಆಯೋಜನೆಗೊಂಡಿದ್ದ ಕ್ರೈಸ್ತ ಶಿಕ್ಷಣ ದಿನಾಚರಣೆಯ ಅಂಗವಾಗಿ ಬಲಿಪೂಜೆಯ ಸಂದರ್ಭ ವಿದ್ಯಾರ್ಥಿಗಳು ಕ್ರೈಸ್ತ ಶಿಕ್ಷಣ ಪಡೆದಿರುವುದಕ್ಕೆ ಕೃತಜ್ಞತಾಪೂರ್ವಕವಾಗಿ ದೇವರಿಗೆ ಕಾಣಿಕೆಯನ್ನು ಅರ್ಪಿಸಿದರು. ಬಳಿಕ ವಿದ್ಯಾರ್ಥಿಗಳು ಬೈಬಲ್ ನಿಂದ ಆಯ್ದ ವಿಚಾರಗಳಿಗೆ ಸಂಬಂಧಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದರು. ಇದೇ ಸಂದರ್ಭ ದಲ್ಲಿ ಚರ್ಚ್ ನಲ್ಲಿ ಕ್ರೈಸ್ತ ಶಿಕ್ಷಣ ಪರೀಕ್ಷೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ತರಗತಿವಾರು ಸನ್ಮಾನಿಸಲಾಯಿತು. ಕ್ರೈಸ್ತ ಶಿಕ್ಷಣದಲ್ಲಿ ಚಿನ್ನದ ಪದಕ ಪಡೆದ ಜೆನಿಷ್ ಮಾರ್ಟಿಸ್ ಹಾಗೂ ಮನೆಮಂದಿಯನ್ನು ಗೌರವಿಸಲಾಯಿತು. ಕರ್ನಾಟಕ ಮಂಗಳೂರು ಕೊಂಕಣಿ ಸಂಸ್ಥೆಯಿಂದ ಆಯೋಜಿಸಿದ್ದ ಡಿಪ್ಲೊಮಾ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಕಿ ಐಡಾ ಲಸ್ರಾದೊ ಪ್ರಮಾಣಪತ್ರ ನೀಡಿ ಗೌರವಿಸಿದರು. ಕ್ರೈಸ್ತ ಶಿಕ್ಷಣವನ್ನು ಬೋಧಿಸುತ್ತಿರುವ ಎಲ್ಲಾ ಶಿಕ್ಷಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ರೋಷನ್ ಬೊನಿಫಾಸ್ ಮಾರ್ಟಿಸ್ ಹಾಗೂ ಮೆಲಿಟಾ ಪಾಯ್ಸ್ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಸೂರಿಕುಮೇರ್ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಕ್ರೈಸ್ತ ಶಿಕ್ಷಣ ದಿನಾಚರಣೆ"