ಸಾರ್ವಜನಿಕ ಹಿಂದು ರುದ್ರಭೂಮಿ ಮಾ.1ರಂದು ನರಿಕೊಂಬಿನಲ್ಲಿ ಲೋಕಾರ್ಪಣೆ ಕುರಿತು ಸಮಿತಿ ಅಧ್ಯಕ್ಷ ಯಶೋಧರ ಕರ್ಬೆಟ್ಟು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಕೊಂಗಲಪಾದೆ ಎಂಬಲ್ಲಿ ನರಿಕೊಂಬಿನ ಸಾರ್ವಜನಿಕ ಹಿಂದು ರುದ್ರಭೂಮಿ (ದೇವಭೂಮಿ) ಸಮಿತಿ ವತಿಯಿಂದ ನಿರ್ಮಿಸಲಾದ ಸಾರ್ವಜನಿಕ ಹಿಂದು ರುದ್ರಭೂಮಿಯ ಲೋಕಾರ್ಪಣೆ ಕಾರ್ಯ ಮಾರ್ಚ್ 1ರಂದು ನಡೆಯಲಿದೆ.
ಸುಮಾರು 40 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ಸಾರ್ವಜನಿಕ ಹಿಂದು ರುದ್ರಭೂಮಿಯನ್ನು ಮಾ.1ರಂದು ಬೆಳಗ್ಗೆ 9.30ಕ್ಕೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಲೋಕಾರ್ಪಣೆ ಮಾಡುವರು ಎಂದು ರುದ್ರಭೂಮಿ ಸಮಿತಿ ಅಧ್ಯಕ್ಷ, ನರಿಕೊಂಬು ಗ್ರಾಪಂ ಅಧ್ಯಕ್ಷ ಯಶೋಧರ ಕರ್ಬೆಟ್ಟು ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಭಾ ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕ್ರೀಡಾಕೂಟಕ್ಕೆ ಚಾಲನೆ ನೀಡುವರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದವರು ಹೇಳಿದರು. ಸಂಜೆ ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದ್ದು, ಸಂಜೆ ಸಾಂಸ್ಕೃತಿಕ ವೈವಿಧ್ಯವೂ ಇರಲಿದೆ. ರಾತ್ರಿ 7 ಗಂಟೆಗೆ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಸತ್ಯ ಹರಿಶ್ಚಂದ್ರ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಮಾ.2ರಂದು ಸಂಜೆ 7.30ರಿಂದ ಇಲ್ಲಿನ ಕ್ರೀಡಾಂಗಣದಲ್ಲಿ ಅಂತರ್ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ನಡೆಯಲಿದೆ. ಶ್ಯಾಂ ಪ್ರಸಾದ್ ಮುಖರ್ಜಿ ಬಲಿದಾನ್ ಟ್ರೋಫಿ ಹೆಸರಲ್ಲಿ ದ.ಕ.ಜಿಲ್ಲಾ ಅಮೆಚೂರ್ ಹಾಗೂ ಬಂಟ್ವಾಳ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಯೋಗದೊಂದಿಗೆ ನಡೆಯುವ ಕಬಡ್ಡಿ ಪಂದ್ಯಾಟವನ್ನು ಬಿಜೆಪಿ ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಯಡಿಯೂರಪ್ಪ ಉದ್ಘಾಟಿಸುವರು. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಸಹಿತ ಪ್ರಮುಖರು ಭಾಗವಹಿಸುವರು. ಈ ಸಂದರ್ಭ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ಇರಲಿವೆ ಎಂದು ಯಶೋಧರ ಕರ್ಬೆಟ್ಟು ಹೇಳಿದರು.
ರುದ್ರಭೂಮಿಯಲ್ಲಿ ಎರಡು ಚಿತಾಗಾರ ಸಹಿತ ಕಟ್ಟಿಗೆ ದಾಸ್ತಾನು ಕೊಠಡಿ, ಶೆಡ್, ಇಂಟರ್ ಲಾಕ್ ಅಳವಡಿಕೆ, ಸ್ನಾನಗೃಹ ಮತ್ತು ಶೌಚಾಲಯ ಇದೆ. ಒಂದು ಎಕರೆ ಜಮೀನಿನಲ್ಲಿ ಕ್ರೀಡಾಂಗಣ, ಬಯಲು ರಂಗಮಂದಿರ ಮತ್ತು ವಾಹನ ಪಾರ್ಕಿಂಗ್ ವ್ಯವಸ್ಥೆ ಇದೆ. ಸುಮಾರು 12 ಅಡಿ ಎತ್ತರಕ್ಕೆ ತ್ರಿಶೂಲಧಾರಿ ಶಿವನ ವಿಗ್ರಹ ನಿರ್ಮಿಸಲಾಗಿದ್ದು, 26 ಅಡಿ ಎತ್ತರದ ತ್ರಿಶೂಲವನ್ನು ಹೊಂದಾಣಿಸಲಾಗಿದೆ. ಎದುರು ಆಕರ್ಷಕ ಹೂದೋಟ ಇದೆ ಎಂದರು ಸುದ್ದಿಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ಬಿ.ರಘು ಸಪಲ್ಯ, ಪ್ರಮುಖರಾದ ಕಿಶೋರ್ ಶೆಟ್ಟಿ, ಪ್ರೇಮನಾಥ ಶೆಟ್ಟಿ, ವಸಂತ ಭೀಮಗದ್ದೆ, ಸುರೇಶ ಕೋಟ್ಯಾನ್ ಇದ್ದರು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ 9448548127
Be the first to comment on "ಸಾರ್ವಜನಿಕ ಹಿಂದು ರುದ್ರಭೂಮಿ: ಮಾ.1ರಂದು ನರಿಕೊಂಬಿನಲ್ಲಿ ಲೋಕಾರ್ಪಣೆ"