- ಕೃಷಿಕನಿಗೂ ಲಾಭ, ಗ್ರಾಹಕನಿಗೂ ನಷ್ಟವಿಲ್ಲ
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ 9448548127
ಮಾರ್ಕೆಟ್ ನಿಂದ ಖರೀದಿ ಮಾಡುವ ಬದಲು ಮನೆಬಾಗಿಲಿಗೇ ತರಕಾರಿ ದೊರಕುವ ಕಾಲ ಹೈಟೆಕ್ ಸಿಟಿಗಳಲ್ಲಿ ಬಂದು ವರ್ಷಗಳಾಯಿತು. ಈಗ ನಮ್ಮೂರಿನ ತಾಜಾ ಉತ್ಪನ್ನಗಳು, ನಮ್ಮೂರಲ್ಲೇ ದೊರಕುವ ಕಾಲ ಬಂದಿದೆ. ಅದೂ ನೇರ ರೈತರಿಂದಲೇ. ಮಧ್ಯವರ್ತಿಗಳ ಕಾಟ ಇಲ್ಲಿಲ್ಲ. ಹೇಗೆ ಹುಡುಕುವುದು ಗೊತ್ತಾ, ಇಲ್ಲಿ ನೋಡಿ.
ಇವರು ಲೋಕಲ್ ಫಾರ್ಮರ್ಸ್. ಅಂದರೆ ಸ್ಥಳೀಯ ಕೃಷಿಕರು ಎಂದರ್ಥ. ಸುಮಾರು 70ರಷ್ಟು ಕೃಷಿಕರ ನೆಟ್ವರ್ಕ್ ಇಲ್ಲಿದೆ. ಮೊದಲೇ ಹೇಳಿದಂತೆ www.localfarmers.in ಕ್ಲಿಕ್ ಮಾಡಿದರೆ ಕೃಷಿಕರ ಹೆಸರು, ಅವರ ಜಾಗ, ಅಲ್ಲಿ ಬೆಳೆಯುವ ವಸ್ತುಗಳ ವಿವರಗಳು ದೊರಕುತ್ತವೆ. ನೀವು ದೇಸಿ ತುಪ್ಪ ಪಡೆದುಕೊಳ್ಳಬೇಕೇ, ನಿಮಗೆ ಇಷ್ಟವೆನಿಸಿದ ಕೃಷಿಕರನ್ನು ಆಯ್ಕೆ ಮಾಡಿ ಪಡೆಯಬಹುದು. ಹೀಗೆ ಲೋಕಲ್ ಫಾರ್ಮರ್ಸ್ ಆನ್ ಲೈನ್ ಹುಡುಕಾಟ ಹಲವು ಸಾಧ್ಯತೆಗಳನ್ನು ತೋರಿಸಿದರೆ, ವಾರದ ಎಲ್ಲ ದಿನಗಳಲ್ಲೂ ಈ ತಂಡ ಮಂಗಳೂರಿನ ಇನ್ ಫಾಸಿಸ್, ಎಂಆರ್ ಪಿಎಲ್ ಸಮೀಪ, ಬಿ.ಸಿ.ರೋಡ್ ಹೀಗೆ ನಾನಾ ಕಡೆಗಳಲ್ಲಿ ಹೊರಾಂಗಣ ಮಾರುಕಟ್ಟೆಯನ್ನೂ ಕಲ್ಪಿಸುತ್ತದೆ. ಕೃಷಿ ಮೇಳಗಳಲ್ಲಿ ಇವರ ಸ್ಟಾಲ್ ಇರುತ್ತದೆ. ಉದ್ದೇಶ ಇಷ್ಟೇ ಬೆಳೆಯುವಾತನಿಗೆ ನ್ಯಾಯೋಚಿತ ಬೆಲೆಯಲ್ಲಿ ಮಾರುಕಟ್ಟೆ ದೊರಕಬೇಕು. ಅದನ್ನು ಈ ತಂಡ ಕಲ್ಪಿಸುತ್ತದೆ.
ಮೂಲತಃ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಬಂಟ್ವಾಳ ತಾಲೂಕಿನ ಬೊಂಡಾಲದ ಪ್ರಗತಿಪರ ಕೃಷಿಕ ಯತೀಶ್ ಶೆಟ್ಟಿ ಇದರ ರೂವಾರಿ. ಇವರಿಗೆ ಸಾಥ್ ನೀಡಿದವರು ಸ್ನೇಹಿತರಾದ ಶ್ರೀಹರಿಪ್ರಸಾದ್, ರಂಜಿತ್. ಜೊತೆಯಾಗಿ ಲೋಕಲ್ ಫಾರ್ಮರ್ಸ್ ಅನ್ನು ಕೊಂಡೊಯ್ಯುತ್ತಿರುವವರು ರಕ್ಷಿತಾ, ಗಣೇಶ್ ಶೆಣೈ, ಈಶ್ವರ್. ಇದಕ್ಕೊಂದು app ಅನ್ನು ಸೃಷ್ಟಿಸಿ ತಂತ್ರಜ್ಞಾನದಲ್ಲಿ ಕೃಷಿಕರನ್ನು ಬೆಸೆಯುತ್ತಿರುವವರು ರಜತ್ ಶೆಟ್ಟಿ. ಬಿ.ಸಿ.ರೋಡಿನ ಸೋಮಯಾಜಿ ಆಸ್ಪತ್ರೆ ಸಮೀಪ ಇರುವ ಬ್ರಾಹ್ಮಣ ಪರಿಷತ್ ಕಟ್ಟಡದ ನೆಲಮಹಡಿಯಲ್ಲಿ ಲೋಕಲ್ ಫಾರ್ಮರ್ಸ್ ಕಚೇರಿ ಇದೆ. ವಿಶೇಷವೆಂದರೆ ಸುಮಾರು ಎರಡು ವರ್ಷಗಳ ಅವಧಿಯಲ್ಲಿ ಒಟ್ಟುಗೂಡಿದ ನಾಲ್ಕೈದು ಜನರ ತಂಡದ ಈ ಪ್ರಯತ್ನದಿಂದ 70ಕ್ಕೂ ಅಧಿಕ ಸಾವಯವ ರೈತರು ಲಾಭ ಪಡೆಯುತ್ತಿದ್ದಾರೆ. ಸಾವಿರಕ್ಕೂ ಅಧಿಕ ಗ್ರಾಹಕರು ನ್ಯಾಯೋಚಿತ ಬೆಲೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳನ್ನು ಪಡೆದಿದ್ದಾರೆ.
ಕೃಷಿಕರು ಬೆಳೆದ ಉತ್ಪನ್ನಗಳನ್ನು ಮಳಿಗೆ ಕಚೇರಿಗೆ ತಂದು ಕೊಡುತ್ತಾರೆ. ಸಾಮಾನ್ಯವಾಗಿ ಕೊಬ್ಬರಿ ಎಣ್ಣೆಗೆ ಅಂದಾಜು 180 ರೂ ಬೆಳೆಗಾರನಿಗೆ ದೊರಕಿದರೆ, ಇಲ್ಲಿ ಅಂದಾಜು 280 ರಷ್ಟು ಬೆಳೆಗಾರನಿಗೆ ದೊರಕುತ್ತದೆ. ನಿರ್ವಹಣೆ ವೆಚ್ಚವನ್ನಷ್ಟೇ ಸೇರಿಸಿ ಗ್ರಾಹಕನಿಗೆ ಇದನ್ನು ಮಾರಾಟ ಮಾಡುತ್ತದೆ ಲೋಕಲ್ ಫಾರ್ಮರ್ಸ್ ತಂಡ. ಬೆಳೆಗಾರನಿಗೆ ಒಂದೂವರೆ ಪಟ್ಟು ಲಾಭ!!. ಖರೀದಿದಾರನಿಗೂ ಸಾವಯವ ಉತ್ಪನ್ನ ಪಡೆದ ಖುಷಿ.
ಲೋಕಲ್ ಫಾರ್ಮರ್ಸ್ ಗೆ ಬರುವ ಉತ್ಪನ್ನಗಳ ಗುಣಮಟ್ಟವನ್ನು ಖುದ್ದು ನಿರ್ವಹಣೆ ನಡೆಸುವವರ ತಂಡ ಪರಿಶೀಲಿಸುತ್ತದೆ. ಉತ್ಪನ್ನಗಳನ್ನು ಸ್ವೀಕರಿಸುವ ಮೊದಲು ಬೆಳೆಯುವ ಜಾಗ ಹಾಗೂ ಗುಣಮಟ್ಟವನ್ನು ತಜ್ಞರು ಪರಿಶೀಲಿಸಿದ ಬಳಿಕವಷ್ಟೇ ಮಾರಾಟಕ್ಕಾಗಿ ರೈತರಿಂದ ಪಡೆದುಕೊಳ್ಳಲಾಗುತ್ತದೆ.
Be the first to comment on "ಬಂದಿದ್ದಾರೆ localfarmers"