ಜೀರ್ಣೋದ್ಧಾರಗೊಳ್ಳುತ್ತಿರುವ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಗರ್ಭಗುಡಿ ನಿರ್ಮಾಣಕ್ಕೆ ಪಾದುಕಾನ್ಯಾಸ ಕಾರ್ಯಕ್ರಮ ಶುಕ್ರವಾರ ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ಅವರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರಗಿತು.
ಕ್ಷೇತ್ರದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಅವರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಅರ್ಚಕ ಜಯರಾಮ ಕಾರಂತ ಸಹಕರಿಸಿದರು.
ಮುಖ್ಯ ಅತಿಥಿ ಹಿರಿಯ ನ್ಯಾಯವಾದಿ ಅಶ್ವಿನಿಕುಮಾರ್ ರೈ ಅವರು ಮಾತನಾಡಿ, ಪ್ರಶಾಂತವಾದ ವಾತಾವರಣವನ್ನು ಹೊಂದಿ ದೇವಸ್ಥಾನಕ್ಕೆ ತಕ್ಕುದಾದ ಪರಿಸರವನ್ನು ಹೊಂದಿರುವ ಶರಭೇಶ್ವರ ಕ್ಷೇತ್ರವು ನಿರೀಕ್ಷಿತ ರೀತಿಯಲ್ಲಿ ಪುನರ್ ನಿರ್ಮಾಣಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಜಾತಿ, ರಾಜಕೀಯ ಭೇದಗಳನ್ನು ಮರೆತು ದೇವಸ್ಥಾನದ ಜೀರ್ಣೋದ್ಧಾರದಲ್ಲಿ ತೊಡಗಿರುವುದು ಶ್ಲಾಘನೀಯ ಕಾರ್ಯ ಎಂದರು.
ಜೀರ್ಣೋದ್ಧಾರ ಸಮಿತಿಯ ಸಂಚಾಲಕ ಡಾ.ಎಂ.ಮೋಹನ್ ಆಳ್ವ ಅವರು ಮಾತನಾಡಿ, ಪ್ರಸ್ತುತ ಪ್ರಾರಂಭಗೊಂಡಿರುವ ಜೀರ್ಣೋದ್ಧಾರ ಕಾರ್ಯದಲ್ಲಿ ಎಲ್ಲರೂ ಶಕ್ತಿಮೀರಿ ಪ್ರಯತ್ನಿಸ ಬೇಕಿದ್ದು, 2022ರ ಪ್ರಾರಂಭದಲ್ಲೇ ಬ್ರಹ್ಮಕಲಶ ನಡೆಸಲು ಸಿದ್ಧರಾಗಬೇಕಿದೆ ಎಂದರು.
ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳಿಗೆ ಸರಪಾಡಿ ಯುವಕ ಮಂಡಲದ ವತಿಯಿಂದ 15 ಸಾವಿರ ರೂ.ಗಳನ್ನು ಸಂಚಾಲಕರ ಮೂಲಕ ಕ್ಷೇತ್ರಕ್ಕೆ ಸಮರ್ಪಿಸಲಾಯಿತು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಂ.ಎಸ್.ಶೆಟ್ಟಿ ಸರಪಾಡಿ, ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಉದ್ಯಮಿ ಜಗನ್ನಾಥ ಶೆಟ್ಟಿ ಕಾವಳಕಟ್ಟೆ ವೇದಿಕೆಯಲ್ಲಿದ್ದರು.
ಕ್ಷೇತ್ರದ ಮೊಕ್ತೇಸರರು, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಭಕ್ತಾಧಿಗಳು ಪಾಲ್ಗೊಂಡಿದ್ದರು. ಜೀರ್ಣೋದ್ಧಾರ ಪ್ರಧಾನ ಕಾರ್ಯದರ್ಶಿ ನಾರಾಯಣ ಶೆಟ್ಟಿ ಎಚ್. ವಂದಿಸಿದರು. ಆರ್ಥಿಕ ಸಮಿತಿ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಜೀರ್ಣೋದ್ಧಾರಗೊಳ್ಳುತ್ತಿರುವ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಗರ್ಭಗುಡಿ ನಿರ್ಮಾಣಕ್ಕೆ ಪಾದುಕಾನ್ಯಾಸ"