ಸಾರ್ವಜನಿಕರ ಸಂಪರ್ಕದ ಪ್ರಮುಖ ಕೊಂಡಿಯಾಗಿದ್ದ ಬಂಟ್ವಾಳ ವಿಭಾಗದ ಬಿಎಸ್ಸೆನ್ನೆಲ್ ಸಂಸ್ಥೆಯಲ್ಲಿ ಇದೀಗ ಸ್ವಯಂ ನಿವೃತ್ತಿ ಪರ್ವ ನಡೆಯುತ್ತಿದ್ದು, ಸುಮಾರು 16 ಸಿಬ್ಬಂದಿ ಸ್ವಯಂನಿವೃತ್ತಿ ಪಡೆದುಕೊಂಡಿದ್ದಾರೆ. ಖಾಸಗಿ ನೆಟ್ ವರ್ಕ್ ಭರಾಟೆಯ ನಡುವೆ ಹಲವು ತೊಡಕುಗಳ ಮಧ್ಯೆ ಕಾರ್ಯಾಚರಿಸುತ್ತಿರುವ ಸರಕಾರಿ ನೆಟ್ ವರ್ಕ್ ಗೆ ಸೀಮಿತ ಸಿಬ್ಬಂದಿಯಿಂದಾಗಿ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ ಎಂದು ಬಿ.ಸಿ.ರೋಡಿನ ಸರಕಾರಿ ನೌಕರರ ಸಂಘದ ಭವನದ ಸಭಾಂಗಣದಲ್ಲಿ ನಡೆದ ವಿದಾಯಕೂಟದಲ್ಲಿ ಮಾತನಾಡಿದ ಬಿ.ಎಸ್.ಎನ್.ಎಲ್. ನ ಸಹಾಯಕ ಜನರಲ್ ಮ್ಯಾನೇಜರ್ ಆನಂದ ನಾಯ್ಕ್ ಹೇಳಿದರು.
ಸುಮಾರು 3 ಸಾವಿರ ಸಂಪರ್ಕಗಳಿದ್ದ ಬಂಟ್ವಾಳದಲ್ಲೀಗ ಕೇವಲ 900 ಸಂಪರ್ಕಗಳಿವೆ. ಸ್ಟಾಫ್ ಗಳು ನಿವೃತ್ತ ಹೊಂದುತ್ತಿದ್ದಾರೆ, ಹೀಗಾಗಿ ಫೆಬ್ರವರಿ ತಿಂಗಳಲ್ಲಿ ಸಾರ್ವಜನಿಕ ಸೇವೆ ನೀಡುವುದು ದೊಡ್ಡ ಸವಾಲು ಎಂದವರು ಹೇಳಿದರು.
ಯಶೋಧಾ, ಭಾರತಿ ಡಿ.ಪೈ, ಪುಷ್ಪಾ ಕುಮಾರಿ, ಮೋಹನ, ಜೆ. ಪೂವಪ್ಪ ಕುಂಬಾರ, ಪರಶುರಾಮ, ಗಾಯತ್ರಿ ವಿ, ಜಾನ್ ಸಿರಿಲ್ ಡಿಸೋಜ, ಮೋಹನ ಎನ್, ಕೆ.ನಾಗರಾಜ ಭಟ್, ನಾರಾಯಣ ಕೆ, ಎನ್.ಪದ್ಮನಾಭ, ಪಿ.ಕೆ.ಜೋಯಿ, ರಾಜೇಂದ್ರ ನಂಬಿಯಾರ್, ಜಿ.ಹೊನ್ನಪ್ಪ, ಚಂದ್ರ ಅವರನ್ನು ಶಾಲು ಹೊದೆಸಿ, ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ಸನ್ಮಾನಿತರು, ಬಿಎಸ್ಸೆನ್ನೆಲ್ ಮತ್ತೆ ಲಾಭದತ್ತ ಸಾಗಲಿ, ಕನಿಷ್ಠ ಸೌಲಭ್ಯಗಳ ನಡುವೆಯೂ ಉತ್ತಮ ಸೇವೆ ಒದಗಿಸಲು ಪ್ರಯತ್ನಿಸಿದ್ದೇವೆ ಎಂದು ಹೇಳಿದರು. ಜೆಟಿಒ ಗಳಾದ ಸುದರ್ಶನ್, ಸುಧೀರ್ ಕುಮಾರ್ ಈ ಸಂದರ್ಭ ಉಪಸ್ಥಿತರಿದ್ದರು. ಸಿಬ್ಬಂದಿ ರಾಕೋಡಿ ಈಶ್ವರ ಭಟ್ ವಂದಿಸಿದರು. ದೇವದಾಸ್ ಕಾರ್ಯಕ್ರಮ ನಿರೂಪಿಸಿದರು.

Be the first to comment on "ಬಿಎಸ್ಎನ್ಎಲ್: ಬಂಟ್ವಾಳದಲ್ಲಿ 16 ಸಿಬ್ಬಂದಿ ಸ್ವಯಂನಿವೃತ್ತಿ, ವಿದಾಯಕೂಟ"