- ಆರೋಗ್ಯ ಇಲಾಖೆಯಿಂದ ನಿಗಾ, ಮುಂಜಾಗರೂಕತೆ ಕ್ರಮ ಪಾಲಿಸಲು ಸೂಚನೆ
ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್‍ಗೆ ಸಂಬಂಧಪಟ್ಟಂತೆ ಸಂಶಯಾಸ್ಪದ ಪ್ರಕರಣ ದಾಖಲಾದರೆ ತಕ್ಷಣ ವರದಿ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಸೆಲ್ವಮಣಿ ಆರ್ ಹೇಳಿದರು.
ಜಿಲ್ಲಾ ಪಂಚಾಯತ್ ಕಾನ್ಫೆರೆನ್ಸ್ ಹಾಲ್‍ನಲ್ಲಿ ಗುರುವಾರ ನಡೆದ ಕೊರೊನಾ ವೈರಸ್ ಕುರಿತು ದ.ಕ. ಜಿಲ್ಲೆಯ ಅಂತರ್ ಇಲಾಖಾ ಸಮನ್ವಯ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕೊರೊನಾ ವೈರಸ್ ಬಗ್ಗೆ ಜನರು ಭಯಭೀತರಾಗುವುದು ಬೇಡ, ಈ ರೋಗಕ್ಕೆ ಸಂಬಂಧಪಟ್ಟಂತೆ ನುರಿತ ವೈದ್ಯಕೀಯ ತಂಡ ಜನರಿಗೆ ಸರಿಯಾದ ಮಾಹಿತಿ ನೀಡಿ ಅರಿವು ಮೂಡಿಸಬೇಕು. ಸಂಶಯಾಸ್ಪದ ಪ್ರಕರಣ ದಾಖಲಾದರೆ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಇಲಾಖೆಗಳು ಎಲ್ಲಾ ಕಡೆ ಸೂಕ್ತ ನಿಗಾವಹಿಸಬೇಕು ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್ ಮಾತನಾಡಿ, ಈಗಾಗಲೇ ಹೆಚ್ಚಿನ ಜನಸಂಖ್ಯೆಯಿರುವ ಪ್ರದೇಶಗಳಾದ ವಿಮಾನ ನಿಲ್ದಾಣ, ರೈಲು ನಿಲ್ದಾಣ ಹಾಗೂ ನವ ಬಂದರು ಪ್ರದೇಶಗಳಲ್ಲಿ ಎಲ್.ಇ.ಡಿ. ಸ್ಕ್ರೀನ್ ಅಳವಡಿಸಲಾಗಿದ್ದು, ಆರೋಗ್ಯ ಇಲಾಖೆ ನಿಗಾ ವಹಿಸಲಾಗಿದೆ ಎಂದರು.
ತೀವ್ರ ಜ್ವರದ ಪ್ರಾರಂಭ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ ಹಾಗೂ ಭೇದಿ ಉಂಟಾಗುವುದು ಕೊರೊನಾ ಸೋಂಕಿನ ಮುಖ್ಯ ಲಕ್ಷಣಗಳಾಗಿದೆ. ಸಾಮಾನ್ಯ ಫ್ಲೂ ಹರಡುವ ರೀತಿಯಲ್ಲಿಯೇ ಕೊರೊನಾ ಹರಡುತ್ತದೆ ಹಾಗೂ ಸೋಂಕಿತರು ಕೆಮ್ಮಿದಾಗ – ಸೀನಿದಾಗ ಈ ವೈರಸ್‍ಗಳು ಹರಡುತ್ತವೆ. ವ್ಯಕ್ತಿಯ ಮೂಗು, ಗಂಟಲಿನ ಸ್ರಾವದ ಲೇಪನ ಮತ್ತು ರಕ್ತದ ಮಾದರಿಯನ್ನು ಪ್ರಯೋಗ ಶಾಲೆಯಲ್ಲಿನ ಪರೀಕ್ಷೆಗೆ ಒಳಪಡಿಸಿದಾಗ ಈ ಸೋಂಕನ್ನು ಪತ್ತೆ ಹಚ್ಚಬಹುವುದು. ಈ ರೋಗಕ್ಕೆ ಲಕ್ಷಣ ಆಧಾರಿತ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಮುಂಜಾಗರೂಕತಾ ಕ್ರಮಗಳು: ಕೆಮ್ಮುವಾಗ ಮತ್ತು ಸೀನುವಾಗ ಬಾಯಿಗೆ ಕರವಸ್ತ್ರ ಅಡ್ಡ ಹಿಡಿಯುವ ಮೂಲಕ ಮತ್ತು ಕೈಯನ್ನು ಚೆನ್ನಾಗಿ ತೊಳೆದು ಶುಚಿತ್ವದಲ್ಲಿ ಕಾಪಾಡುವುದರ ಜೊತೆಗೆ ಸರಳ ನೈರ್ಮಲ್ಯವನ್ನು ಅಭ್ಯಾಸ ಮಾಡಬೇಕು, ಕೆಮ್ಮು ನೆಗಡಿ ಇತ್ಯಾದಿ ಅನಾರೋಗ್ಯ ಹೊಂದಿರುವ ಜನರೊಂದಿಗೆ ನಿಕಟ ಸಂಪರ್ಕ ಹೊಂದಿಕೊಳ್ಳಬಾರದು, ಪ್ರಾಣಿಗಳ ಜೊತೆ ನೇರ ಸಂಪರ್ಕ ಹಾಗೂ ಬೇಯಿಸದ/ಕಚ್ಚಾ ಮಾಂಸ ಸೇವನೆಯನ್ನು ಮಾಡಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಭೆಯಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್ ಚಂದ್ರ ಕುಲಾಲ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಸಿಕಂದರ್ ಪಾಷಾ, ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಅಧೀಕ್ಷಕರು ಡಾ. ಜೆಸಿಂತ್ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Be the first to comment on "ಕೊರೊನಾ ವೈರಸ್: ಸಂಶಯಾಸ್ಪದ ಪ್ರಕರಣ ದಾಖಲಾದರೆ ತಕ್ಷಣ ವರದಿ ಮಾಡಿ – ZP CEO ಸೂಚನೆ"