- ಹರೀಶ ಮಾಂಬಾಡಿ
ನಮ್ಮ ಜೀವನಶೈಲಿ, ಇಂದಿನ ವ್ಯವಸ್ಥೆ, ಪೈಪೋಟಿಯಲ್ಲಿ ಒಬ್ಬರಿಗೊಬ್ಬರು ಕಾಲೆಳೆಯುವುದು ಸಹಜ ಎಂಬಂತೆ ಹಾಸುಹೊಕ್ಕಾಗಿರುವುದು ಪ್ರಸ್ತುತ ದಿನಗಳಲ್ಲಿ ಕಂಡುಬರುತ್ತಿರುವ ವಿಚಾರ. ಇದೇ ವೇಳೆ ಯಾರಿಗೂ ಮನುಷ್ಯ ಉಪಕಾರಕ್ಕಿಲ್ಲ ಎಂಬ ಮಾತುಗಳೂ ಆಗಾಗ್ಗ ಕೇಳಿಬರುತ್ತವೆ. ಅದರಲ್ಲೂ ಸೋಶಿಯಲ್ ಮೀಡಿಯಾ ಬಂದ ಮೇಲೆ ಸಮಾಜಸೇವೆ (ಸಮಾಜದ ಬಗ್ಗೆ ಕಾಳಜಿ) ವಹಿಸುವುದಕ್ಕಿಂತ ಹೆಚ್ಚಾಗಿ ಲೇವಡಿ, ಕಾಲೆಳೆಯುವುದಕ್ಕೆ ನಮ್ಮ ಜನರು ಜಾಸ್ತಿ ಹೊತ್ತು ಮೊಬೈಲ್ ನೋಡುತ್ತಾ ಕುಳಿತಿರುತ್ತಾರೆ ಎಂಬ ಮಾತಿದೆ.
ಇವತ್ತು ಫೇಸ್ ಬುಕ್ , ವಾಟ್ಸಾಪ್ ಮತ್ತು ಅಂಥದ್ದೇ ಜಗತ್ತಿನ ಅಪರಿಚಿತರನ್ನು ಸ್ನೇಹಿತರನ್ನಾಗಿ ಮಾಡುವ ಇನ್ಸ್ ಟಾಗ್ರಾಮ್, ಟ್ವಿಟ್ಟರ್ ಹಾಗೂ ಇನ್ನಿತರ ಸಮೂಹಸನ್ನಿಗಳು ನಮ್ಮನ್ನು ಎಷ್ಟು ಆವರಿಸಿದೆ ಎಂದರೆ ಮಾದಕ ದ್ರವ್ಯ ಸೇವಿಸಿ ಬಿದ್ದುಕೊಂಡವರಿಗೂ ಇವುಗಳಲ್ಲಿ ಮುಳುಗುವ ನಮಗೂ ವ್ಯತ್ಯಾಸವೇ ಇಲ್ಲ ಎಂಬಷ್ಟು ವ್ಯಾಪಿಸಿಕೊಂಡಿದೆ.
ನಮ್ಮಲ್ಲಿರುವ ಈ ಸೋಶಿಯಲ್ ಮೀಡಿಯಾಗಳು ಸೋಶಿಯಲ್ ಸರ್ವೀಸ್ ಗೆ ಎಷ್ಟು ಪ್ರೇರಣಾದಾಯಿಯಾಗಿದೆ? ಇದು ಚಿಂತನೆಗೆ ಅರ್ಹವಾದ ವಿಚಾರ. ಅಷ್ಟಕ್ಕೂ ಸೋಶಿಯಲ್ ಸರ್ವೀಸ್ ಎಂದರೇನು?
ಸಮಾಜಕ್ಕೆ ತಾನೇನಾದರೂ ಮಾಡಬೇಕು ಎಂದು ಹೊರಟವರು ಸುದ್ದಿಯಾಗುವುದು ಕಡಿಮೆ.
ಸಮಾಜಸೇವೆ ಮಾಡುತ್ತಿದ್ದೇವೆ ಎಂದು ಪ್ರಚಾರಕ್ಕಾಗಿಯೇ ಒಂದೇ ಕಾರ್ಯಕ್ರಮದ ನಾಲ್ಕೈದು ಫೊಟೋಗಳನ್ನು ಪತ್ರಿಕೆಗೆ ಬೇರೆ ಬೇರೆ ವಿಚಾರಗಳನ್ನು ಶೀರ್ಷಿಕೆಯಾಗಿ ಕೊಟ್ಟು ಕಳುಹಿಸುವ ವ್ಯಕ್ತಿಗಳೂ ನಮ್ಮೊಡನಿದ್ದಾರೆ. ಸಮಾಜಕ್ಕೆ ನಮ್ಮಿಂದ ಏನಾದರೂ ಉಪಕಾರವಾಗಬೇಕು ಎಂದು ಭಾವಿಸಿ ಸಮಾಜಸೇವೆ ಮಾಡುವವರೂ ಇದ್ದಾರೆ. ಹಾಗೆಯೇ ನಮ್ಮ ಕಿಸೆಯಿಂದಲೇ ಸಂಗ್ರಹವಾದ ಹಣವನ್ನು ಇನ್ನೊಬ್ಬನಿಗೆ ಕೊಟ್ಟು, ನೋಡಿ ನನ್ನಿಂದಲೇ ಸಾವಿರಾರು ಕೋಟಿ ರೂಪಾಯಿ ನಿಮ್ಮ ಉದ್ಧಾರಕ್ಕಾಗಿ ಕೊಡಲಾಯಿತು, ಸಂತ್ರಸ್ತ ವ್ಯಕ್ತಿ, ಪ್ರದೇಶಕ್ಕೆ ಸಾರ್ವಜನಿಕರಿಂದ ಸಂಗ್ರಹಗೊಂಡ ದುಡ್ಡನ್ನು ಅನುದಾನವೆಂದು ಘೋಷಣೆ ಮಾಡಿ ನನ್ನಿಂದಲೇ ಎಲ್ಲ ನಡೆಯಿತು ಎಂದು ಘೋಷಿಸಿಕೊಂಡು, ಹಿಂಬಾಲಕರಿಂದ ಉಘೇ, ಉಘೇ ಎಂಬ ಜಯಘೋಷಗಳು, ತುತ್ತೂರಿಗಳನ್ನು ಊದಿಸಿಕೊಳ್ಳುವ ಸಮಾಜಸೇವಕರೂ, ಪ್ರಜೆಗಳಿಗೆ ಸೇವೆ ಮಾಡುವ ಪೋಸು ಕೊಡುವವರೂ ನಮ್ಮೊಡನೆ ಇದ್ದಾರೆ ಎಂಬುದು ದುರಂತ.
ನಮ್ಮ ಕೈಲಾದಷ್ಟು ಸೇವೆ ಮಾಡೋಣ ಎಂಬ ಮಾತನ್ನು ಕೇಳುತ್ತೇವೆ. ಹೀಗೆ ಮಾಡುವವರನ್ನು ಸಮಾಜಸೇವಕರು ಎಂದೇನೂ ಹೇಳುವುದಿಲ್ಲ. ಇದು ನಮ್ಮ ಆತ್ಮತೃಪ್ತಿಗಾಗಿ ಮಾಡುವ ಕಾರ್ಯ, ಪ್ರಚಾರಕ್ಕಾಗಿಯೇನೂ ಅಲ್ಲ. ಆದರೆ ಇಂದಿನ ದಿನಮಾನದಲ್ಲಿ ಅರ್ಥವನ್ನು ಕಳೆದುಕೊಳ್ಳುತ್ತಿದೆಯೋ ಎಂಬ ಆತಂಕ ಮೂಡಿಸುವಂತೆ ಮಾಡುವ ಶಬ್ದ ಸಮಾಜಸೇವೆ. ಆದರೆ ಅಲ್ಲೊಂದು ಇಲ್ಲೊಂದು ನಿಸ್ವಾರ್ಥಿ ಸಮಾಜಸೇವಕರು ಈ ಶಬ್ದದ ಅರ್ಥ ಕೆಡದಂತೆ ಕಾರ್ಯವೆಸಗುತ್ತಿದ್ದಾರೆ.
ಸಮಾಜಸೇವೆ ಎಂದರೆ, ಭಿಕ್ಷೆ ಅಲ್ಲ. ಪ್ರಾಯಶ್ಚಿತ್ತಕ್ಕೆ ನೀಡುವ ದಾನವೂ ಅಲ್ಲ ಪ್ರತಿಫಲಾಪೇಕ್ಷೆಯನ್ನಿಟ್ಟುಕೊಂಡು ನಡೆಸುವ ವ್ಯವಹಾರವೂ ಅಲ್ಲ; ನ್ಯಾಯಸಮ್ಮತವಲ್ಲದ, ಧರ್ಮ ಸಮ್ಮತವಲ್ಲದ ಮಾರ್ಗದಿಂದ ಸಂಪಾದಿಸಿದ ಹಣದಿಂದ ಮಾಡುವ ಜನ ಸೇವೆಯೂ ಅಲ್ಲ. ಪ್ರತಿ ತಿಂಗಳು ಸಂಬಳ ತೆಗೆದುಕೊಂಡು ಮಾಡುವ ಕೆಲಸವೂ ಅಲ್ಲ. ಸ್ವಾರ್ಥ ಇಲ್ಲದೇ ತನ್ನವರ ಹೊರತಾಗಿ ಕಷ್ಟದಲ್ಲಿರುವ ಅನ್ಯರಿಗೆ ಮಾಡುವ ಸಹಾಯ. ಕಣ್ಣೀರು ಒರೆಸುವುದಕ್ಕಿಂತ ಕಣ್ಣೀರು ಹಾಕದಂತೆ ನೋಡಿಕೊಳ್ಳುವ ಸತ್ಕಾರ್ಯಗಳೇ ಸಮಾಜಸೇವೆ.
ಈಗ ಮೊದಲಿನ ವಿಚಾರಕ್ಕೆ ಬರೋಣ. ಸೋಶಿಯಲ್ ಮೀಡಿಯಾ ಮತ್ತು ಸೋಶಿಯಲ್ ಸರ್ವೀಸ್ ಎರಡಕ್ಕೆ ಸಾಮ್ಯತೆ ಇರುವುದು ಸೋಶಿಯಲ್. ಹೌದು. ಸೋಶಿಯಲ್ ಮೀಡಿಯಾಗಳಿಂದಲೂ ಸಮಾಜಸೇವೆ ಸಾಧ್ಯ ಎಂದು ನಿರೂಪಿಸುವ ಅನೇಕ ದೃಷ್ಟಾಂತಗಳು ನಮ್ಮ ಮುಂದಿವೆ ಎಂಬುದು ಸಮಾಧಾನಪಟ್ಟುಕೊಳ್ಳುವ ವಿಚಾರ. ಅನೇಕ ವಾಟ್ಸಾಪ್ ಗ್ರೂಪುಗಳು ಇಂದು ಪರಸ್ಪರ ದ್ವೇಷಕಾರುವ ಸಂದೇಶಗಳನ್ನು ಹಾಕುವುದರ ಜೊತೆಗೇ ರಕ್ತದಾನ, ನೆರವು, ಬಡತನದಲ್ಲಿರುವವರಿಗೆ ಸಹಾಯ ಮಾಡುವ ಸದುದ್ದೇಶದ ಸಂದೇಶಗಳನ್ನೂ ರವಾನಿಸುತ್ತದೆ. ಯಾರಾದರೂ ಕಷ್ಟದಲ್ಲಿದ್ದರೆ ಕೂಡಲೇ ಸಂದೇಶಗಳು ಹರಡುತ್ತವೆ. ಇದು ಪಾಸಿಟಿವ್ ವಿಚಾರಗಳು ಎಂಬುದು ನನ್ನ ಭಾವನೆ.
ಸಮಾಜಸೇವೆ ಎಂಬುದಕ್ಕೆ ವ್ಯಾಖ್ಯಾನವೇನು ಎಂದು ಸ್ನೇಹಿತರೊಬ್ಬರು ಕೇಳಿದ್ದಕ್ಕೆ ಇಷ್ಟೆಲ್ಲ ಬರೆಯಬೇಕಾಯಿತು. ಇನ್ನುಳಿದ ವಿಚಾರಗಳು, ವರ್ತಮಾನದ ಸತ್ಯಗಳು ನಿಮಗೆ ಗೊತ್ತೇ ಇದೆ…ಪ್ರತ್ಯೇಕ ಹೇಳಬೇಕಾದದ್ದು ಏನೂ ಇಲ್ಲ. ಇದು ವಾಸ್ತವ ಅಲ್ಲವೇ?
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
Be the first to comment on "ಇದೇನು? ಒಬ್ಬರಿಗೊಬ್ಬರು ಕಾಲೆಳೆಯುವುದಾ, ನೆರವಾಗುವುದಾ?"