ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜನವರಿ 22ರಿಂದ ಫೆಬ್ರವರಿ 3ರವರೆಗೆ ನಡೆಯುವ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಜಿಲ್ಲೆಯ ನಾನಾ ಕಡೆಗಳಿಂದ ಮೆರವಣಿಗೆ ಮೂಲಕ ಹೊರೆಕಾಣಿಕೆ ಅರ್ಪಿಸಲಾಗುತ್ತಿದ್ದು, ಜನವರಿ 26ರಂದು ಬಂಟ್ವಾಳದಿಂದ ನಡೆಯುವ ಮೆರವಣಿಗೆಗೆ ಭರದ ಸಿದ್ಧತೆ ನಡೆದಿದೆ.
www.bantwalnews.com Editor: Harish Mambady
ಬಂಟ್ವಾಳ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ವಿವರಗಳನ್ನು ನೀಡಿದರು.
ಜ.22ರಂದು ಶಿಬರೂರು, ಅತ್ತೂರು, ಕೊಡೆತ್ತೂರು, ಜ.23ರಂದು ಸಂಜೆ ಮಂಗಳೂರು, ಜ.24ರಂದು ಬೆಳಗ್ಗೆ ಬಪ್ಪನಾಡು, ಉಳ್ಳಾಲ ಸಂಜೆ ಬಜಪೆ, ಜ.25ರಂದು ಕಾಸರಗೋಡು, ಸುಳ್ಯ, ಜ.26ರಂದು ಬಂಟ್ವಾಳ ತಾಲೂಕು, ಜ.27ರಂದು ಬೆಳಗ್ಗೆ ಪುತ್ತೂರು , ಸಂಜೆ ಕಾವೂರು, ಕಳತ್ತೂರು, ಜ.28ರಂದು ಉಡುಪಿ ಮತ್ತು ಜ.29ರಂದು ಬೆಳ್ತಂಗಡಿಯಿಂದ ಹೊರೆಕಾಣಿಕೆ ಬರಲಿದೆ ಎಂದು ಹೇಳಿದ ಸ್ವಾಮೀಜಿ, ಜ.26ರಂದು ಬಂಟ್ವಾಳದಿಂದ ಹೊರಡುವ ಹೊರೆಕಾಣಿಕೆ ಮೆರವಣಿಗೆಯನ್ನು ಔಚಿತ್ಯಪೂರ್ಣವಾಗಿಸಬೇಕು, ದೇವತಾ ಸೇವೆ ಮತ್ತು ಸಮರ್ಪಣಾ ಮನೋಭಾವದಿಂದ ಆಗಮಿಸುವ ಭಕ್ತರಿಗೆ ಆ ದಿನ ಕ್ಷೇತ್ರಕ್ಕೆ ಬಿ.ಸಿ.ರೋಡಿನಿಂದ ಉಚಿತ ಬಸ್ ವ್ಯವಸ್ಥೆಯೂ ಇದೆ. ಸುಮಾರು 250ಕ್ಕೂ ಅಧಿಕ ವಾಹನಗಳನ್ನು ನಿರೀಕ್ಷಿಸಲಾಗಿದ್ದು, ಹೊರೆಕಾಣಿಕೆಗೆ ಮಲೆಬೆನ್ನೂರು, ಟೈಗರ್ ಬ್ರಾಂಡ್ ಬೆಳ್ತಿಗೆ ಅಕ್ಕಿ, ಸಕ್ಕರೆ, ಹೆಸರುಬೇಳೆ, ಕಡ್ಲೆಬೇಳೆ,ಮೆಣಸು, ದಿನಸಿ ಸಾಮಾನು, ತೆಂಗಿನಕಾಯಿ, ಸುವರ್ಣಗಡ್ಡೆ, ಕುಂಬಳಕಾಯಿ, ಸಿಹಿಕುಂಬಳ, ಬಾಳೆ ಎಲೆ, ಸೌತೆ, ತುಪ್ಪ, ಕರ್ಪೂರ, ಬೆಲ್ಲ, ಅವಲಕ್ಕಿ, ಎಳ್ಳೆಣ್ಣೆ, ನಾಗಮಂಡಲಕ್ಕೆ ಅಗತ್ಯವಿರುವ ಕಂಗಿನ ಹೂ ಪಿಂಗಾರ ಇತ್ಯಾದಿಯನ್ನು ನೀಡಬಹುದು ಎಂದರು. ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಸಮೀಪದ ಮೈದಾನದಲ್ಲಿ ಮಧ್ಯಾಹ್ನ 2.30ರವರೆಗೆ ಒಟ್ಟು ಸೇರಿ ಬಳಿಕ ಮೆರವಣಿಗೆ ಮೂಲಕ ಕ್ಷೇತ್ರ ತಲುಪಲಾಗುತ್ತದೆ ಎಂದವರು ವಿವರಿಸಿದರು.
ಭೂದಾನ ಸೇವೆಗೆ ಸಹಕರಿಸಿ: ಈಗಾಗಲೇ ಕಟೀಲು ಭೂದಾನ ಸೇವೆಗೆ ಮಾಣಿಲದಿಂದ 3 ಲಕ್ಷ ರೂ ನೀಡುವುದಾಗಿ ಘೋಷಿಸಿದ್ದು, ಮುಂದಕ್ಕೂ ಇದು ಮುಂದುವರಿಯಲಿದೆ ಎಂದ ಸ್ವಾಮೀಜಿ, ಭಕ್ತರೇ ಮಾಡುವ ಕಾರ್ಯಕ್ರಮವಾದ ಭೂದಾನ ಸೇವೆಗೆ ಊರ, ಪರವೂರ ಭಕ್ತಾಭಿಮಾನಿಗಳು ಸಹಕರಿಸಲು ವಿನಂತಿಸಿದರು. ಇದಕ್ಕೆ ಪ್ರತ್ಯೇಕ ರಶೀದಿ ಮಾಡಲಾಗುವುದು, ಇದೊಂದು ಶಾಶ್ವತವಾಗಿ ಉಳಿಯುವ ಸೇವೆಯಾಗಿದ್ದು, ಈಗಾಗಲೇ ಬಂದ ಧನಸಹಾಯವನ್ನು ಭೂಖರೀದಿಗೆ ವಿನಿಯೋಗಿಸಲಾಗಿದೆ. ಕುಟಂಬದ ಹೆಸರಲ್ಲಿ, ತಂಡದ ಹೆಸರಲ್ಲಿ ಹಾಗೆಯೇ ವೈಯಕ್ತಿಕ ನೆಲೆಯಲ್ಲಿ ದೇಣಿಗೆ ನೀಡುವವರ ಪ್ರತಿಯೊಂದು ಪೈಸೆಯೂ ಸದ್ವಿನಿಯೋಗವಾಗಲಿದೆ. ಇದರಿಂದ ಕಟೀಲು ಕ್ಷೇತ್ರದಲ್ಲಿ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ದೊರಕಲಿದ್ದು, ಅಲ್ಲಿ ಪ್ರತಿದಿನ ಸ್ವಯಂಸೇವಕರು ಸಮಸ್ಯೆ ಅನುಭವಿಸುವುದು ಹಾಗೂ ಭಕ್ತರು ಪರದಾಡುವುದು ತಪ್ಪುತ್ತದೆ. ಖರೀದಿಸಿದ ಭೂಮಿಯಲ್ಲಿ ಯಾವುದೇ ಕಮರ್ಷಿಯಲ್ ಕಟ್ಟಡ ನಿರ್ಮಿಸಲಾಗುವುದಿಲ್ಲ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಹಾಸ ಶೆಟ್ಟಿ ರಂಗೋಲಿ, ಭುವನೇಶ್ ಪಚ್ಚಿನಡ್ಕ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ತಾರಾನಾಥ ಕೊಟ್ಟಾರಿ ಉಪಸ್ಥಿತರಿದ್ದು, ಪೂರಕ ಮಾಹಿತಿ ನೀಡಿದರು,.
Be the first to comment on "ಕಟೀಲು ಬ್ರಹ್ಮಕಲಶೋತ್ಸವ ಹೊರೆಕಾಣಿಕೆಗೆ ಭರದ ಸಿದ್ಧತೆ"