ವಿಟ್ಲದಲ್ಲಿ ನಡೆದ ಎ.ಜಿ.ತಿರುಮಲೇಶ್ವರ ಭಟ್ ಸಂಸ್ಮರಣೆಯಲ್ಲಿ ವಿಮರ್ಶಕ, ಲೇಖಕ ಎಸ್.ಆರ್. ವಿಜಯಶಂಕರ್ ಅವರು ಎ.ಜಿ.ಟಿ.ಯವರ ಸಾಹಿತ್ಯ, ಸಾಮಾಜಿಕ ಕೊಡುಗೆಯನ್ನು ಸ್ಮರಿಸಿದರು. ವಿಡಿಯೋ ಲಿಂಕ್ ಗೆ ಕ್ಲಿಕ್ ಮಾಡಿರಿ.
ಸಹಕಾರ, ಶಿಕ್ಷಣ, ಸಾಹಿತ್ಯ, ಸಂಘಟನೆ, ರಾಜಕೀಯಗಳಲ್ಲಿ ವಿಟ್ಲ ಪರಿಸರವನ್ನು ಸಂಘಟಿಸಿದವರು ಸ್ವಾತಂತ್ರ್ಯ ಹೋರಾಟಗಾರ ಎ.ಜಿ.ತಿರುಮಲೇಶ್ವರ ಭಟ್ಟರು. ವಿಟ್ಲವನ್ನು ಕೇಂದ್ರೀಕರಿಸಿಕೊಂಡು ರಾಜಕೀಯ, ಸಾಮಾಜಿಕ, ಸಹಕಾರಿ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ವಿಟ್ಠಲ ಹೈಸ್ಕೂಲು ಸ್ಥಾಪನೆಯಲ್ಲಿ ಸಕ್ರಿಯರಾಗಿದ್ದ ಅವರು ಪತ್ರಕರ್ತರೂ ಸಾಹಿತಿಯೂ ಆಗಿದ್ದರು. ನವಭಾರತ ಪತ್ರಿಕೆಯ ವಿಟ್ಲದ ವರದಿಗಾರರಾಗಿದ್ದರು ವಿಠಲ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಸಭಾಂಗಣದಲ್ಲಿ ಮಧ್ಯಾಹ್ನ 2.30ಕ್ಕೆ ಡಿ.14ರಂದು ನಡೆಯುವ ಕಾರ್ಯಕ್ರಮದಲ್ಲಿ ಶತಮಾನದ ಸಂಸ್ಮರಣೆ ಮತ್ತು ಪುಸ್ತಕ ಬಿಡುಗಡೆಯ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆಯನ್ನು ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ವಹಿಸಿದ್ದರು. ವಿಠಲ ವಿದ್ಯಾಸಂಘ ಸಂಚಾಲಕ ಎಲ್.ಎನ್.ಕುಡೂರು ಪುಸ್ತಕ ಬಿಡುಗಡೆ ಮಾಡಿದರು. ಪ್ರಗತಿಪರ ಕೃಷಿಕ ಸಿ.ವಿ.ಗೋಪಾಲಕೃಷ್ಣ ಮತ್ತು ವಿಮರ್ಶಕ, ಸಾಹಿತಿ ಎಸ್.ಆರ್.ವಿಜಯಶಂಕರ ಸಂಸ್ಮರಣಾ ಭಾಷಣ ಮಾಡಿದರು.
ಜೀವನ ಸಾಧನೆ:
ದ.ಕ. ಜಿಲ್ಲೆಯ ಅಂದಿನ ಪುತ್ತೂರು ತಾಲೂಕಿನ ವಿಟ್ಲವನ್ನು ಕೇಂದ್ರೀಕರಿಸಿ, ರಾಜಕೀಯ , ಸಾಮಾಜಿಕ ಬದುಕನ್ನು ಆರಂಭಿಸಿದ ಅವರು, 1950ರಲ್ಲಿ ಆರಂಭವಾದ ವಿಠಲ ಹೈಸ್ಕೂಲು ಸ್ಥಾಪನೆಯಲ್ಲಿ ಸಕ್ರಿಯರಾಗಿದ್ದರು. ಸ್ವಾತಂತ್ರ್ಯಪೂರ್ವದಲ್ಲಿ ಅವರ ಲೇಖನಗಳು ಅಂದಿನ ಉದಯಚಂದ್ರ, ನವಭಾರತ, ಪ್ರಭಾತಗಳಲ್ಲಿ ಪ್ರಕಟಗೊಳ್ಳುತ್ತಿದ್ದವು. ಸ್ವಾತಂತ್ರ್ಯಾನಂತರ ರಾಷ್ಟ್ರಬಂಧು, ಮದರಾಸು ಸಮಾಚಾರ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ವಿಟ್ಲ ಪರಿಸರದ ನವಭಾರತ ವರದಿಗಾರರಾಗಿದ್ದವರು ಎ.ಜಿ.ತಿರುಮಲೇಶ್ವರ ಭಟ್ಟರು.
1918ರಲ್ಲಿ ಜನಿಸಿದ ಎ.ಜಿ.ತಿರುಮಲೇಶ್ವರ ಭಟ್ಟರ ತಾಯಿ ಸೌಭದ್ರಮ್ಮ, ತಂದೆ ಆಲಂಗಾರು ಗೋವಿಂದ ಭಟ್ಟ. ಪತ್ನಿ ಪರಮೇಶ್ವರಿ ಅಮ್ಮ. ಮಕ್ಕಳು ಜಯಗೋವಿಂದ, ಸುಭಾಷಿಣಿ, ಹರಿಶಂಕರ ಮತ್ತು ಗಿರೀಶಚಂದ್ರ.
1941ರಲ್ಲಿ ಸತ್ಯಾಗ್ರಹ ನಡೆಸಿ ಹೊನ್ನಾವರದಲ್ಲಿ ದಸ್ತಗಿರಿಯಾದ ಅವರು, ರಾಜಕೀಯ ಕೈದಿಯಾಗಿ ಹಿಂಡಲಗಿ ಜೈಲಿನಲ್ಲಿ ಕಳೆದಿದ್ದರು. 1942ರಲ್ಲಿ ಕೆವಿವಿ ಸಂಘ ಮಂಗಳೂರಿನಲ್ಲಿ ವೃತ್ತಿ ಆರಂಭಿಸಿದ ಅವರು ಅಂದು ಮಂಗಳೂರಿನಲ್ಲಿ ನಡೆದ ಅಖಿಲ ಕರ್ನಾಟಕ ಪತ್ರಕರ್ತರ ಸಮ್ಮೇಳನ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿ ಕೆಲಸ ಮಾಡಿದ್ದರು. 1946ರಲ್ಲಿ ವಿಟ್ಲದಲ್ಲಿ ವಾಸ್ತವ್ಯ ಆರಂಭಿಸಿದ ಬಳಿಕ 1948-50ರಲ್ಲಿ ವಿಠಲ ಹೈಸ್ಕೂಲ್ ಸ್ಥಾಪನೆಗಾಗಿ ದುಡಿದರು.
1952ರಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಾರ ನಡೆಸಿದ ಅವರು 1953ರಲ್ಲಿ ವಿಟ್ಲ ಪಂಚಾಯಿತಿ ಉಪಾಧ್ಯಕ್ಷರಾದರು. ಬಳಿಕ ವಿಟ್ಲ ಸಹಕಾರಿ ಸಂಘ ಅಧ್ಯಕ್ಷ, ವಿಟ್ಲ ರೂರಲ್ ಕೋಓಪರೇಟಿವ್ ಸ್ಥಾಪನೆ, ದ.ಕ.ಜಿಲ್ಲಾ ಮದ್ಯಪಾನ ನಿಷೇಧ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದರು. 1941ರಲ್ಲಿ ವೈಯಕ್ತಿಕ ಸತ್ಯಾಗ್ರಹದಲ್ಲಿ ಭಾಗವಹಿಸಿ ಸೆರೆಮನೆ ವಾಸ ಅನುಭವಿಸಿದ ಎ.ಜಿ.ತಿರುಮಲೇಶ್ವರ ಭಟ್ಟರು, ಸ್ವಾತಂತ್ರ್ಯ ಲಭ್ಯವಾದ ಮೇಲೆ ದೇಶಾಭಿಮಾನಿಯಾಗಿ ಸಾಧನೆಗೈದವರು.
Be the first to comment on "ಎ.ಜಿ.ತಿರುಮಲೇಶ್ವರ ಭಟ್ ಸಂಸ್ಮರಣೆ – ಎಸ್.ಆರ್.ವಿಜಯಶಂಕರ ಭಾಷಣಕ್ಕೆ ಕ್ಲಿಕ್ ಮಾಡಿರಿ"