ಬಂಟ್ವಾಳನ್ಯೂಸ್ ವರದಿ, ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ ತಾಲೂಕಿನಾದ್ಯಂತ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಿ, ಎಲ್ಲರಿಗೂ ನಿರಂತರ ನೀರೊದಗಿಸುವ ಕಾರ್ಯ ನಡೆಸುವ ಕಡೆಗೆ ಆದ್ಯತೆ ದೊರಕಿಸುವ ಪ್ರಯತ್ನ ಮಾಡಬೇಕು, ಅನಗತ್ಯವಾಗಿ ಕೊಳವೆ ಬಾವಿ ತೊಡಿಸಿ, ಭೂಮಿಯನ್ನು ಮತ್ತಷ್ಟು ಬತ್ತಿಹೋಗಲು ಅನುಮತಿ ಕೊಡುವುದಿಲ್ಲ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ.
ಬಂಟ್ವಾಳ ತಾಲೂಕು ಪಂಚಾಯಿತಿ ಎಸ್.ಜಿ.ಎಸ್.ವೈ. ಸಭಾಭವನದಲ್ಲಿ ಮಂಗಳವಾರ ಸಂಗಬೆಟ್ಟು, ಕರೋಪಾಡಿ ಮತ್ತು ಮಾಣಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪ್ರಗತಿಯ ಕುರಿತು ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಹಾಗೂ ಸಂಬಂಧಪಟ್ಟ ಎಂಜಿನಿಯರುಗಳ ಜೊತೆ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ನಳ್ಳಿಯಲ್ಲಿ ಕುಡಿಯುವ ನೀರು ಬಾರದೇ ಇದ್ದರೆ ಯೋಜನೆ ಇದ್ದು ಏನು ಪ್ರಯೋಜನ ಎಂದು ಪ್ರಶ್ನಿಸಿದ ಅವರು, ಸರಕಾರದ ಕೋಟ್ಯಂತರ ರೂ ವೆಚ್ಚದ ಯೋಜನೆ ರೂಪಿಸಿದ ಬಳಿಕ ಅದು ಸರಿಯಾಗಿ ತಲುಪುವಂತೆ ನೋಡಿಕೊಳ್ಳಬೇಕು. ಇದು ನಿಷ್ಫಲವಾಗಲು ಬಿಡಬಾರದು. ಯಾವ ಪ್ರದೇಶಗಳಿಗೆ ಸಮರ್ಪಕವಾಗಿ ನೀರು ಲಭ್ಯವಾಗುತ್ತಿಲ್ಲವೋ ಅವುಗಳ ಕುರಿತು ಗಮನಹರಿಸಬೇಕು, ಪ್ರತಿ ದಿನವೂ ನೀರು ಸರಬರಾಜಾಗಬೇಕು. ನಿಯಮಿತವಾಗಿ ಸಮನ್ವಯ ಸಮಿತಿ ಸಭೆ ನಡೆದು, ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ಸೋಲಾರ್ ಅಳವಡಿಸಿ: ಗ್ರಾಮ ಪಂಚಾಯಿತಿಗಳು ಸ್ವಾವಲಂಬಿಯಾಗಬೇಕಾದರೆ ಸೌರಶಕ್ತಿಯನ್ನು ಅಳವಡಿಸಿಕೊಳ್ಳಬೇಕು. ಇದರಿಂದ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿ ಗ್ರಿಡ್ ಗೆ ಕರೆಂಟ್ ನೀಡುವುದರ ಮೂಲಕ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಸಾಧ್ಯ. ಲಕ್ಷಾಂತರ ರೂ ವಿದ್ಯುತ್ ಬಿಲ್ ಬಾರದಂತೆ ಮಾಡಲು ಸಾಧ್ಯ ಎಂದು ಸಲಹೆ ನೀಡಿದ ಶಾಸಕರು, ಕೂಡಲೇ ಕಾರ್ಯೋನ್ಮುಖವಾಗುವಂತೆ ಇಒ ರಾಜಣ್ಣ ಅವರಿಗೆ ಸೂಚಿಸಿದರು.
ಅನುದಾನ ಕೊರತೆ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಹೊರಗುಳಿದ ಗ್ರಾಮಗಳಿಗೆ ಆದ್ಯತೆ ಮೇರೆ ಕುಡಿಯುವ ನೀರೊದಗಿಸಿ, ಕರ್ಪೆ ಗ್ರಾಮದಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಲಾಗುತ್ತಿದ್ದು, ಅಮ್ಟಾಡಿ ಭಾಗದ ಜನರಿಗೆ ನೀರಿನ ಕೊರತೆಯಾಗದು. ಬತ್ತಿಹೋದ ಕೊಳವೆ ಬಾವಿಗಳ ಪುನಶ್ಚೇತನ ಮಾಡುವುದರ ಮೂಲಕ ಕೊಳವೆ ಬಾವಿಗಳಿಗೆ ಮರುಜೀವ ನೀಡಿ ಎಂದು ಸಲಹೆ ನೀಡಿದ ಶಾಸಕರು, ಅನುದಾನ ಕೊರತೆಯಾದರೆ ಒದಗಿಸುವ ಭರವಸೆ ನೀಡಿದರು.
ಕೊಳ್ನಾಡು ಗ್ರಾಪಂ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಅಮ್ಟಾಡಿ ಗ್ರಾಪಂ ಅಧ್ಯಕ್ಷ ಹರೀಶ್ ಶೆಟ್ಟಿ ಪಡು, ವಿಟ್ಲ ಪಡ್ನೂರು ಗ್ರಾಪಂ ಅಧ್ಯಕ್ಷ ರವೀಶ್ ಶೆಟ್ಟಿ, ಚೆನ್ನೈತೋಡಿ ಗ್ರಾಪಂ ಅಧ್ಯಕ್ಷ ಯತೀಶ್ ಶೆಟ್ಟಿ, ಅನಂತಾಡಿ ಗ್ರಾಪಂ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ, ಪಂಜಿಕಲ್ಲು ಗ್ರಾಪಂ ಅಧ್ಯಕ್ಷೆ ಸುಮಿತ್ರಾ, ಕುಕ್ಕಿಪ್ಪಾಡಿ ಗ್ರಾಪಂ ಅಧ್ಯಕ್ಷ ದಿನೇಶ್ ಸುಂದರ ಶಾಂತಿ ಮೊದಲಾದವರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ ವೇಳೆ ತಮ್ಮ ಗ್ರಾಮದಲ್ಲಿರುವ ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು. ಮೆಸ್ಕಾಂ ಎಇಇ ಪ್ರಶಾಂತ್ ಪೈ, ಪಂಚಾಯತ್ರಾಜ್ ಇಲಾಖೆಯ ಇಂಜಿನಿಯರುಗಳಾದ ಜಗದೀಶ್ ನಿಂಬಾಳ್ಕರ್, ಅಜಿತ್, ಅಮರ್ ಇನ್ಫ್ರಾದ ಸಲಹೆಗಾರ, ಕೆಯುಡಬ್ಲ್ಯುಎಸ್ ನ ನಿವೃತ್ತ ಎಇಇ ಶೀನ ಮೂಲ್ಯ ಸಭೆಯಲ್ಲಿ ಪೂರಕ ಮಾಹಿತಿ ನೀಡಿದರು.
Be the first to comment on "ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನಿಷ್ಫಲವಾಗಲು ಬಿಡಬೇಡಿ – ಅಧಿಕಾರಿಗಳಿಗೆ ಶಾಸಕ ರಾಜೇಶ್ ನಾಯ್ಕ್ ಸೂಚನೆ"