ಒಡ್ಡೂರು ಫಾಮ್೯ ಹೌಸ್ ಗೆ ಆರ್.ಅಶೋಕ್ ಭೇಟಿ

ವಿವಿಧ ಕಾರ್ಯಕ್ರಮದ ನಿಮಿತ್ತ ಸೋಮವಾರ ಬಂಟ್ವಾಳಕ್ಕಾಗಮಿಸಿದ ರಾಜ್ಯ ಕಂದಾಯ,ಪೌರಾಡಳಿತ ಸಚಿವ ಆರ್.ಆಶೋಕ್ ಅವರು ಗಂಜಿಮಠದಲ್ಲಿರುವ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರ ಒಡ್ಡೂರು ಫಾಮ್೯ ಹೌಸ್ ಗೆ ಭೇಟಿ ನೀಡಿ ಕೃಷಿ ಚಟುವಟಿಕೆಯನ್ನು ವೀಕ್ಷಿಸಿದರು.

ಶಾಸಕ ರಾಜೇಶ್ ನಾಯ್ಕ್ ಅವರ ಹೈನುಗಾರಿಕೆ,ಸುಮಾರು 2 ಎಕ್ರೆಯಲ್ಲಿರುವ ಕೆರೆ ಮತ್ತು ಕೃಷಿಚಟುವಟಿಕೆಯನ್ನು ಕಂಡು ಖುಷಿಪಟ್ಟ ಸಚಿವ ಆಶೋಕ್ ಅವರು ಶಾಸಕರ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಸಾವಯವ ಕೃಷಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.

ಒಂದಷ್ಟು ಹೊತ್ತು ಇಲ್ಲಿದ್ದು ಕುಶಲೋಪಚರಿ ನಡೆಸಿದ ಸಚಿವರು ಬಂಟ್ವಾಳ ಕ್ಷೇತ್ರದ ಅಭಿವೃದ್ಧಿಗೆ ಕಂದಾಯ ಸಚಿವನಾಗಿ ಎಲ್ಲಾ ರೀತಿಯ ಸಹಕಾರ ನೀಡುವ ಅಭಯವನ್ನು ನೀಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಸಂಜೀವ ಮಠಂದೂರು, ವೇದವ್ಯಾಸ ಕಾಮತ್, ಹರೀಶ್ ಪೂಂಜಾ ಬೆಳ್ತಂಗಡಿ,ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ,ಬಂಟ್ವಾಳ ಪುರಸಭಾ ಸದಸ್ಯ ಗೋವಿಂದಪ್ರಭು,ತಾಪಂ.ಸದಸ್ಯ ಪ್ರಭಾಕರ ಪ್ರಭು, ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನಾ ಜಿ.ಕೆ.ಭಟ್, ಪ್ರಮುಖರಾದ ಉದಯಕುಮಾರ್ ರಾವ್ ಬಂಟ್ವಾಳ,ರಮಾನಾಥ ರಾಯಿ,ಪುಪ್ಪರಾಜ್ ಶೆಟ್ಟಿ,ನಂದರಾಮರೈ,ಗಣೇಶ್ ರೈ ಮಾಣಿ,ಆರ್.ಸಿ.ನಾರಾಯಣ ಪುತ್ತೂರು,ಪವನ್ ಕುಮಾರ್ ಮೊದಲಾದವರಿದ್ದರು. ಬಳಿಕ ಇಲ್ಲಿಂದ ವಿಮಾನ ನಿಲ್ದಾಣಕ್ಕೆ ತೆರಳಿ ಬೆಂಗಳೂರಿನತ್ತ ಪ್ರಯಾಣಿಸಿದರು.