ಪುತ್ತೂರು: ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ (ರಿ) ಪುತ್ತೂರು ಇದರ ನೂತನ ಅಧ್ಯಕ್ಷರಾಗಿ ಕೋಡಪದವಿನ ಕಿನಿಲ ಅಶೋಕ್, ಕಾರ್ಯದರ್ಶಿಯಾಗಿ ಗುತ್ತಿಗಾರು ಕಮಿಲದ ಕೃಷಿಕ, ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ಮತ್ತು ಉಪಾಧ್ಯಕ್ಷರಾಗಿ ಕುಕ್ಕುಜಡ್ಕದ ಎಂ.ಜಿ.ಸತ್ಯನಾರಾಯಣ, ಕೆ.ವಿಶ್ವನಾಥ ರಾವ್ ಸುಳ್ಯ ಇವರು ಆಯ್ಕೆಯಾಗಿದ್ದಾರೆ.
ಡಿ.೩೦ ರಂದು ಪುತ್ತೂರು ತೆಂಕಿಲದ ಒಕ್ಕಲಿಗ ಗೌಡ ಸಮುದಾಯ ಭವನದ ’ಚುಂಚಶ್ರೀ ಸಭಾಭವನ’ದಲ್ಲಿ ಜರುಗಿದ ಸಂಘದ ಮಹಾಸಭೆಯಲ್ಲಿ ಕಾರ್ಯಕಾರಿ ಸಮಿತಿ ರಚಿಸಿ ಪದಾಧಿಕಾರಿಗಳನ್ನು ಘೋಷಿಸಲಾಯಿತು.
ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಸಂಘದ ಕಾರ್ಯದರ್ಶಿ ಕಿನಿಲ ಅಶೋಕ್ ವರದಿ, ಲೆಕ್ಕಪತ್ರಗಳನ್ನು ಮಂಡಿಸಿದರು. ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಉಪಾಧ್ಯಕ್ಷ ಶಂ.ನಾ.ಖಂಡಿಗೆ ಆಗಮಿಸಿ ಶುಭಕೋರಿದರು. ಕ್ಯಾಂಪ್ಕೋದ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ, ಎ.ಆರ್.ಡಿ.ಎಫ್. ಕಾರ್ಯನಿರ್ವಹಣಾಧಿಕಾರಿ ಡಾ.ಕೇಶವ ಭಟ್ ಮೊದಲಾದವರು ಉಪಸ್ಥಿತರಿದ್ದರು.
“ಸಂಘಕ್ಕೆ ಯುವ ಕೃಷಿಕರು ಬರುವಂತಾಗಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ರೂಪುಗೊಂಡ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವನ್ನು ಹೊಸ ತಲೆಮಾರು ಇನ್ನಷ್ಟು ಸುದೃಢವಾಗಿ ಕಟ್ಟಿಬೆಳೆಸಬೇಕಾಗಿದೆ.” ಎಂದು ಮಂಚಿ ಶ್ರೀನಿವಾಸ ಆಚಾರ್ ಅಭಿಪ್ರಾಯಪಟ್ಟರು.
ಕಿನಿಲ ಅಶೋಕ ಸ್ವಾಗತಿಸಿದರು. ಹಿರಿಯ ಸದಸ್ಯ ವಿ.ಮ.ಭಟ್ ಅಡ್ಯನಡ್ಕ ಪ್ರಾರ್ಥಿಸಿದರು. ನೂತನ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ವಂದಿಸಿದರು.
Be the first to comment on "ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ -ಅಧ್ಯಕ್ಷ ಕಿನಿಲ ಅಶೋಕ, ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ"