ಈ ಬಾಲಕನ ಹೆಸರು ಅಕ್ಷಜ್ ಚಿದಾನಂದ. ವಯಸ್ಸು ಕೇವಲ ಐದು. ಕೇಳಿದರೆ ಪಟಪಟನೆ ಜಗತ್ತಿನ ಎಲ್ಲ ದೇಶಗಳ ಬಗ್ಗೆ ಹೇಳುತ್ತಾನೆ. ಯು.ಎಸ್.ಎ.ಯ ಬೆಟ್ಟೆನ್ ಡ್ರಾದಲ್ಲಿರುವ ಈತ ಅಲ್ಲಿ ಕಿಂಡರ್ ಗಾರ್ಡನ್ ಗೆ ಹೋಗುತ್ತಾನೆ. ಬಂಟ್ವಾಳ ತಾಲೂಕಿನ ವಿಟ್ಲ ಮುಡ್ನೂರಿನ ಬೊಳಿಗದ್ದೆಯ ಚಿದಾನಂದ ಮತ್ತು ಸಂಧ್ಯಾ ಅವರೀಗ ನೆಲೆಸಿರುವುದು ಯು.ಎಸ್.ಎ.ನಲ್ಲಿ. 2014ರಲ್ಲಿ ಜನಿಸಿದ ಇವರ ಮಗ ಅಕ್ಷಜ್ ಈಗ ತನ್ನ ಜ್ಞಾಪಕಶಕ್ತಿಯಿಂದ ಸುದ್ದಿಯಾಗಿದ್ದಾನೆ.
2 ವರ್ಷದವನಾಗಿದ್ದಾಗಲೇ ಅಕ್ಷಜ್, ಯು.ಎಸ್.ಎ. ಮ್ಯಾಪ್ ನೋಡುತ್ತಿದ್ದ. ಎಲ್ಲ ಮಕ್ಕಳೂ ಮ್ಯಾಪ್ ನೋಡಿ ಹರಿದು ಹಾಕುತ್ತಿದ್ದರೆ, ಈತ 3 ವರ್ಷದವನಾದಾಗ ಅಮೇರಿಕಾದ ರಾಜ್ಯಗಳು ಮತ್ತು ರಾಜಧಾನಿಗಳ ಹೆಸರು ಹೇಳತೊಡಗಿದ.
4 ವರ್ಷವಾದಾಗ ಪ್ರಪಂಚದ 195 ದೇಶಗಳ ಹೆಸರು ಹೇಳಲು ಶಕ್ತನಾದ. ನೀವು ವಿಶ್ವದ ಭೂಪಟವನ್ನು ಆತನೆದುರು ಹರಹಿದರೆ, ಅವುಗಳು ಯಾವ ದೇಶ ಎಂದು ಹೇಳುತ್ತಾನೆ. ಯಾವುದಾದರೂ ದೇಶದ ರಾಷ್ಟ್ರಧ್ವಜವನ್ನು ನೀವು ತೋರಿಸಿದರೆ, ಅದು ಯಾವ ದೇಶದ್ದು ಎಂದು ಅಕ್ಷಜ್ ತಿಳಿಸುತ್ತಾನೆ. ಇದೀಗ ಆತನಿಗೆ ಐದು ವರ್ಷ. ದೇಶದ ಹೆಸರು, ಧ್ವಜ ನೋಡಿದರೆ ದೇಶವನ್ನು ಗುರುತಿಸುತ್ತಿದ್ದಾತ ಒಂದು ಹೆಜ್ಜೆ ಮುಂದೆ ಹೋಗಿ ಪ್ರತಿಯೊಂದು ದೇಶದ ರಾಜಧಾನಿಯ ಹೆಸರು ಹೇಳುತ್ತಿದ್ದಾನೆ. ಮ್ಯಾಪ್ ನಲ್ಲಿ ದೇಶಗಳ ನಕ್ಷೆಯನ್ನೇ ಮನಸ್ಸಿನಲ್ಲಿಟ್ಟು, ಅದನ್ನೇ ಜ್ಞಾಪಕದಲ್ಲಿಟ್ಟು ಹೇಳುತ್ತಿರುವ ಅಕ್ಷಜ್ ಈಗ ಯು.ಎಸ್.ನಲ್ಲಿನ ಮಾಧ್ಯಮಗಳ ಗಮನ ಸೆಳೆದಿದ್ದಾನೆ ಎನ್ನುತ್ತಾರೆ ಆತನ ತಂದೆ ಚಿದಾನಂದ್. ಮೂರು ವರ್ಷದವನಾಗಿದ್ದಾಗಲೇ ಆಂಗ್ಲ ಭಾಷೆಯನ್ನು ಕಲಿತ ಅಕ್ಷಜ್, ಮಾತೃಭಾಷೆ ಕನ್ನಡವನ್ನು ಮಾತನಾಡಬಲ್ಲ. ಭಾರತದ ಹೆಚ್ಚಿನ ರಾಜ್ಯಗಳ ರಾಜಧಾನಿಯನ್ನು ಹೇಳಬಲ್ಲ.
www.bantwalnews.com Editor: Harish Mambady For Advertisements Contact: 9448548127
Be the first to comment on "ಐದು ವರ್ಷದ ಬಾಲಕನಿಗೆ ಇಡೀ ಭೂಗೋಳವೇ ಬಾಯಿಪಾಠ"