ಅಡಕೆ ಅಸ್ತಿತ್ವದ ಉಳಿವಿನ ಹೋರಾಟಕ್ಕೆ ವಿಜಯ ಕರ್ನಾಟಕ ವೇದಿಕೆ ಕಲ್ಪಿಸಿದೆ. ಅಕ್ಟೋಬರ್ 25ರಂದು ಶುಕ್ರವಾರ ಪೂರ್ವಾಹ್ನ 10.30ಕ್ಕೆ ಪುತ್ತೂರು ನಗರದ ಕಿಲ್ಲೆ ಮೈದಾನದ ಬಳಿಯಲ್ಲಿರುವ ನಗರಸಭೆಯ ಸಮುದಾಯ ಭವನದಲ್ಲಿ ಜಿಲ್ಲಾ ಮಟ್ಟದ ಅಡಕೆ ಬೆಳೆಗಾರರ ಸಮಾವೇಶ ನಡೆಯಲಿದೆ.
ಬೆಳೆಗಾರರ ಸಮಸ್ಯೆ, ಸವಾಲುಗಳ ಚಿಂತನ ಮಂಥನ ಇಲ್ಲಿ ನಡೆಯುವುದು. ಸಂಶೋಧಕರಾದ ಡಾ.ವಿಘ್ನೇಶ್ವರ ವರ್ಮುಡಿ ಮತ್ತು ಬದನಾಜೆ ಶಂಕರ ಭಟ್ ವಿಷಯ ಮಂಡನೆ ಮಾಡಲಿದ್ದಾರೆ. ಬೆಳೆಗಾರರ ಸಮಸ್ಯೆಗಳ ಸಮಗ್ರ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುತ್ತದೆ.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಕ್ಯಾಂಪ್ಕೋ ಅಧ್ಯಕ್ಷರಾದ ಎಸ್.ಆರ್. ಸತೀಶ್ಚಂದ್ರ, ಪುತ್ತೂರು ಎಪಿಎಂಸಿ ಅಧ್ಯಕ್ಷರಾದ ದಿನೇಶ್ ಮೆದು, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾದ ಮಂಚಿ ಶ್ರೀನಿವಾಸಾಚಾರ್ ಮತ್ತಿತರರು ಭಾಗವಹಿಸಲಿದ್ದಾರೆ. ನಾನಾ ರೈತ ಸಂಘಟನೆಗಳ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ. ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಜಿಲ್ಲೆಯ ಬೆಳೆಗಾರರಿಗೆ ಸಂಬಂಧಿಸಿ ಈ ಕಾರ್ಯಕ್ರಮ ನಡೆಯಲಿದೆ.
ಅಡಕೆ ಮತ್ತು ಬೆಳೆಗಾರರ ಬದುಕು ಸಂಕಷ್ಟದಲ್ಲಿದೆ. ಅಡಕೆಯ ಸಾಂಪ್ರದಾಯಿಕ ಗೌರವ, ಪ್ರತಿಷ್ಠೆ ಮಣ್ಣು ಪಾಲಾಗಿದ್ದು, ಆರೋಗ್ಯಕ್ಕೆ ಹಾನಿಕಾರಕ ಎಂಬ ಕಳಂಕವನ್ನು ಅಂಟಿಸಲಾಗಿದೆ. ಮತ್ತೊಂದೆಡೆ ಅಡಕೆ ನಿಷೇಧದ ತೂಗುಗತ್ತಿ ನೇತಾಡುತ್ತಿದೆ. ಧಾರಣೆ ಪಾತಾಳಕ್ಕಿಳಿಯುತ್ತಿದೆ. ಜೀವನ್ಮರಣದ ಹೋರಾಟ ಎದುರಿಗಿದೆ. ಇನ್ನೂ ಮೌನ ವಹಿಸಿದರೆ ಅಡಕೆಯ ಅಸ್ತಿತ್ವ ಅಳಿದು ಹೋಗುವ ಅಪಾಯವಿದೆ ಎಂಬ ನಿಟ್ಟಿನಲ್ಲಿ ಸಮಾವೇಶ ನಡೆಯಲಿದೆ.
Be the first to comment on "ವಿಜಯ ಕರ್ನಾಟಕದಿಂದ ಪುತ್ತೂರಲ್ಲಿ ಅಡಕೆ ಬೆಳೆಗಾರರ ಜಿಲ್ಲಾ ಸಮಾವೇಶ"