ಕೃಷಿಕರ ಸೇವೆಯ ಧ್ಯೇಯವನ್ನಿಟ್ಟುಕೊಂಡು 1962ರಲ್ಲಿ ಸ್ಥಾಪನೆಯಾದ ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ 2018-19ಸಾಲಿನಲ್ಲಿ ವಿವಿಧ ಯೋಜನೆಯಡಿ 7.15 ಕೋಟಿ ರೂ ಸಾಲವನ್ನು ವಿತರಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸುದರ್ಶನ್ ಜೈನ್ ತಿಳಿಸಿದ್ದಾರೆ.
www.bantwalnews.com Editor: Harish Mambady For Advertisements Contact: 9448548127
ಬುಧವಾರ ಸಂಜೆ ಬ್ಯಾಂಕಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಬ್ಯಾಂಕಿನಲ್ಲಿ 1ಕೋಟಿ 81 ಲಕ್ಷ ರೂ ಪಾಲುಬಂಡವಾಳವಿದ್ದು, 2018-19ನೇ ಸಾಲಿನಲ್ಲಿ ನಬಾರ್ಡ್ ಯೋಜನೆಯಡಿ 2.25 ಕೋಟಿ ಕೃಷಿ ಸಾಲ, ಸ್ವಂತ ಬಂಡವಾಳದಲ್ಲಿ 77.52 ಲಕ್ಷ ರೂ ಕೃಷಿ ಸಾಲ ಮತ್ತು 4 ಕೋಟಿ ರೂ ಕೃಷಿಯೇತರ ಸಾಲ ಸೇರಿ 4 ಕೋಟಿ ರೂ ಸಾಲ ವಿತರಿಸಿದೆ. ಹೈನುಗಾರಿಕೆ ಯೋಜನೆಯಡಿ 94.67 ಲಕ್ಷ ರೂ ಸಾಲ, ಕೋಳಿ ಸಾಕಾಣಿಕೆ ಯೋಜನೆಯಡಿ 84.71 ಲಕ್ಷ ಸಾಲ ಇದೆ ಎಂದರು. ಸಾಲ ವಸೂಲಾತಿಯಲ್ಲಿ ಶೇ.75.71 ಸಾಧನೆ ಮಾಡಿ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ ಎಂದ ಅವರು, ರೈತರಿಗೆ ತೊಂದರೆ ಉಂಟಾಗದಂತೆ ಸಾಲ ವಸೂಲಾತಿ ನಡೆದಿದೆ, ಅಡಕೆ ಕೊಳೆರೋಗ ದಂಥ ಸಮಸ್ಯೆಗಳಿದ್ದರೂ ಸಾಲ ಮರುಪಾವತಿ ಮಾಡಿದ ರೈತರನ್ನು ಈ ಸಂದರ್ಭ ಅಭಿನಂದಿಸಿದರು.
ಶೇ.6.4 ಮತ್ತು 3 ಬಡ್ಡಿ ರಿಯಾಯಿತಿ ದರದಲ್ಲಿ ಪಡೆದ ಸಾಲವನ್ನು ಸದಸ್ಯರು ಸಕಾಲದಲ್ಲಿ ಮರುಪಾವತಿಸಿದ ಹಿನ್ನಲೆಯಲ್ಲಿ 2018-19 ನೇ ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲೇ ಉತ್ತಮ ಸಾಧನೆಗೈದ ಬ್ಯಾಂಕ್ ಎಂಬ ಪ್ರಶಸ್ತಿಯನ್ನು ಪಡೆದಿದೆ.ಮುಂದಿನ ವರ್ಷ ಅಧಿಕ ಪ್ರಮಾಣದಲ್ಲಿ ಠೇವಣಿ ಸಂಗ್ರಹಿಸಿ ರೈತ ಸದಸ್ಯರಿಗೆ ವಿವಿಧ ಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ತರಲು ಯೋಚಿಸಲಾಗಿದೆ ಎಂದ ಸುದರ್ಶನ್ ಜೈನ್ ಕೃಷಿ ಆಧಾರಿತ ಮತ್ತು ಕೃಷೀಯೇತರ ಸಾಲ ಯೋಜನೆಯಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಸಾಲ ನೀಡುವ ಮೂಲಕ ಸದಸ್ಯರ ಕೃಷಿ ಅಭಿವೃದ್ದಿಗೆ ಶ್ರಮಿಸಲಾಗುವುದು,ಕೃಷಿಕರ ವಿವಿಧ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿ,ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದರು. 2019-20 ರ ಸಾಲಿನಲ್ಲಿ 12 ಕೋ.ರೂ.ಸಾಲ ವಿತರಿಸುವ ಗುರಿಯನ್ನು ಹೊಂದಿದ್ದು,ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು,ಬ್ಯಾಂಕಿನ ಮೇಲ್ಚಾವಣಿಯಲ್ಲಿ ಸೋಲಾರ್ ವ್ಯವಸ್ಥೆಯನ್ನು ಅಳವಡಿಸಿಕೊಂಡು ಬ್ಯಾಂಕನ್ನು ಸಂಪೂರ್ಣ ಹವಾನಿಯಂತ್ರಿತ ಬ್ಯಾಂಕ್ ಆಗಿ ಪರಿವರ್ತಿಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಸಂಜೀವ ಪೂಜಾರಿ, ರಾಜ್ಯ ಬ್ಯಾಂಕಿನ ಶಾಖಾಧಿಕಾರಿ ಬಿ.ಜೆ. ಸುರೇಶ್, ನಿರ್ದೇಶಕರಾದ ಚಂದ್ರಪ್ರಕಾಶ್ ಶೆಟ್ಟಿ, ಹೊನ್ನಪ್ಪ ನಾಯ್ಕ, ಮುರಳೀಧರ ಶೆಟ್ಟಿ, ಪರಮೇಶ್ವರ ಎಂ., ಚಂದ್ರಹಾಸ ಕರ್ಕೇರ, ಶಿವಪ್ಪ ಪೂಜಾರಿ, ಚಂದ್ರಶೇಖರ ಶೆಟ್ಟಿ, ರಾಜೇಶ್ ಕುಮಾರ್, ಪುಪ್ಪಾವತಿ, ಸುಜಾತ ರೈ, ವ್ಯವಸ್ಥಾಪಕ ಶೇಖರ ಎಂ. ಉಪಸ್ಥಿತರಿದ್ದರು.
Be the first to comment on "ಬಂಟ್ವಾಳ ಪ್ರಾಥಮಿಕ ಸಹಕಾರಿ ಕೃಷಿ, ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿಂದ 7.15 ಕೋಟಿ ರೂ ಸಾಲ ವಿತರಣೆ: ಸುದರ್ಶನ ಜೈನ್"