ತೀವ್ರ ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿಯನ್ನು ಶೀಘ್ರ ದುರಸ್ತಿಗೊಳಿಸಬೇಕು, ಇದಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಕೇಂದ್ರ ಮತ್ತು ರಾಜ್ಯ ಸರಕಾರಗಳೇ ಹೊಣೆ ಎಂದು ಆರೋಪಿಸಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಮೇಲ್ಕಾರ್ ನಲ್ಲಿ ರಸ್ತೆ ತಡೆ ಮತ್ತು ಬಿ.ಸಿ.ರೋಡಿನ ಮಿನಿ ವಿಧಾನಸೌಧದವರೆಗೆ ಪಾದಯಾತ್ರೆ ಬಂಟ್ವಾಳ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ನಿಂದ ಬುಧವಾರ ನಡೆಯಿತು. ಪ್ರತಿಭಟನೆಗೆ ಜೆಡಿಎಸ್ ಮುಖಂಡರು ಸಾಥ್ ನೀಡಿದರು.
www.bantwalnews.com Editor: Harish Mambady
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಿ.ಸಿ.ರೋಡ್‌ನಿಂದ ಮಾಣಿ ಜಂಕ್ಷನ್ ತನಕ ರಸ್ತೆಯು ಸಂಪೂರ್ಣ ಹದೆಗೆಟ್ಟಿದೆ ಎಂದು ಆರೋಪಿಸಿ ಬಿ.ರಮಾನಾಥ ರೈ ನೇತೃತ್ವದಲ್ಲಿ ಮೆಲ್ಕಾರ್ ಜಂಕ್ಷನ್‌ನಲ್ಲಿ ೫ ನಿಮಿಷಗಳ ಕಾಲ ಹೆದ್ದಾರಿ ತಡೆ ಮಾಡಲಾಯಿತು.
ಮೆಲ್ಕಾರ್ ಜಂಕ್ಷನ್‌ನಲ್ಲಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ರೈ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಭಾವನಾತ್ಮಕವಾಗಿ ಜನರನ್ನು ಮರುಳು ಮಾಡಿ, ಓಟುಗಿಟ್ಟಿಸುವುದೇ ಬಿಜೆಪಿಯ ಹವ್ಯಾಸ ಎಂದ ಅವರು, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಆದ ಕಾಮಗಾರಿಯನ್ನು ಬಿಜೆಪಿ ಪ್ರಧಾನಿಗೆ ಪತ್ರ ಬರೆದು ಪ್ರಚಾರ ಗಿಟ್ಟಿಸಿತ್ತು. ಇದೀಗ ಹೆದ್ದಾರಿ ಹದಗೆಟ್ಟಿದ್ದರೂ, ಯಾರೂ ಯಾಕೆ ಪತ್ರ ಬರೆಯುತ್ತಿಲ್ಲ. ಅವರ ಪೆನ್ನಿನಲ್ಲಿ ಶಾಯಿ ಮುಗಿದಿದೆಯೇ ಎಂದು ವ್ಯಂಗ್ಯವಾಡಿದ ರೈ, ಈ ಕೂಡಲೇ ಪ್ರತಿಯೊಬ್ಬರೂ, ಮೋದಿಗೆ ಪತ್ರ ಬರೆಯಬೇಕು. ಇಲ್ಲಿನ ಸಂಸದ ನಳಿನ್ ಕುಮಾರ್ ಕಟೀಲು ಅವರಿಂದ ಹೆದ್ದಾರಿ ಮುತುವರ್ಜಿ ಸಾಧ್ಯವಿಲ್ಲ. ಹಾಗಾಗಿ ಬೇಗ ಹೆದ್ದಾರಿ ದುರಸ್ಥಿ ಮಾಡಿ ಎಂದು ಪ್ರಧಾನಿಗೆ ಪತ್ರ ಬರೆಯುವಂತೆ ಕರೆ ನೀಡಿದರು.
ಬಳಿಕ ಪಾದಯಾತ್ರೆಯ ಮೂಲಕ ಬಿ.ಸಿ.ರೋಡ್ ಮಿನಿವಿಧಾನ ಸೌಧಕ್ಕೆ ತೆರಳಿ ತಹಶೀಲ್ದಾರ್ ರಶ್ಮಿ ಎಸ್.ಆರ್. ಮೂಲಕ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ವಿಧಾನಪರಿಷತ್ ಸದಸ್ಯ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಎಂ.ಎಸ್.ಮಹಮ್ಮದ್, ಮಂಜುಳಾ ಮಾಧವ ಮಾವೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಮಾಯಿಲಪ್ಪ ಸಾಲಿಯಾನ್, ಬಿ.ಎಂ.ಅಬ್ಬಾಸ್ ಆಲಿ, ಪದ್ಮನಾಭ ರೈ, ಚಂದ್ರಹಾಸ ಕರ್ಕೇರ, ಧನಲಕ್ಷ್ಮೀ ಬಂಗೇರ, ಸುದರ್ಶನ ಜೈನ್, ಪ್ರಶಾಂತ್ ಕುಲಾಲ್, ಚಿತ್ತರಂಜಜನ್ ಶೆಟ್ಟಿ, ಪರಮೇಶ್ವರ ಮೂಲ್ಯ, ಮಹಮ್ಮದ್ ನಂದರಬೆಟ್ಟು, ಲುಕ್ಮಾನ್, ಸಿದ್ಧೀಕ್ ಗುಡ್ಡೆಯಂಗಡಿ, ಕಾಂಚಲಾಕ್ಷಿ, ವಾಸು ಪೂಜಾರಿ, ಮಹಮ್ಮದ್ ನಂದಾವರ, ಮಹಮ್ಮದ್ ಶರೀಫ್, ಜಯಂತಿ ಪೂಜಾರಿ, ಜೆಡಿಎಸ್ ಪ್ರಮುಖರಾದ ಪಿ.ಎ.ರಹೀಂ, ಮಹಮ್ಮದ್ ಶಫಿ, ಹಾರೂನ್ ರಶೀದ್ ಸಹಿತ ಪ್ರಮುಖ ನಾಯಕರು, ತಾಪಂ, ಪುರಸಭೆ ಸದಸ್ಯರು, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಸ್ವಾಗತಿಸಿ, ಸುದೀಪ್ ಕುಮಾರ್ ಮಾಣಿ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಮೋದಿಗಾಗಿ ಮತ ನೀಡಿ ಎಂದವರು ಈಗ ಯಾಕೆ ಪ್ರಧಾನಿಗೆ ಪತ್ರ ಬರೆಯುತ್ತಿಲ್ಲ: ರೈ ಪ್ರಶ್ನೆ"