ಪ್ರವಾಹದಿಂದ ತೊಂದರೆಗೊಳಗಾದ ಬಂಟ್ವಾಳ ತಾಲೂಕಿಗೆ 30 ಕೋಟಿ ರೂಗಳ ಪರಿಹಾರ ನೀಡುವಂತೆ ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಸೋಮವಾರ ದ.ಕ.ಜಿಲ್ಲಾ ಪ್ರವಾಸ ನಡೆಸಿದ ಸಿಎಂ, ಬೆಳ್ತಂಗಡಿ ತಾಲೂಕಿನಿಂದ ಹಿಂತಿರುಗುವ ವೇಳೆ ಬಂಟ್ವಾಳ ಬಪಾಸ್ ಜಂಕ್ಷನ್‌ನಲ್ಲಿ ಕಾರು ನಿಲ್ಲಿಸಿ, ಶಾಸಕರಿಂದ ಮನವಿ ಸ್ವೀಕರಿಸಿದರು. ಈ ಸಂದರ್ಭ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿಗೆ ಸ್ವಾಗತ ಕೋರಿದರು.
ಬಳಿಕ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್, ಬಂಟ್ವಾಳದ ಹಾನಿಯ ಕುರಿತಂತೆ ಸಂಪೂರ್ಣ ದಾಖಲೆಗಳನ್ನೊಳಗೊಂಡು ಪರಿಹಾರ ಮೊತ್ತದ ಬೇಡಿಕೆ ಸಲ್ಲಿಸಲಾಗಿದ್ದು, ತಾಲೂಕಿನಲ್ಲಿ ನೆರೆಯಿಂದ ಹಾನಿಯಾದ ಸಣ್ಣಪುಟ್ಟ ಅಂಗಡಿಯವರಿಗೂ ಪರಿಹಾರ ನೀಡಲು ಮನವಿಯಲ್ಲಿ ತಿಳಿಸಲಾಗಿದೆ ಎಂದರು.
ಸಂಸದ ನಳಿನ್‌ಕುಮಾರ್ ಕಟೀಲು, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕ ರುಕ್ಮಯ ಪೂಜಾರಿ, ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್, ಬಂಟ್ವಾಳ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ಕಮಲಾಕ್ಷಿ ಪೂಜಾರಿ, ಪ್ರಮುಖರಾದ ಎ.ಗೋವಿಂದ ಪ್ರಭು, ಪ್ರಕಾಶ್ ಅಂಚನ್, ದಿನೇಶ್ ಅಮ್ಟೂರು ಸಹಿತ ಪಕ್ಷ ಪ್ರಮುಖರು ಉಪಸ್ಥಿತರಿದ್ದರು. ಸಿಎಂ ಆಗಮನ ಹಿನ್ನೆಲೆಯಲ್ಲಿ ಎಎಸ್ಪಿ ಸೈದುಲು ಅದಾವತ್, ಸಿಐ ನಾಗರಾಜ್, ಎಸ್ಸೈ ಚಂದ್ರಶೇಖರ್ ನೇತೃತ್ವದಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು.
Be the first to comment on "ಬಂಟ್ವಾಳಕ್ಕೆ 30 ಕೋಟಿ ರೂ ಪರಿಹಾರ ನೀಡಲು ಸಿಎಂಗೆ ಮನವಿ"