ಬಂಟ್ವಾಳ ಸುತ್ತಮುತ್ತ ಬುಧವಾರ ಮಳೆ ಕಡಿಮೆ ಇತ್ತು. ಆದರೆ ಜೋರಾದ ಗಾಳಿ ಬೀಸಿದ ಕಾರಣ ಕೆಲವೆಡೆ ಅವಘಡಗಳು ಸಂಭವಿಸಿವೆ. ಘಟ್ಟ ಪ್ರದೇಶದಲ್ಲಿ ಮಳೆಯಾಗಿರುವ ಕಾರಣ ನೇತ್ರಾವತಿ ನೀರಿನ ಮಟ್ಟದಲ್ಲಿ ಆಗಾಗ್ಗೆ ಏರಿಳಿತ ಕಂಡುಬಂತು. ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ 7 ಮೀಟರ್ ಮಧ್ಯಾಹ್ನ 1 ಗಂಟೆಗೆ ಇತ್ತು.
ತುಂಬೆ – ಆ.7, ಮಧ್ಯಾಹ್ನ
ನೇತ್ರಾವತಿ ನದಿ ನೀರಿನ ಮಟ್ಟ ಬೆಳಗ್ಗೆ 8.4 ಇದ್ದರೆ, ಮಧ್ಯಾಹ್ನ 1 ಗಂಟೆಗೆ 8.2 ಇತ್ತು. ಅಪಾಯದ ಮಟ್ಟ 8.5 ಆಗಿದ್ದು, ಯಾವುದೇ ಕ್ಷಣದಲ್ಲಿ ಅಪಾಯದ ಮಟ್ಟ ತಲುಪಬಹುದು ಎನ್ನಲಾಗಿದೆ.
ಕಡೇಶಿವಾಲಯ, ಅಜಿಲಮೊಗರು ಮಧ್ಯೆ ಹರಿಯುವ ನೇತ್ರಾವತಿ ನದಿಯಲ್ಲಿ ನೀರಿನ ಏರಿಕೆಯಾದ ಕಾರಣ ಅಜಿಲಮೊಗರು ಮಸೀದಿ ಬಳಿ ನೀರು ಉಕ್ಕಿ ಹರಿದರೆ, ಸಮೀಪದ ರಸ್ತೆಯಲ್ಲೆಲ್ಲಾ ನದಿ ನೀರು ಹರಿಯಿತು. ಕಡೇಶಿವಾಲಯ ದೇವಸ್ಥಾನದ ಸನಿಹವೂ ನದಿ ನೀರು ಬಂದಿದೆ. ಪ್ರತಿ ವರ್ಷ ಮಳೆ ಬಂದಾಗ ಸಮಸ್ಯೆಯಾಗುವ ಪಾಣೆಮಂಗಳೂರಿನ ಆಲಡ್ಕ, ಬಂಟ್ವಾಳದ ಬಡ್ಡಕಟ್ಟೆ, ಜಕ್ರಿಬೆಟ್ಟು ಪ್ರದೇಶಗಳಲ್ಲಿ ಬುಧವಾರವೂ ನೀರು ನುಗ್ಗಿದ್ದು, ಮೊದಲೇ ಮುಂಜಾಗರೂಕತಾ ಕ್ರಮ ಕೈಗೊಂಡ ಕಾರಣ ಯಾರಿಗೂ ಅಪಾಯವಾಗಿಲ್ಲ.
ಮೆಸ್ಕಾಂ ಸಿಬ್ಬಂದಿಗೆ ಶ್ಲಾಘನೆ: ಸಾಮಾನ್ಯವಾಗಿ ಮಳೆ ಬಂದಾಗ ವಿದ್ಯುತ್ ಕೈಕೊಡುವುದು ವಾಡಿಕೆ. ಆದರೆ ಈ ಬಾರಿ ಮೆಸ್ಕಾಂ ಸಿಬ್ಬಂದಿ ವಿದ್ಯುತ್ ವಯರುಗಳಿಗೆ ಗೆಲ್ಲು ಬೀಳುವುದು ಅಥವಾ ಇನ್ನಿತರ ಸಮಸ್ಯೆಗಳಿದ್ದಾಗ, ಗಾಳಿ ಮಳೆಗೇ ಸ್ಥಳಕ್ಕೆ ತೆರಳಿ ದುರಸ್ತಿ ಕ್ರಮ ಕೈಗೊಂಡಿರುವುದು ಶ್ಲಾಘನೆಗೆ ಒಳಗಾಗಿದೆ.
Be the first to comment on "ಮಳೆ ಇಳಿಮುಖ, ನೇತ್ರಾವತಿ ನೀರಿನ ಮಟ್ಟ ಏರಿಳಿತ"