ಸದಾ ಕೈಯಲ್ಲೊಂದು ಪುಸ್ತಕ, ಗಂಭೀರ ಮುಖಭಾವ, ಪರಿಚಯವಿದ್ದವರು ಕಂಡರೆ ಅವರನ್ನು ಆತ್ಮೀಯವಾಗಿ ಕೈಹಿಡಿದು ಪಕ್ಕದಲ್ಲಿ ಕೂರಿಸುವ ಹಿರಿಯರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸಾಹಿತ್ಯ ಚಟುವಟಿಕೆಗಳಲ್ಲಿ ಸದಾ ತೊಡಗಿಸಿಕೊಂಡಿದ್ದ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಇನ್ನಿಲ್ಲ.
ಅವರ ಮನೆ ಎಂದರೆ ಅದೊಂದು ಸಾಹಿತ್ಯದ ಭಂಡಾರ. 94ರ ವಯಸ್ಸಿನಲ್ಲೂ ಜಗತ್ತಿನ ಚಟುವಟಿಕೆಗಳನ್ನು ತಿಳಿಯುವ ಉತ್ಸಾಹ. ಬಿ.ಸಿ.ರೋಡಿಗೆ ತನ್ನ ವಾಹನದಲ್ಲಿ ಬಂದರೆ ಚಾಲಕನ ಬಳಿ ಎಲ್ಲಾ ಪತ್ರಿಕೆಗಳನ್ನೂ ಖರೀದಿಸಿ, ಕಾರಿನಲ್ಲಿಯೇ ಹೆಡ್ ಲೈನ್ ಓದುವ ಉತ್ಸಾಹ.
ಅವರ ಸಾಧನೆಗಳ ಕುರಿತು ಎರಡು ವರ್ಷಗಳ ಹಿಂದೆ ಬಂಟ್ವಾಳದಲ್ಲಿ ಕಾರ್ಯಕ್ರಮ ನಡೆದಿತ್ತು. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಹಕಾರ, ಸಾಹಿತ್ಯ, ಸಂಘಟನೆ, ಸಮಾಜಸೇವೆ ಹೀಗೆ ಡಾ. ಏರ್ಯ ಅವರದ್ದು ಅವಿಶ್ರಾಂತ ದುಡಿಮೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಮೊಡಂ ಕಾಪು ಬಳಿಯ ಏರ್ಯ ಬೀಡು ಮನೆಯಲ್ಲಿ ಜನಿಸಿದ ಅವರ ತಂದೆ ಮಾವಂತೂರ ಸುಬ್ಬಯ್ಯ ಆಳ್ವ, ತಾಯಿ ಸೋಮಕ್ಕೆ ಆಳ್ವ.
ಜುಲೈ 27ರ ಶನಿವಾರ ರಾತ್ರಿ 9.20ಕ್ಕೆ ಮಂಗಳೂರಿನ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಪತ್ನಿ ಆನಂದಿ ರೈ, ಪುತ್ರಿ ಸುಖದಾ ಅಳಿಯ ಬಾಲಕೃಷ್ಣ ಹೆಗ್ಡೆ ಮತ್ತು ಅಪಾರ ಬಂಧು, ಮಿತ್ರರು, ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ನಿಧನ ಹೊಂದುವ ವೇಳೆ ಅವರಿಗೆ 94 ವರ್ಷ ವಯಸ್ಸಾಗಿತ್ತು.
ಜಾನಪದ ಸೊಗಡಿನ ಕವಿ, ಸಹಕಾರ, ರಾಜಕೀಯ, ಸಾಹಿತ್ಯ, ಸಾಮಾಜಿಕ, ಶಿಕ್ಷಣ, ಧಾರ್ಮಿಕ, ಸಂಘಟನೆ, ನಾಟಕ, ಚಲನಚಿತ್ರ, ಯಕ್ಷಗಾನ ಕ್ಷೇತ್ರಗಳಲ್ಲಿ ಏರ್ಯ ತೊಡಗಿಸಿಕೊಂಡಿದ್ದರು. ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ, ಸ್ಥಳೀಯ ಗ್ರಾಪಂ ಅಧಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ನೂರಾರು ಲೇಖನ, ಕವನಗಳನ್ನು ಬರೆದಿದ್ದಾರೆ. ದ.ಕ.ಜಿಲ್ಲಾ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರೂ ಆಗಿದ್ದ ಅವರು, ಎಸ್. ಡಿಎಂ, ಎಸ್.ವಿ.ಎಸ್, ದೀಪಿಕಾ ಶಿಕ್ಷಣ ಸಂಸ್ಥೆಗಳ ಆಡಳಿತ ಸಮಿತಿಯಲ್ಲಿದ್ದವರು. ಜಾನಪದ ಟ್ರಸ್ಟ್, ವಿಹಿಂಪ, ನಾನಾ ಹಿರಿಯ ಸಾಹಿತಿಗಳ ಸಮಾವೇಶ ಸಂಘಟನೆ, ಭೂಮಿಕಾ ಮಂಗಳೂರು, ಮಂಗಳಾ ಫಿಲ್ಮ್ ಸೊಸೈಟಿ ಹೀಗೆ ಅವರ ಕ್ಷೇತ್ರ ವಿಸ್ತಾರ. ಸಹಜವಾಗಿಯೇ ಪ್ರಶಸ್ತಿಗಳು ಏರ್ಯರನ್ನು ಅರಸಿಕೊಂಡು ಬಂದಿವೆ.
ಸಂತಾಪ: ಡಾ. ಏರ್ಯ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ.ರಮಾನಾಥ ರೈ,, ಫರಂಗಿಪೇಟೆ ಸೇವಾಂಜಲಿಯ ಟ್ರಸ್ಟಿ ಕೃಷ್ಣಕುಮಾರ ಪೂಂಜ ಸಹಿತ ಹಲವರು ಕಂಬನಿ ಮಿಡಿದಿದ್ದಾರೆ. ಅಂತ್ಯಸಂಸ್ಕಾರ ಏರ್ಯಬೀಡಿನಲ್ಲಿ ಭಾನುವಾರ ಸಂಜೆ 4 ಗಂಟೆಗೆ ನಡೆಯಲಿದೆ.
Editor: Harish Mambady www.bantwalnews.com
Be the first to comment on "ಸಾಹಿತಿ, ಸಹಕಾರಿ, ಪ್ರಗತಿಶೀಲ ಚಿಂತಕರಾಗಿದ್ದ ಡಾ. ಏರ್ಯ"