ಹಲಸಿನ ಮೌಲ್ಯವರ್ಧನೆಗೆ ಹಲಸುಮೇಳ ಪ್ರಯೋಜನಕಾರಿ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದರು.
ಶ್ರೀರಾಮ ಪದವಿ ವಿದ್ಯಾಲಯದ ದಶಮಾನೋತ್ಸವ ಪ್ರಯುಕ್ತ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶುಕ್ರವಾರ ನಡೆದ ಹಲಸುಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಬಡವರ ಹಣ್ಣು ಎಂದೇ ಖ್ಯಾತಿ ಪಡೆದ, ಯಾವುದೇ ರಾಸಾಯನಿಕದ ಬಳಕೆಯಿಲ್ಲದೇ ಬೆಳೆದ ಒಂದು ಸಂಪೂರ್ಣ ಆಹಾರ ಹಲಸು. ಇಂದು ಬೇರೆ ಬೇರೆ ಪ್ರಯೋಗಕ್ಕೆ ಒಳಗಾಗಿ ವಿವಿಧ ಮುಖಗಳಲ್ಲಿ ಒಂದು ಪ್ರಮುಖ ಬೆಳೆಯೆಂದು ಗುರುತಿಸಲ್ಪಟ್ಟಿದೆ. ಇಂತಹ ಹಲಸನ್ನು ಆಧಾರವಾಗಿಟ್ಟು ಆಯೋಜಿಸಿದ ಹಲಸಿನ ಮೇಳದಿಂದಾಗಿ ವಿಜ್ಞಾನದೊಂದಿಗೆ ಜೀವನ ವಿಜ್ಞಾನವನ್ನೂ ಬೋಧಿಸಿದಂತಾಗಿದೆ. ಇದು ಹಲಸನ್ನು ಮೌಲ್ಯವರ್ಧಿತಗೊಳಿಸುವ ಪ್ರಯೋಗಾತ್ಮಕವಾದ ಕಾರ್ಯಕ್ರಮವಾದರೂ ಮುಂದೆ ಇದೊಂದು ಕ್ರಾಂತಿಕಾರಕ ಬದಲಾವಣೆ ತರಬಲ್ಲ ಹೆಜ್ಜೆಯಾಗಿದೆ. ಆಧುನಿಕ ಕಾಲಕ್ಕೆ ಬೇಕಾದಂತೆ ಹಲಸು ತನ್ನ ಮೌಲ್ಯವರ್ಧಿಸಿಕೊಂಡು ಬೆಳೆಯುತ್ತಿರುವುದು ಶ್ಲಾಘನೀಯ. ಇದಕ್ಕೆ ಇಂತಹ ಹಲಸುಮೇಳಗಳು ಪೂರಕಕ್ತಿಯನ್ನು ಒದಗಿಸಿದೆ ಎಂದು ಹೇಳಿದರು.
ಹಲಸು ಕೇವಲ ಆಹಾರಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಪೂರಕವಾದುದು ಹೋಮಾದಿಗಳಿಗೆ ಹಲಸಿನ ಚಕ್ಕೆ, ಎಲೆಯನ್ನು ಬಳಸಿ ತುಪ್ಪದೊಂದಿಗೆ ಬೆರೆಸಿ ಉಪಯೋಗಿಸಿದಾಗ ವಾತ ಮುಂತಾದ ರೋಗಗಳು ಗುಣವಾಗುತ್ತದೆ. ತರಕಾರಿಯಲ್ಲೂ ನಾವು ಕ್ರಾಂತಿಕಾರಕ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದೇವೆ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದರೆ ಉದ್ಯೋಗವನ್ನು ನಮ್ಮಲ್ಲೇ ಸೃಷ್ಟಿಸಿಕೊಂಡು ಬೆಳೆಯಬಹುದು ಎಂದು ಪ್ರಗತಿಪರ ಕೃಷಿಕ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯ ಸೇಡಿಯಾಪು ಜನಾರ್ಧನ ಭಟ್ ನುಡಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಸ್ವಾಗತಿಸಿ, ರಾಜ್ಯಶಾಸ್ತ್ರ ಉಪನ್ಯಾಸಕಿ ಜಯಲಕ್ಷ್ಮೀ ವಂದಿಸಿ, ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಸ್ವರ್ಣಗೌರಿ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಮೌಲ್ಯವರ್ಧನೆಗೆ ಹಲಸುಮೇಳ ಪ್ರಯೋಜನಕಾರಿ: ಕ್ಯಾಂಪ್ಕೊ ಅಧ್ಯಕ್ಷ ಸತೀಶ್ಚಂದ್ರ"