- ಸೋಶಿಯಲ್ ಮೀಡಿಯಾ ಸಂದೇಶ ಗಮನಿಸಬೇಡಿ, ಆತಂಕ ಬೇಡ – ಮನವಿ
ಬಂಟ್ವಾಳ ತಾಲೂಕಿನಲ್ಲಿ ಕಳೆದ ರಾತ್ರಿಯಿಂದೀಚೆಗೆ ಒಟ್ಟು ಒಂಭತ್ತು ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಸರಕಾರಿ ಮತ್ತು ಖಾಸಗಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಇದರಲ್ಲಿ ವಾಹನ ಚಾಲಕರು ಮತ್ತು ಕೆಲ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ಭಂಡಾರಿಬೆಟ್ಟುವಿನಲ್ಲಿ ಸೋಮವಾರ ರಾತ್ರಿ ಕೆಎಸ್ಸಾರ್ಟಿಸಿ ಬಸ್ಸಿಗೆ ಕಲ್ಲು ತೂರಾಟ ನಡೆಸಿದ್ದರೆ, ಮಂಗಳವಾರ ಬೆಳಗ್ಗೆ ಮೇಲ್ಕಾರ್ ಮತ್ತು ಕುದ್ರೆಬೆಟ್ಟಿನಲ್ಲಿ ಖಾಸಗಿ ಬಸ್ಸುಗಳಿಗೆ ಕಲ್ಲು ತೂರಲಾಗಿದೆ. ಮಂಗಳವಾರ ಬೆಳಗ್ಗೆ ಶಂಭೂರು ಸಮೀಪ ಶೇಡಿಗುರಿ ಬಳಿ ಕೆಎಸ್ಸಾರ್ಟಿಸಿ ಬಸ್ಸಿಗೆ ಕಲ್ಲು ತೂರಾಟ ನಡೆಸಲಾಗಿದ್ದು, ಎಲ್ಲ ಘಟನೆಗಳೂ ಮಂಗಳವಾರ 7ರಿಂದ 9ರೊಳಗೆ ನಡೆದಿದೆ. ಘಟನೆಯಲ್ಲಿ ಬಸ್ಸುಗಳ ಚಾಲಕರು ಹಾಗೂ ಕೆಲ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಈ ಬಗ್ಗೆ ನಾಗರಿಕರು ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ. ಸದ್ಯದಲ್ಲೇ ಇಂತಹ ಸಮಾಜವಿರೋದಿ ಚಟುವಟಿಕೆ ಮಾಡುತ್ತಿರುವ ಇಂತಹ ಕಿಡಿಗೇಡಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಬಂಟ್ವಾಳದಾದ್ಯಂತ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದ್ದು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
ದ.ಕ ಜಿಲ್ಲಾ ವಿಟ್ಲ ಮತ್ತು ಬಂಟ್ವಾಳ ಠಾಣಾ ವ್ಯಾಪ್ತಿಗಳಲ್ಲಿ ಒಟ್ಟು 9 ಬಸ್ಸುಗಳಿಗೆ ಕಲ್ಲು ಬಿಸಾಡಿದ ಬಗ್ಗೆ ಪ್ರಕರಣ ದಾಖಲಾಗಿದ್ದು. ಕೆಲವು ಕಿಡಿಗೇಡಿಗಳು ಈ ಕೃತ್ಯವನ್ನು ನಡೆಸಿರುವುದಾಗಿದೆ. ಈ ಬಗ್ಗೆ ಪೋಲೀಸರು ತನಿಖೆ ನಡೆಸುತ್ತಿದ್ದು ಅತೀ ಶೀಘ್ರದಲ್ಲಿ ಪ್ರಕರಣವನ್ನು ಪತ್ತೆ ಹಚ್ಚಲು ಪೊಲೀಸರ ತಂಡ ರಚನೆ ಮಾಡಿದ್ದು ಸಾರ್ವಜನಿಕರು ವಿಷಯದ ಬಗ್ಗೆ ಯಾವುದೇ ಆತಂಕಕ್ಕೊಳಗಾಗಬಾರದಾಗಿ ಹಾಗೂ ಇಲ್ಲಸಲ್ಲದ ಸಾಮಾಜಿಕ ಜಾಲತಾಣದಲ್ಲಿ ಬರುವ ಸಂದೇಶಗಳಿಗೆ ಕಿವಿಕೊಡದಂತೆ ವಿನಂತಿಸಲಾಗಿದೆ. ಈ ಪ್ರಕರಣದ ಬಗ್ಗೆ ಬಂಟ್ವಾಳ ವ್ಯಾಪ್ತಿಯಲ್ಲಿ ಹೆಚ್ಚುವರಿ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡಿದ್ದು ಸೂಕ್ತ ಬಂದೋಬಸ್ತು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
Be the first to comment on "ಬಂಟ್ವಾಳ ಪರಿಸರದಲ್ಲಿ 9 ಬಸ್ ಗಳ ಮೇಲೆ ಕಲ್ಲು ತೂರಾಟ: ಆರೋಪಿಗಳ ಪತ್ತೆಗೆ ಕ್ರಮ – ಎಸ್ಪಿ"