ಶತಮಾನೋತ್ತರ ಬೆಳ್ಳಿ ಹಬ್ಬದ ಆಚರಣೆಯೇ ದೇವರ ಮೇಲಿರುವ ನಿಜವಾದ ಪ್ರೀತಿ, ಬೊರಿಮಾರ್ ಚರ್ಚ್ ನಲ್ಲಿ ಇದು ಸಾಕ್ಷಾತ್ಕಾರಗೊಳ್ಳುತ್ತಿದೆ ಎಂದು ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಬಿಷಪ್ ಡಾ| ಫ್ರಾನ್ಸಿಸ್ ಸೆರಾವೊ ಹೇಳಿದರು.
ಶತಮಾನೋತ್ತರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಬಂಟ್ವಾಳ ತಾಲೂಕಿನ ಬೊರಿಮಾರ್ ಚರ್ಚ್ ಗೆ ಆದಿತ್ಯವಾರ ಸಂಜೆ ಭೇಟಿ ನೀಡಿದ ಅವರು,ಬೊರಿಮಾರ್ ಚರ್ಚ್ ನ ವ್ಯಾಪ್ತಿಗೆ ಒಳಪಟ್ಟು ವಿದೇಶದಲ್ಲಿ ಉದ್ಯೋಗ ನಿಮಿತ್ತ ನೆಲೆಸಿರುವವರ ಹೆಸರಿನಲ್ಲಿ ವಿಶೇಷ ಬಲಿಪೂಜೆಯನ್ನು ನೆರವೇರಿಸಿ ಆಶೀರ್ವಚನ ನೀಡಿದರು.
ಕಳೆದ ೧೨೫ ವರ್ಷದಲ್ಲಿ ದೇವರು ವಿಶೇಷ ರೀತಿಯಲ್ಲಿ ಬೊರಿಮಾರ್ ಚರ್ಚ್ ನಲ್ಲಿ ವಾಸಿಸಿ ಬಂದಿರುವ ಭಕ್ತಾದಿಗಳಿಗೆ ನೀಡಿದ ಆಶೀರ್ವಾದಕ್ಕೆ ಪ್ರತೀ ತಿಂಗಳಿನಲ್ಲಿ ಆಚರಿಸುವ ನಾನಾ ಕಾರ್ಯಕ್ರಮಗಳೇ ಸಾಕ್ಷಿ ಮತ್ತು ದೇವರ ಮೇಲೆ ತೋರಿಸಿದ ಪ್ರೀತಿ ಎಂದಿಗೂ ಕರಗಿ ಹೋಗದು, ಅವನು ಯಾವತ್ತೂ ನಮ್ಮೊಂದಿಗಿದ್ದಾನೆ ಎಂದು ಅವರು ಹೇಳಿದರು. ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸುವ ಅದೃಷ್ಟವನ್ನು ದೇವರು ನನಗೂ ಕರುಣಿಸಿದ್ದಕ್ಕಾಗಿ ದೇವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದ ಅವರು, ಈ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ ಧರ್ಮಗುರು ವಂದನೀಯ ಗ್ರೆಗರಿ ಪಿರೇರಾ, ಪಾಲನಾ ಸಮಿತಿಯ ಉಪಾಧ್ಯಕ್ಷರಾದ ರೋಷನ್ ಮಾರ್ಟಿಸ್ರವರನ್ನು ಅಭಿನಂದಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲರಾದ ವಂದನೀಯ ಫಾದರ್ ರೋಬರ್ಟ್ ಡಿ?ಸೋಜ ವಿದೇಶದಲ್ಲಿ ಉದ್ಯೋಗ ನಿಮಿತ್ತ ನೆಲೆಸಿರುವವರ ಕುಟುಂಬದವರಿಗೆ ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿದರು. ವಂದನೀಯ ಫಾದರ್ ಲ್ಯಾನ್ಸಿ ಮತ್ತು ವಿಕ್ಟರ್ ಡಯಾಸ್, ಸಿಸ್ಟರ್ ನ್ಯಾನ್ಸಿ,ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ಪ್ರೀತಿ ಲ್ಯಾನ್ಸಿ ಪಿರೇರಾ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶಿವಮೊಗ್ಗ ಬಿಷಪ್ ಡಾ.ಫ್ರಾನ್ಸಿಸ್ ಸೆರಾವೋ ರವರನ್ನು ಚರ್ಚ್ ಪಾಲನಾ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ರೋಷನ್ ಮಾರ್ಟಿಸ್ ಸ್ವಾಗತಿಸಿದರು. ಚರ್ಚ್ನ ಧರ್ಮಗುರು ವಂದನೀಯ ಫಾದರ್ ಗ್ರೆಗರಿ ಪಿರೇರಾ ವಂದಿಸಿದರು. ಅರಬ್ ದೇಶದಲ್ಲಿ ಬಹುವರ್ಷ ಉದ್ಯೋಗದಲ್ಲಿದ್ದು ನಿವೃತ್ತಿ ಜೀವನ ನಡೆಸುತ್ತಿರುವ ತೋಮಸ್ ಲಸ್ರಾದೋ ರವರು ಅರಬ್ ವೇಷಭೂಷಣ ಧರಿಸಿ ಕಾರ್ಯಕ್ರಮ ನಿರ್ವಹಿಸಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಿತು.ಬಲಿಪೂಜೆಯ ಬಳಿಕ ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಇದೇ ಸಂದರ್ಭ ವಿದೇಶದಲ್ಲಿ ಉದ್ಯೋಗದಲ್ಲಿರುವವರ ಪ್ರಾಯೋಜಕತ್ವದಲ್ಲಿ ಜೆರಿ ಮತ್ತು ಜೆರಿ ನೈಟ್ ಬಳಗದಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.
Be the first to comment on "ಶತಮಾನೋತ್ತರ ಬೆಳ್ಳಿ ಹಬ್ಬದ ಆಚರಣೆಯೇ ದೇವರ ಮೇಲಿರುವ ಪ್ರೀತಿ : ಬಿಷಪ್ ಸೆರಾವೊ"