ಹಿರಿಯ ಪತ್ರಕರ್ತ ಉದಯಕುಮಾರ ಪೈ ಬರೆಯುತ್ತಿರುವ ಡಾ. ರಾಜ್ ಕುರಿತ ಸರಣಿ ಲೇಖನವಿದು
ವಿಜಯಚಿತ್ರ, ರೂಪತಾರಾ ದಶಕಗಳ ಕಾಲ ಸಿನಿಮಾ ಪತ್ರಕರ್ತರಾಗಿ ಚೆನ್ನೈ, ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಉದಯ ಕುಮಾರ್ ಪೈ ಸದ್ಯ ಮಣಿಪಾಲದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಕನ್ನಡ ಸಿನಿಮಾದ ಬ್ಲ್ಯಾಕ್ ಅಂಡ್ ವೈಟ್ ಯುಗದಿಂದ ಇಂದಿನವರೆಗಿನ ಸಿನಿಮಾಗಳು, ನಟರ ಬದುಕನ್ನು ಹತ್ತಿರದಿಂದ ನೋಡಿರುವ ಅವರು ಡಾ. ರಾಜ್ ಕುಮಾರ್ ಕುರಿತು ಸರಣಿ ಬರೆಹಗಳನ್ನು ಬರೆದಿದ್ದಾರೆ.
ಹಿಂದಿನ ಸಂಚಿಕೆಗೆ ಕ್ಲಿಕ್ ಮಾಡಿರಿ
ನಾನು ನೋಡಿದ ರಾಜಕುಮಾರ
(ಕೆಲವು ಅನಿವಾರ್ಯ ಕಾರಣಗಳಿಂದ ಈ ಬರಹ ಸ್ಥಗಿತವಾಗಿದ್ದಕ್ಕೆ ಓದುಗ ಬಂಧುಗಳು ಕ್ಷಮಿಸಿ, ಈಗಿನ ಕಂತನ್ನು ಓದಬೇಕಾಗಿ ವಿನಂತಿ)
ಈ ಟೆಲಿನಾಟಕದ ಬಳಿಕ ಇಂಥ ಬರವಣಿಗೆಗೆ ಪುನಃ ಮನಸ್ಸು ಮಾಡಲಿಲ್ಲ. ನಿರಾಸಕ್ತಿ ಎಂದು ಹೇಳುವುದಕ್ಕಿಂತ ಬೇರೊಂದು ತುರ್ತು ಚಟುವಟಿಕೆಯಲ್ಲಿ ತೊಡಗಿದ್ದೆ. ಸಂಬಳಕ್ಕಾಗಿ ಸಮಾಜವಾದ, ಎಡಪಂಥೀಯ ಚಿಂತನೆಗಳನ್ನು ಮುದ್ರಿಸಿ ಪ್ರಕಟಿಸುವ ಸಂಸ್ಥೆಯಲ್ಲಿ ದುಡಿಯುತ್ತಿದ್ದರೂ, ಹೊರಗೆ ತದ್ವಿರುದ್ಧ ಚಟುವಟಿಕೆಯಲ್ಲಿ ತೊಡಗಿದ್ದೆ. ಹಾಗಾಗಿ ಇಂಥ ಬರವಣಿಗೆಗೆ ಅಲ್ಪ ವಿರಾಮ ನೀಡಿದೆ, ಬಳಿಕ ಅದು ಪೂರ್ಣವಿರಾಮವಾಯಿತು.
ದುಡಿಯುವ ವರ್ಗದ, ಕಾರ್ಮಿಕರ ಹಿತ ಕಾಯುವ ಸಿದ್ಧಾಂತ ಪ್ರಕಟಿಸಿ, ಪ್ರಚುರಗೊಳಿಸುವ ನ್ಯೂ ಸೆಂಚ್ಯುರಿ ಪ್ರೆಸ್ ನ ಕಾರ್ಮಿಕರ ಸ್ಥಿತಿ, ಬಂಡವಾಳಶಾಹಿ ಸಂಸ್ಥೆಗಳಲ್ಲಿ ದುಡಿಯುವ ಕಾರ್ಮಿಕರ ಸ್ಥಿತಿಗಿಂತ ಸಾಕಷ್ಟು ಕೆಳಗಿತ್ತು. ಅಂದಹಾಗೆ ನ್ಯೂ ಸೆಂಚ್ಯೂರಿ ಪ್ರೆಸ್ , ಸ್ಟೇಟ್ ಕ್ಯಾಪಿಟಲಿಸಂ ನೀತಿ ಹೊಂದಿದ ಅಂದಿನ ಸೋವಿಯತ್ ಒಕ್ಕೂಟ ಪ್ರಾಯೋಜಿತ ಭಾರತೀಯ(ಮದರಾಸು) ಮೂಲದ ಖಾಸಗಿ ಒಡೆತನದ ಮುದ್ರಣಾಲಯ ಎಂಬುದು ಗಮನಾರ್ಹ. ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ, ಅಲ್ಲಿ ಮುದ್ರಿತವಾಗುವ ‘ಸೋವಿಯತ್ ಸಮೀಕ್ಷೆ'(ಸಾಪ್ತಾಹಿಕ)ಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸೋವಿಯತ್ ಒಕ್ಕೂಟದ ಆರ್ಥಿಕ ನೀತಿಯಿಂದಾಗಿ ಜೀವನಾವಶ್ಯಕ ವಸ್ತುಗಳ ಬೆಲೆ ೧೯೧೭ರ ಅಕ್ಟೋಬರ್ ಕ್ರಾಂತಿಯಿಂದ ತೊಡಗಿ ಅಂದಿನವರೆಗೂ ಸ್ವಲ್ಪವೂ ಏರದೇ ಸ್ಥಿರತೆ ಕಾಯ್ದುಕೊಂಡಿದೆ ಎಂದು ಉದಾಹರಣೆಯಾಗಿ, ಒಂದು ಲೋಫ್ ಬ್ರೆಡ್ ಭಾರತೀಯ ಮೌಲ್ಯದಂತೆ ೬೦ ಪೈಸೆಗೆ ಲಭಿಸುತ್ತದೆ ಎಂದು ಪ್ರಕಟವಾಗುತ್ತಿತ್ತು. ಅಲ್ಲಿನ ಕಾರ್ಮಿಕರೆಲ್ಲ ಇದನ್ನು ಓದಿ, ‘ಸೋವಿಯತ್ ಒಕ್ಕೂಟದಲ್ಲಿ ಒಂದು ಲೋಫ್ ಬ್ರೆಡ್ ಬೆಲೆ ಹೇಗೆ ಏರಲಿಲ್ಲವೋ ಅದೇ ರೀತಿ ನಮ್ಮ ಸಂಬಳವೂ ಅಷ್ಟಾಗಿ ಏರದೇ ಸಾಕಷ್ಟು ಸ್ಥಿರತೆ ಕಾಯ್ದುಕೊಂಡಿದೆ’ ಎಂದು ತಮ್ಮ ಸಂಕಟಕ್ಕೆ ಹಾಸ್ಯದ ಲೇಪ ನೀಡುತ್ತಿದ್ದರು.
ಏನೇ ಇರಲಿ, ಕುಟುಂಬ ನರ್ವಹಣೆಗಾಗಿ, ಆರ್ಥಿಕವಾಗಿ ಸಶಕ್ತನಾಗಲು ಇದಕ್ಕಿಂತ ಹೆಚ್ಚು ಸಂಬಳ ಸಿಗುವ ಬೇರೆ ಯಾವುದಾದರೂ ಸಂಸ್ಥೆ ಸೇರಲು ಯೋಚಿಸುತ್ತಿದ್ದೆ. ಇಂಥ ಸಂದರ್ಭದಲ್ಲಿ ಒಮ್ಮೆ ಎಂದಿನಂತೆ ಕರ್ನಾಟಕ ಸಂಘಕ್ಕೆ ಹೋದಾಗ ಕಾರ್ಯದರ್ಶಿ ಪಾಂಗಾಳ ಶ್ರೀನಿವಾಸ ರಾವ್ ‘ಹೇಗಿದ್ದೀಯಪ್ಪಾ, ಕೆಲಸ ಹೇಗಿದೆ?’ ಎಂದು ಕೇಳಿದರು. ನ್ಯೂ ಸೆಂಚುರಿಯಲ್ಲಿ ಕೆಲಸ ದೊರೆಯಲು ಅವರೇ ಕಾರಣರಾಗಿದ್ದು, ಸಂಬಳ ಸಾಲುತ್ತಿಲ್ಲ ಎಂದು ಹೇಳುವುದು (ಅದಕ್ಕೆ ಶ್ರೀಯುತರು ಯಾವುದೇ ರೀತಿಯಲ್ಲಿ ಹೊಣೆ ಅಲ್ಲದಿದ್ದರೂ) ಹೇಗೆ ಎಂಬ ಸಂಕೋಚದಿಂದ, ‘ಪರವಾಗಿಲ್ಲ ಸರ್, ಸಂಘದಿಂದಲೂ ಸ್ವಲ್ಪ ಹಣ ಸಿಗುತ್ತಿದೆಯಲ್ಲ. ಹೇಗೋ ನಿಭಾಯಿಸುತ್ತಿದ್ದೇನೆ’ ಎಂದು ಹೇಳಿದೆ. ಪ್ರಪಂಚ ಅರಿತ ಅವರಿಗೆ ನನ್ನ ಮಾತಿನ ಅರ್ಥ ತಿಳಿಯಿತು. ಕೂಡಲೇ ಅವರು ‘ನೋಡಯ್ಯ, ಒಂದು ಕೆಲಸ ಇದೆ. ಆರಂಭದಲ್ಲಿ ೩೫೦ ರೂ. ಸಂಬಳ ಕೋಡುತ್ತಾರೆ. ಮುಂದೆ ಹೆಚ್ಚಾಗುತ್ತದೆ. ಈಗಿನ ಹಾಗೆ ಬೆಳಗಿನ ೬ ಗಂಟೆಗೆಲ್ಲ ಮನೆ ಬಿಡಬೇಕಾದ ಅಗತ್ತವಿಲ್ಲ. ಪ್ಯಾರೀಸ್ ಕಾರ್ನರ್ ನಲ್ಲಿ ಆಫೀಸು, ಏನ್ ಹೇಳ್ತೀಯಾ ?’ ಎಂದು ಕೇಳಿದರು. ಈ ಸಂಬಳ ಬಾಯಲ್ಲಿ ನೀರೂರಿಸಿತು.
‘ಹೇಳಿ ಸರ್ ಎಲ್ಲಿ ?’ ಎಂದೆ. ಒಂದು ಹಾಳೆಯ ಮೇಲೆ ‘ಫಿಲ್ಮಾಲಯ’ ಎಂದು ವಿಳಾಸ ಸಹಿತ ಬರೆದುಕೊಟ್ಟು, ‘ ಹೋಗಿ ವಿಜಯನಾರಸಿಂಹ ಅವರನ್ನು ನೋಡಿ ಮಾತನಾಡು’ ಎಂದು ಸೂಚಿಸಿದರು. ಫಿಲ್ಮಾಲಯ ಎಂದರೆ ಏನು ಎಂದು ತಿಳಿಯಲಿಲ್ಲ.
‘ಸರ್, ಏನು ಕೆಲಸ ?’ ಎಂದು ಪುನಃ ಕೇಳಿದೆ.
‘ಕನ್ನಡದಲ್ಲಿ ಹೊಸದಾಗಿ ಒಂದು ಸಿನಿಮಾ ಪತ್ರಿಕೆ ಮಾಡುತ್ತಾರೆ. ಅದಕ್ಕೆ ಜನ ಬೇಕಂತೆ. ಹೋಗಿ ನೋಡು’ ಎಂದರು.
ಒಂದು ದಿನ ಕೆಲಸಕ್ಕೆ ರಜಾ ಹಾಕಿ ಪ್ಯಾರೀಸ್ ಕಾರ್ನರ್ ನಲ್ಲಿರುವ ‘ಫಿಲ್ಮಾಲಯ’ ಕಚೇರಿಗೆ ಹೋಗಿ ವಿಜಯನಾರಸಿಂಹ ಅವರನ್ನು ನೋಡಿ, ಮಾತನಾಡಿದೆ. ಆಗಿದ್ದು ಒಂದು ಅಂದುಕೊಂಡಿದ್ದೊಂದು ಎಂಬಂತೆ, ಕನ್ನಡ ಕಂಪೋಸಿಂಗ್ ಗೆ ಜನ ಬೇಕಾಗಿರಬಹುದು ಅಂದುಕೊಂಡಿದ್ದರೆ, ವಿಜಯನಾರಸಿಂಹ ಅವರು ತನಗೆ ಸಹಾಯಕನಾಗಿ ನನ್ನನ್ನು ಬರಹೇಳಿದರು.
ನನ್ನ ಸಂದರ್ಶನ (ಇಂಟರ್ ವ್ಯೂ) ನಡೆದ ರೀತಿಯೇ ವಿಚಿತ್ರ. ಅವರು ಬರೆಯಬೇಕಾಗುತ್ತದೆ ಎಂದು ಹೇಳಿದರೆ, ನನಗೆ ಬರೆಯಲು ಬರುವುದಿಲ್ಲ ಎಂದು ತಿಳಿಸಿದೆ. ಅದು ನಿಜವೂ ಅಗಿತ್ತು.ಹೀಗೆ ಇನ್ನೂ ಹಲವು ಪ್ರಶ್ನೆಗಳಿಗೆ ತಿಳಿದಿಲ್ಲ, ಸಾಧ್ಯವಿಲ್ಲ, ಗೊತ್ತಿಲ್ಲ ಎಂದು ಇದ್ದುದನ್ನು ಇದ್ದಂತೆ ತಿಳಿಸಿದೆ. ಕೊನೆಗೆ ‘ಓದಲು ಬರುತ್ತದೆಯೇ ?’ ಎಂದು ಕೇಳಿದರು. ‘ ಬರುತ್ತದೆ’ ಎಂದೆ. ‘ಬರೆದುದರಲ್ಲಿ ಕಾಗುಣಿತ ತಪ್ಪಿದರೆ ತಿದ್ದಲು ಬರುತ್ತದೆಯೇ ?’ ಎಂದು ಕೇಳಿದರು. ‘ಬರುತ್ತದೆ’ ಎಂದೆ.
ಅಷ್ಟು ಹೊತ್ತಿಗೆ ನನಗೆ ಸದ್ಯಕ್ಕೆ ನ್ಯೂ ಸೆಂಚುರಿಯೇ ಗತಿ ಎಂದು ಮನಸ್ಸಿನಲ್ಲಿ ತೀರ್ಮಾನಿಸಿದೆ. ಅಚ್ಚರಿ ಎಂದರೆ, ‘ಯಾವಾಗ ಬರ್ತೀರಿ ಕೆಲಸಕ್ಕೆ?’ ಎಂದು ವಿಜನಾರಸಿಂಹ ಕೇಳಿದರು. ಈ ಹಿತಾಘಾತ ನನಗೆ ಅನಿರೀಕ್ಷಿತ. ‘ಈ ತಿಂಗಳಲ್ಲಿ ಹತ್ತು ದಿನಗಳು ದಾಟಿವೆ. ಬರುವ ತಿಂಗಳು ಒಂದು ಅಥವಾ ಐದನೇ ತಾರೀಖಿಗೆ ಬರಬಹುದೇ?’ ಎಂದು ಕೇಳಿದೆ. ‘ಸರಿ, ಬನ್ನಿ ಕಾಫಿ ಕುಡಿಯೋಣ’ ಎಂದು ಹೇಳಿ, ಸ್ವಲ್ಪ ದೂರ ಮುಖ್ಯ ರಸ್ತೆಯಲ್ಲಿರುವ ಹೊಟೇಲಿಗೆ ಕರೆದೊಯ್ದು ತಿಂಡಿ-ಕಾಫಿ ನೀಡಿ,’ಖಂಡಿತವಾಗಿಯೂ ಬರ್ತೀರಲ್ಲ ?’ ಎಂದು ಪುನಃ ಪುನಃ ಕೇಳಿ ನಾನು ಪತ್ರಿಕೆಯಲ್ಲಿ ಅವರಿಗೆ ಸಹಾಯಕನಾಗಿ ಕೆಲಸಕ್ಕೆ ಸೇರುವುದನ್ನು ಖಚಿತಪಡಿಸಿಕೊಂಡರು.
ಅಂದಹಾಗೆ ವಿಜಯನಾರಸಿಂಹ ಚಿತ್ರ ಸಾಹಿತಿ, ಗೀತ ರಚನೆಕಾರರು ಎಂದು ನನಗೆ ತಿಳಿದು ಬರುವಾಗ ‘ಫಿಲ್ಮಾಲಯ’ ಪತ್ರಿಕೆ ಸೇರಿ ಆರು ತಿಂಗಳು ಕಳೆದಿದ್ದವು. ನನ್ನ ತಿಳಿವಳಿಕೆಯ ಮಟ್ಟ, ಸಾಮಾನ್ಯ ಜ್ಞಾನ ಎಷ್ಟಿತ್ತೆಂಬುದನ್ನು ಯಾರೂ ಊಹಿಸಬಹುದು. ಆದರೆ ನನ್ನಂಥ ಮಂಕುದಿಣ್ಣೆ ಕಡೆಯಿಂದ ಕೆಲಸ ಮಾಡಿಸಿ, ಬರೆಯಿಸಿದ ವಿಜಯನಾರಸಿಂಹ ಅವರ ಚಾತುರ್ಯ ಹಾಗೂ ಸಾಮರ್ಥ್ಯಗಳನ್ನು ಎಷ್ಟು ಪ್ರಶಂಸಿಸಿದರೂ ಸಾಲದು. ಸುಮಾರು ಐದೂವರೆ ವರ್ಷ ಕಾಲ ಅವರ ಕೈ ಕೆಳಗೆ ಕೆಲಸ ಮಾಡಿದ (ಫಿಲ್ಮಾಲಯ ಅಲ್ಪಾಯುಷಿಯಾಯಿತು ಎಂಬುದು ಖೇದದ ವಿಷಯ. ಅದಕ್ಕೆ ಪ್ರಸಾರ ಸಂಖ್ಯೆ ಇಳಿಮುಖವಾಗಲಿಲ್ಲ, ಆದರೆ ಬೇರೆ ಕಾರಣಗಳಿದ್ದವು) ನನ್ನ ಮೇಲೆ ಅವರು ಕೋಪಗೊಂಡಿದ್ದು ಒಂದೇ ಒಂದು ಬಾರಿ. ‘ಜೊನ್ನವಕ್ಕಿ ಜೋಡಿ’ ಎಂಬ ಶೀರ್ಷಿಕೆ ‘ಜನ್ನವಕ್ಕಿ ಜೋಡಿ’ಯಾಗಿ ಅವರ ಮುಂದೆ ಬಂದಾಗ, ಈ ತಪ್ಪು ಪ್ರಯೋಗಕ್ಕೆ ನರಸಿಂಹಾವತಾರ ತಾಳಿದರು. ‘ಜೊನ್ನವಕ್ಕಿ ಜೋಡಿ’ ಎಂಬುದಾಗಿ ಕೈ ಬರಹದಲ್ಲಿ ಬರೆದುಕೊಟ್ಟರೆ, ಹೆಡ್ಡಿಂಗ್ ಬರೆಯುವ ತೆಲುಗು ಆರ್ಟಿಸ್ಟ್ ನಿಂದ ತಪ್ಪಾಗಬಹುದು ಎಂದು ೩೬ ಪಾಯಿಂಟ್ ನಲ್ಲಿ ಟೈಪ್ ಮಾಡಿದ ಪ್ರತಿ ನೀಡಿದ್ಧರೂ ಅಚಾತುರ್ಯ ನಡೆದಿತ್ತು. ವಿಜಯನಾರಸಿಂಹ ಅವರಿಗೆ ತೋರಿಸುವ ಅವಸರದಲ್ಲಿ ನಾನೂ ಅದನ್ನು ಗಮನಿಸದೇ ಪುಟವನ್ನು ಅವರ ಮುಂದೆ ಇಟ್ಟಿದ್ದೆ. ಆದರೆ ಈ ಮುನಿಸು, ಹೆಡ್ಡಿಂಗ್ ಸರಿಪಡಿಸಿ ಪುಟವನ್ನು ಮರು ವಿನ್ಯಾಸಗೊಳಿಸಿ ಅವರಿಗೆ ತೋರಿಸುತ್ತಿದ್ದಂತೆ ಮಾಯವಾಯಿತು. ಆದರೆ ತೆಲುಗು, ತಮಿಳು, ಮಲಯಾಳಂ ಸಂಪಾದಕರ (ಪತ್ರಿಕೆ ನಾಲ್ಕು ಭಾಷೆಗಳಲ್ಲಿ ಬರುತ್ತಿತ್ತು) ಎದುರೇ ಗದರಿದ್ದರಿಂದ ಪೆಚ್ಚಾದ ನನ್ನ ಮೋರೆ ನೋಡಿ ಅವರಿಗೆ ಪಿಚ್ಚೆನಿಸಿತು.
ಸ್ವಲ್ಪ ಹೊತ್ತು ಬಿಟ್ಟು ಬನ್ನಿ ಕಾಫಿ ಕುಡಿದು ಬರೋಣ ಎಂದು ಹೊಟೇಲಿಗೆ ಕರೆದುಕೊಂಡು ಹೋದರು. ಜಾಮೂನು, ಮೈಸೂರು ಬೋಂಡಾ (ಬಿಸ್ಕುಟ್ ಅಂಬಡೆ), ದೋಸೆ, ಕಾಫಿ ಸಮಾರಾಧನೆಯಾಯಿತು. ಜತೆಗೆ ಸಿಹಿ ಹಾಗೂ ಖಾರದ ಎರಡೆರಡು ಪಾರ್ಸೆಲ್ ಕಟ್ಟಿಸಿಕೊಂಡು, ತಮ್ಮ ಜೋಳಿಗೆಗೆ ಬಿಟ್ಟರು. ಮರಳಿ ಆಫೀಸಿಗೆ ಬಂದೆವು. ಹಾಗೆ ಬರುವಾಗ ‘ ಪ್ರತಿಯೊಂದು ಭಾಷೆಗೂ, ಅದರದೇ ಆದ ಗೌರವ, ಅನನ್ಯತೆ ಇದೆ. ಅದಕ್ಕೆ ಧಕ್ಕೆ ಆಗಬಾರದು. ನಾವು ಬರೆಯೋದು ಯಾರಿಗೂ ಕನ್ನಡ ಕಲಿಸಲಿಕ್ಕಲ್ಲ. ಹಾಗೆಂದು ನಮ್ಮ ಬರವಣಿಗೆಯಿಂದ ಭಾಷೆಯನ್ನು ಕೆಡಿಸುವುದೂ ಸರಿಯಲ್ಲ. ಪತ್ರಿಕೆಯನ್ನು ಸಾವಿರಾರು ಜನ ಓದುತ್ತಾರೆ. ಓದುಗರು ತಪ್ಪಾಗಿ ಉಚ್ಚರಿಸುವುದು, ಬರೆಯುವುದು ಮಾಡಿದರೆ, ಅದನ್ನು ಸರಿಪಡಿಸಿಕೊಳ್ಳಲು ನಾವು ಬರೆಯುವುದು ಒಂದು ಉದಾಹರಣೆಯಾಗಬೇಕು’ ಎಂದು ತಿಳಿಹೇಳಿದರು. ಜತೆಗೆ ಕೆಲಸದ ಸಮಯ ಮುಗಿದು ಮನೆಗೆ ಹೋಗುವಾಗ ‘ಬಾರಯ್ಯ ಇಲ್ಲಿ’ ಎಂದು ಕರೆದು ಒಂದು ಸಿಹಿ ಹಾಗೂ ಖಾರದ ಪಾರ್ಸೆಲನ್ನು ನನ್ನ ಜೋಳಿಗೆಗೆ ಇಳಿಸಿದರು.
‘ಸರ್’ ಎಂದೆ. ‘ಏನು’ ಎಂದರು. ‘ಇದೇ ರೀತಿ ಆಗುತ್ತದೆ ಅಂದರೆ ನಾನು ಆಗಾಗ ಒಂದೊಂದು ಸಣ್ಣ-ಪುಟ್ಟ ತಪ್ಪು ಮಾಡ್ತೀನಿ ಸರ್’ ಎಂದೆ. ‘ಪರ್ವಾಗಿಲ್ಲ ಕಣಯ್ಯ ನೀನು, ಏನೋ ಅಂತಿದ್ದೆ. ಭಾರೀ ಪಾಕ್ಡಾ ಆಸಾಮಿ’ ಎಂದು ಹಾರ್ದಿಕವಾಗಿ ನಕ್ಕು ಬೆನ್ನು ತಟ್ಟಿದರು.
ಈ ಒಂದು ಸಂದರ್ಭ ಬಿಟ್ಟರೆ, ಮತ್ತೆ ಅವರೆಂದೂ ಕೋಪಿಸಿಕೊಂಡಿದ್ದೇ ಇಲ್ಲ. ಹಾಗೆಯೇ ನನ್ನ ಕೆಲಸ, ಬರಹ ಮೆಚ್ಚುಗೆಯಾದಾಗಲೆಲ್ಲ ಕಾಫಿ-ತಿಂಡಿ ಸಮಾರಾಧನೆ ತಪ್ಪುತ್ತಿರಲಿಲ್ಲ. ಆಗೆಲ್ಲ ‘ ನಾನೇನೂ ತಪ್ಪು ಮಾಡಿದಂತೆ ಇಲ್ವಲ್ಲ ಸರ್’ ಎಂದು ತಮಾಷೆ ಮಾಡಿದರೆ, ‘ ಆರಂಭದ ಆರೇಳು ತಿಂಗಳು ಬರೆಯದೇ ತಪ್ಪು ಮಾಡಿದ್ದನ್ನು ಮರೆಯೋದುಂಟೇ?’ ಎಂದು ಪ್ರತಿಯಾಗಿ ಛೇಡಿಸುತ್ತಿದ್ದರು.
ಹೀಗೆ ಕಾಲ ಸರಿಯುತ್ತಿದ್ದಂತೆ, ೧೯೮೩ರಲ್ಲಿ ರಾಜಕುಮಾರ ಅವರಿಗೆ ‘ಪದ್ಮಭೂಷಣ’ಪ್ರಶಸ್ತಿ ದೊರಕಿತು. ಸಂಪಾದಕರಾಗಿ ಚಿತ್ರರಂಗದ ವಿವಿಧ ವಿಷಯಗಳ ಕುರಿತು , ಪ್ರಮುಖರ ಕುರಿತು ಬರೆಯುತ್ತಿದ್ದರೂ, ಪ್ರಸ್ತುತ ಕಾಲದ ಪ್ರಮುಖರ ಸಂದರ್ಶನ ಮಾಡುತ್ತಿರಲಿಲ್ಲ. ತಾವು ಸ್ವಯಂ ಗೀತೆ ರಚನೆಕಾರರಾಗಿದ್ದು, ಸಂದರ್ಶನ ನಡೆಸುವ ಮೂಲಕ ಅಂಥವರ ಮೇಲೆ ಪ್ರಭಾವ ಬೀರುತ್ತಿದ್ದಾರೆ (ಅವಕಾಶಗಳಿಗೋಸ್ಕರ) ಎಂಬ ಮಾತು ಬರಬಾರದೆಂಬ ಕಾರಣಕ್ಕೆ ಅಂಥವರ ಸಂದರ್ಶನ ಮಾಡಲು ನನ್ನನ್ನು ಕಳಿಸುತ್ತಿದ್ದರು. ಅದೇ ರೀತಿ ಈಗಲೂ ಕೂಡ ‘ ನೋಡಯ್ಯ, ರಾಜಕುಮಾರ ಸಂದರ್ಶನ ಮಾಡಬೇಕು ನೀನು. ಇಂಥ ತಾರೀಖು ಅವರು ಮದರಾಸಿಗೆ ಬರುತ್ತಾರೆ. ಹೋಗಿ ಸಂದರ್ಶನ ಮಾಡಿಕೊಂಡು ಬಾ. ಇದು ಮುಖಪುಟ ಲೇಖನ ಅನ್ನೋದನ್ನು ಮರೆಯಬೇಡ’ ಅಂದರು. ಏನು ಹೇಳಬೇಕೋ ತಿಳಿಯಲಿಲ್ಲ. ಅದೇನೂ ಪ್ರಸಂಗಿಕ ಲೇಖನವಲ್ಲ, ಕೇಂದ್ರದ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರವಾದ ಹಿನ್ನೆಲೆಯಲ್ಲಿ ನಡೆಸಬೇಕಾದ ಸಂದರ್ಶನ. ಯೋಚನೆಗೆ ಬಿದ್ದೆ.
(ಮುಂದುವರಿಯುವುದು)
Be the first to comment on "ಸಿನಿಮಾ ಪತ್ರಿಕೆಗೆ ಸೇರಿದ್ದು, ಮತ್ತೆ ರಾಜ್ ಭೇಟಿಗೆ ಅವಕಾಶ"