ಸಾಹಿತ್ಯ, ಸಮಾಜವಾದದೊಂದಿಗೆ ನಾಟಕ

  • ಉದಯ ಕುಮಾರ್ ಪೈ

ಯಾರ ಕುರಿತು ಹೇಳ ಹೊರಟರೂ, ಹೇಳುವ ವ್ಯಕ್ತಿ ಅದರಲ್ಲಿ ಕಾಣಿಸಿಕೊಳ್ಳುತ್ತಾನೆ(ಕೆಲವೊಮ್ಮೆ ಯಾರ ಕುರಿತು ಹೇಳುತ್ತೇನೆಂದು ತೊಡಗುತ್ತಾನೋ, ಅಂಥವರಿಗಿಂತ ಹೆಚ್ಚಾಗಿ ತನ್ನ ಬಗ್ಗೆ ಹೆಚ್ಚು ಹೇಳಿಕೊಳ್ಳುತ್ತಾನೆ). ಇಲ್ಲೂ ಹೀಗಾಗುವ ಸಂಭವವಿದೆ, ಕ್ಷಮಿಸಬೇಕು.

ನಾನು ರಂಗಕರ್ಮಿ ಎಂದು ಹೇಳಿದರೆ ರಂಗಕರ್ಮಿಗಳಿಗೆ ಮಾಡುವ ಅವಮಾನ. ನಾಟಕಕಾರ ಅಂದರೆ ಕೋಗಿಲೆಯೂ, ಕಾಗೆಯೂ ಒಂದೇ ಎಂದು ಹೇಳಿದಂತಾಗುತ್ತದೆ. ಆದರೂ ಎರಡು ನಾಟಕಗಳನ್ನು (?) ಬರೆದೆ. ಸರಿ ಎಂದು ಒಪ್ಪಿಕೊಂಡ ಕರ್ನಾಟಕ ಸಂಘದ ಔದಾರ್ಯ ಹಾಗೂ ರಂಗದ ಮೇಲೆ ಪ್ರದರ್ಶನಗೊಂಡ ಅವುಗಳನ್ನು ನೋಡಿದ ಸಹನಶೀಲತೆ, ಹಿರಿತನಗಳನ್ನು ಪ್ರಶಂಸಿಸಬೇಕೇ ಹೊರತು ಬೇರೇನನ್ನೂ ಹೇಳಲಾಗದು. ಇದು ತೋರಿಕೆಯ ವಿನಯವಲ್ಲ, ನನ್ನ ಕುರಿತ ಪ್ರಾಮಾಣಿಕ ಸ್ವಯಂ ಮೌಲ್ಯಮಾಪನ.

ಹಾಗೆಯೇ ವೆಂಕಟರಾಜ ಪಾನಸೆ ಅವರು ಸಂಘಟಿಸಿದ ‘ಪ್ರಗತಿಶೀಲ ಪಂಥ’ ಸಾಹಿತ್ಯ ಸಂಬಂಧಿ ಕಾರ್ಯಕ್ರಮಗಳಲ್ಲಿ (ತಿಂಗಳಿಗೆ ಒಂದು) ಕೇಳುಗನಾಗಿ ಭಾಗವಹಿಸುತ್ತಿದ್ದೆ. ಸಾಹಿತ್ಯದ ಮೂಲಕ ಸಮಾಜದ ವಿಶ್ಲೇಷಣೆ ಹಾಗೂ ಸಮಾಜವಾದದ ಪ್ರತಿಪಾದನೆಗೆ ಇದೊಂದು ಉತ್ತಮ ವಾಹಕವಾಗಿತ್ತು. ನಾನು ಹೊಟೇಲು ಕಾರ್ಮಿಕನಾಗಿದ್ದರಿಂದ ಪಾನಸೆ ಅವರಿಗೆ ನನ್ನ ಮೇಲೆ ಒಂದಿಷ್ಟು ಅಕ್ಕರೆ.

ಪ್ರಾಯಃ ಈ ಒಂದು ಕಾರಣದಿಂದಲೇ, ಅಥವಾ ಮೇಲೆ ಹೇಳಿದ ಎಲ್ಲ ಕಾರಣಗಳಿಂದಾಗಿ, ಸೋವಿಯತ್ ಒಕ್ಕೂಟದ ರಾಜಕೀಯ-ಸಾಮಾಜಿಕ-ಆರ್ಥಿಕ ನೀತಿಗಳ ಮೂಲಕ ಸಮಾಜವಾದದ ಪ್ರಚಾರವನ್ನೇ ಮುಖ್ಯ ಗುರಿಯಾಗಿಸಿಕೊಂಡ ‘ಸೋವಿಯತ್ ಸಮೀಕ್ಷೆ’ (ಜತೆಗೆ ವಾರಕ್ಕೊಂದು ಇಂಥ ಚಿಂತನೆಗಳ ಕಿರು ಹೊತ್ತಗೆ)ಯ ಮುದ್ರಣಾಲಯ ನ್ಯೂ ಸೆಂಚುರಿ ಪ್ರೆಸ್ ನಲ್ಲಿ ಖಾಲಿ ಇದ್ದ ಕಂಪೋಸಿಟರ್ ಹಾಗೂ ಪ್ರೂಫ್ ರೀಡಿಂಗ್ (ಕರಡು ತಿದ್ದುವುದು ಅಪರಾಹ್ನ ೩.೩೦ ಗಂಟೆಯ ಬಳಿಕ) ಕೆಲಸ ನನಗೆ ದೊರೆಯಿತು. ನಾನು ಸಮಾಜವಾದಿಯೇ ? ಬಿಡಿ ಇದು ರಾಜಕೀಯ ವಿಶ್ಲೇಷಣೆಯ ಬರಹವಲ್ಲ.

ಹೀಗೆ ವೃತ್ತಿ ಬದಲಾದ ಬಳಿಕ (೧೯೭೪ರ ಅಕ್ಟೋಬರ್ ನಿಂದ) ಸಂಘದ ಹಾಗೂ ಗೆಳೆಯರ ಸಹವಾಸ ಮುಂದುವರಿದರೂ, ಬರವಣಿಗೆ (ನಾಟಕ)ಗೆ ವಿರಾಮ ಸಿಕ್ಕಿತ್ತು. ಜತೆಗೆ ಸಂಘದ ಚಟುವಟಿಕೆಗಳಲ್ಲಿ ತೊಡಗಿಯೂ ಬೇರೊಂದು ತುರ್ತು ಚಟುವಟಿಕೆಗಳಲ್ಲಿ ತೊಡಗಿದ್ದೆ. ಆದರೆ ಒಮ್ಮೆ ಅಚಾನಕ್ ಆಗಿ ವರದಕ್ಷಿಣೆಯ ಮೊತ್ತ ಪೂರ್ತಿ ಸಂದಾಯವಾಗದ ಹೊರತು ತಾಳಿ ಕಟ್ಟಲು ಸಾಧ್ಯವಿಲ್ಲ ಎಂದು ತಗಾದೆ ತೆಗೆದ ವರನ ಕಡೆಯವರನ್ನು ತರಾಟೆಗೆ ತೆಗೆದುಕೊಂಡು , ತಂದೆ ಈ ಮೊದಲು ನೀಡಿದ ಹಣವನ್ನು ನಿಂತ ನಿಲುವಿನಲ್ಲಿ ವಸೂಲು ಮಾಡಿದ್ದಲ್ಲದೇ, ವರನ ಕಡೆಯವರನ್ನು ಜೈಲಿಗಟ್ಟಿದ ಹೆಣ್ಣಿನ ಕುರಿತು ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ಓದಿದೆ. ಇದನ್ನೊಂದು ಸಣ್ಣ ನಾಟಕ ಮಾಡಿದರೆ ಹೇಗೆ ಎಂದು ಯೋಚಿಸಿ, ನನ್ನ ಹಿಡಿತಕ್ಕೆ ನಿಲುಕದ ವಸ್ತು ಹಾಗೂ ಜನ್ಮಜಾತ ‘ಸೌಮಾರ್ಯ’ ( ಸೋಮಾರಿತನದ ವ್ಯಾಖ್ಯೆ ಎಂಬಂತಿರುವ ಈ ಶಬ್ದದ ಸಂಪೂರ್ಣ ಸ್ವಾಮ್ಯ ಲೇಖಕಿ ಭುವನೇಶ್ವರಿ ಹೆಗಡೆ ಅವರದು)ದ ಕಾರಣವಾಗಿ ಮೂರು ತಿಂಗಳಲ್ಲಿ ನಾಟಕ ಬರೆದು ಮುಗಿಸಿದೆ. ಎಂದಿನಂತೆ ಗೆಳೆಯರಾದ ನಾರಾಯಣ ಹಾಗೂ ಬಸವರಾಜು ನಾಟಕ ಓದಿದರು. ‘ಎಲ್ಲ ಸರಿ, ಆದರೆ ಮಗಳ ಮದುವೆಯ ಸಮಯ ವರದಕ್ಷಿಣೆಯನ್ನು ವಿರೋಧಿಸುವ ಹೆತ್ತವರು, ಮಗನ ಮದುವೆಯ ಸಂದರ್ಭ ವರದಕ್ಷಿಣೆಯ ಪರವಾಗಿರುತ್ತಾರೆ ಎಂಬಂತೆ ಮಾಡಿದರೆ ನಾಟಕದ ಮಜಾ ಇನ್ನೂ ಜಾಸ್ತಿ ಆಗುತ್ತದೆ’ ಎಂದು ಬಸವರಾಜು ಸಲಹೆ ನೀಡಿದ. ಮಜದ ಜತೆ ನಾಟಕ ಮಜಬೂತಾಗುತ್ತದೆಂದು ಮನಗಂಡ ನಾನು ಇನ್ನೊಂದು ದೃಶ್ಯ ಸೇರಿಸಿ , ಜನರ ಅನುಕೂಲ ಸಿಂಧು ಮನೋಭಾವ ಅನಾವರಣಗೊಳ್ಳುವ ರೀತಿಯಲ್ಲಿ ನಾಟಕ ಮುಗಿಸಿದೆ.

ಬಳಿಕ ಎಂದಿನಂತೆ ನಾಟಕ ಪ್ರತಿಯನ್ನು ಸಂಘದ ಕಾರ್ಯದರ್ಶಿ ಪಾಂಗಾಳ ಶ್ರೀನಿವಾಸ ರಾವ್ ಮುಂದಿಟ್ಟು ನಾಟಕ ಪ್ರದರ್ಶನ ಯೋಗ್ಯವೇ ? ಅವಕಾಶ ಸಿಗಬಹುದೇ ? ಎಂದು ಕೇಳಿದೆ. ಕರ್ನಾಟಕ ಸಂಘದಲ್ಲಿ ಸಂಘದ ಸದಸ್ಯರಿಗೆ ಪ್ರತಿ ತಿಂಗಳೂ ಒಂದು ಕಾರ್ಯಕ್ರಮ ನೀಡಬೇಕು ಎಂಬುದು ನಿಯಮ. ಅದಕ್ಕಾಗಿ ಅವಕಾಶ ಬೇಡಿದ್ದೆ.

ಅಷ್ಟರಲ್ಲಾಗಲೇ ಮದರಾಸು ದೂರದರ್ಶನ ಕೇಂದ್ರ ಆರಂಭವಾಗಿದ್ದು, ಕನ್ನಡ ವಿಭಾಗ ತೆರೆಯುವ ಸೂಚನೆ ಸಿಕ್ಕಿತ್ತು. ಕನ್ನಡ ವಿಭಾಗದ ಮುಖ್ಯಸ್ಥರಾಗಿ ಯಮುನಾಬಾಯಿ ಅವರು ನಿಯಮನಗೊಂಡಿದ್ದು, ಪೂರ್ವಭಾವಿ ಕೆಲಸಗಳು ನಡೆಯುತ್ತಿದ್ದವು. ಅದರ ಅಂಗವಾಗಿ ಯಾರಾದರೂ ಅರ್ಧ ಗಂಟೆಯ (ಸರಿಯಾಗಿ ಹೇಳಬೇಕೆಂದರೆ ೨೫ ನಿಮಿಷಗಳ) ಒಂದು ಕಾರ್ಯಕ್ರಮ ನೀಡಬಹುದೇ ಎಂದು ಕರ್ನಾಟಕ ಸಂಘದಲ್ಲಿ ವಿಚಾರಿಸಿದ್ದರಂತೆ. ಈ ಅವಕಾಶವನ್ನು ಹೇಗೆ ಬಳಸಿಕೊಳ್ಳುವುದು ಎಂಬ ಚರ್ಚೆ ನಡೆಯುತ್ತಿರುವಾಗಲೇ, ನನ್ನ ನಾಟಕ ಕಾರ್ಯದರ್ಶಿಯವರ ಕೈಸೇರಿತು. ಓದಿ ನೋಡಿದ ಅವರು ‘ಓ! ಸಮಯಕ್ಕೆ ತಕ್ಕನಾದ ನಾಟಕ ಬರೆದಿದ್ದೀಯಾ ಮಾರಾಯಾ !’ ಎಂದು ಉದ್ಗರಿಸಿದರು. ಅವರು ‘ಸಮಯ’ ಎಂದು ಹೇಳಿದುದರಲ್ಲಿ ಎರಡು ಅರ್ಥಗಳಿದ್ದವು. ಒಂದು ಮದರಾಸು ದೂ.ದ. ಕೇಂದ್ರದಲ್ಲಿ ಕಾರ್ಯಕ್ರಮಕ್ಕೆ ಬೇಡಿಕೆ ಬಂದ ಸಮಯ, ಇನ್ನೊಂದು ಅದು ‘ತುರ್ತು ಪರಿಸ್ಥಿತಿ’ಯ ಸಮಯವಾಗಿದ್ದು, ಸರಕಾರದ ಕೆಲವು ನೀತಿಗಳನ್ನು ಪ್ರತಿಪಾದಿಸುವಂತೆ ನಾಟಕ ರೂಪುಗೊಂಡಿದ್ದು. ಅಂದಹಾಗೆ ನಾನು ತುರ್ತು ಪರಿಸ್ಥಿತಿಯ ಬೆಂಬಲಿಗನೇ ? ಬಿಡಿ, ರಾಜಕೀಯ ವಿಷಯ ಇಲ್ಲಿ ಪ್ರಸ್ತುತವಲ್ಲ.

ನಾಟಕ ಆಗಬಹುದು ಎಂದು ತೀರ್ಮಾನವಾಯಿತು. ಇದು ಟಿವಿಯಲ್ಲಿ ಪ್ರದರ್ಶನ ಮಾಡೋಣ. ಹಾಗಾಗಿ ಅದರ ಸಮಯ ಮಿತಿಗೊಳಪಡುವಂತೆ ಟ್ರಿಮ್ ಮಾಡಲು ಹೇಳಿದರು. ಹಾಗೂ-ಹೀಗೂ ಒದ್ದಾಡಿ ಟ್ರಿಮ್ ಮಾಡಿದೆ. ಜತೆಗೆ ತುರ್ತು ಪರಿಸ್ಥಿತಿಯಾಗಿದ್ದರಿಂದ ಸೆನ್ಸಾರ್ ಪ್ರತಿ ಸಿದ್ಧಗೊಳಿಸಿ, ಎಗ್ಮೋರ್ ಪೊಲೀಸ್ ಸ್ಟೇಶನ್ ಗೆ ಹೋಗಿ, ಅಲ್ಲಿದ್ದ ಸೆನ್ಸಾರ್ ಅಧಿಕಾರಿ (ಪೊಲೀಸ್) ಯಿಂದ ಅನುಮತಿ ಪಡೆದೆ. ಬಳಿಕ ತಾಲೀಮು ಆರಂಭವಾಯಿತು.

ಹಿರಿಯ ಪೋಷಕ ನಟ ಕುಪ್ಪುರಾಜು ನಾಯ್ಡು ಅವರು ನಿರ್ದೇಶನದ ಹೊಣೆ ಹೊತ್ತರು. ಸಮಯ ಮಿತಿ ಕಾಪಾಡಲು ಗಡಿಯಾರ ಇಟ್ಟುಕೊಂಡೇ ತಾಲೀಮು ನಡೆಯಿತು. ನನ್ನ ಮುಖ ಹಾಗೂ ದನಿ ಎರಡೂ ಆಕರ್ಷಕವಾಗಿಲ್ಲದೇ ಇರುವುದು, ಜತೆಗೆ ‘ಊರಲ್ಲಿ ರಂಗ ಪರ ಊರಲ್ಲಿ ಮಂಗ’ ಎಂಬುದು ನನಗೆ ಚೆನ್ನಾಗಿ ತಿಳಿದಿದ್ದರಿಂದ ಪಾತ್ರ ವಹಿಸಲು ನಾನು ನಿರಾಕರಿಸಿದ್ದೆ. ಆದರೆ ಈ ಟೆಲಿ ನಾಟಕದ ಚಿತ್ರೀಕರಣಕ್ಕೆ ಆರು ದಿನಗಳಿರುವಾಗ ನಿಶ್ಚಯಿಸಿದ ವರನನ್ನು ತಿರಸ್ಕರಿಸಿದ ವಧುವನ್ನು ,ವರಿಸಲು ಮುಂದೆ ಬರುವ ವ್ಯಕ್ತಿಯ ಪಾತ್ರಧಾರಿ ಊರಿಗೆ ಹೋಗಲೇಬೇಕಾದ ಅನಿವಾರ್ಯ ಇದ್ದುದರಿಂದ ಆ ಪಾತ್ರ ನನಗೆ ಗಂಟು ಬಿತ್ತು. ಅದೇನೂ ಅಂಥ ದೊಡ್ಡ ಪಾತ್ರವಲ್ಲ, ಲೆಕ್ಕ ಹಾಕಿ ಮೂರು ಸಂಭಾಷಣೆಗಳು.

(ಮುಂದುವರಿಯುವುದು)

ಹಿಂದಿನ ಲೇಖನದ ಲಿಂಕ್:

ಸರಳ ಜೀವಿ, ಸಹೃದಯಿ – ನಾನು ನೋಡಿದ ರಾಜಕುಮಾರ

ವಿಜಯಚಿತ್ರ, ರೂಪತಾರಾ ಪತ್ರಿಕೆಗಳಲ್ಲಿ ದಶಕಗಳ ಕಾಲ ಸಿನಿಮಾ ಪತ್ರಕರ್ತರಾಗಿ ಚೆನ್ನೈ, ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಉದಯ ಕುಮಾರ್ ಪೈ ಸದ್ಯ ಮಣಿಪಾಲದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಕನ್ನಡ ಸಿನಿಮಾದ ಬ್ಲ್ಯಾಕ್ ಅಂಡ್ ವೈಟ್ ಯುಗದಿಂದ ಇಂದಿನವರೆಗಿನ ಸಿನಿಮಾಗಳು, ನಟರ ಬದುಕನ್ನು ಹತ್ತಿರದಿಂದ ನೋಡಿರುವ ಅವರು ಡಾ. ರಾಜ್ ಕುಮಾರ್ ಕುರಿತು ಸರಣಿ ಬರೆಹಗಳನ್ನು ಬರೆದಿದ್ದಾರೆ. 

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಸಾಹಿತ್ಯ, ಸಮಾಜವಾದದೊಂದಿಗೆ ನಾಟಕ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*