ಸಿದ್ಧಕಟ್ಟೆಯ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಿಗೆ ತರಕಾರಿ ಬೀಜಗಳನ್ನು ವಿತರಿಸುವ ಮೂಲಕ ಗುರುವಾರ ಪರಿಸರ ದಿನವನ್ನು ಆಚರಿಸಲಾಯಿತು.
ರೋಟರಿ ಕ್ಲಬ್ ಬಂಟ್ವಾಳ, ಪಲ್ಗುಣಿ ಇಕೋ ಕ್ಲಬ್ ಮತ್ತು ಇಂಟರ್‍ಯಾಕ್ಟ್ ಕ್ಲಬ್ ವತಿಯಿಂದ ನಡೆದ ಕಾರ್ಯಕ್ರಮದ ಅಧ್ಯಕತೆಯನ್ನು ಸಂಗಬೆಟ್ಟು ಗ್ರಾಮ ಪಂಚಾಯತಿ ಅಧ್ಯಕ್ಷೆ ಗುಲಾಬಿ ಶೆಟ್ಟಿ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ ಹಲಸಿನ ಗಿಡವನ್ನು ಶಾಲಾ ವೈಸ್ ಪ್ರಿನ್ಸಿಪಾಲ್ ರಮಾನಂದ ನೂಜಿಪ್ಪಾಡಿಯವರಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರೋಟರಿ ಕ್ಲಬ್ ಬಂಟ್ವಾಳ ಇದರ ನಿಯೋಜಿತ ಅಧ್ಯಕ್ಷೆ ಶಿವಾನಿ ಬಾಳಿಗಾ ನಿಯೋಜಿತ ಕಾರ್ಯದರ್ಶಿ ಸ್ಮಿತಾ ಉಪಸ್ಥಿತರಿದ್ದು, ಶಾಲೆಯ ಮಕ್ಕಳಿಗೆ ತರಕಾರಿ ಬೀಜಗಳನ್ನು ವಿತರಿಸಿದರು.
ಈ ಸಂದರ್ಭ ಮಾತನಾಡಿದ ವೈಸ್ ಪ್ರಿನ್ಸಿಪಾಲ್ ರಮಾನಂದ, ಕಳೆದ ವರ್ಷ ವಿದ್ಯಾರ್ಥಿಗಳಿಗೆ ತರಕಾರಿ ಬೀಜಗಳನ್ನು ವಿತರಿಸಿದ ಫಲವಾಗಿ ಸುಮಾರು 120 ಮಕ್ಕಳು ಮನೆಗಳಲ್ಲಿ ತರಕಾರಿ ಬೆಳೆದಿದ್ದು, ಕೃಷಿಯ ಮಾಹಿತಿ ಹಾಗೂ ಪರಿಸರ ಉಳಿಸಿ, ಗಿಡಮರಗಳನ್ನು ಬೆಳೆಸುವ ಕುರಿತು ಪ್ರಾಯೋಗಿಕವಾಗಿ ತಿಳಿದುಕೊಂಡಿದ್ದಾರೆ. ಈ ಬಾರಿಯೂ ಆ ಕಾರ್ಯವನ್ನು ವಿದ್ಯಾರ್ಥಿಗಳು ಮಾಡಲಿದ್ದಾರೆ ಎಂದರು. ಬಳಿಕ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಶಿಕ್ಷಕ ಮಹೇಶ್ ಕುಮಾರ್ ವಿ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸ್ಮಿತಾ ವಂದಿಸಿದರು.
Be the first to comment on "ಸಿದ್ಧಕಟ್ಟೆಯ ಸರಕಾರಿ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆ"