ಜ್ಯೋತಿಷ್ಯ ಜ್ಞಾನರತ್ನ, ಯಕ್ಷದೇವ ಎಂದೇ ಬಿರುದು ಪಡೆದಿರುವ ಅನಂತರಾಮ ಬಂಗಾಡಿ(68) ಅಲ್ಪಕಾಲದ ಅಸೌಖ್ಯದಿಂದ ಮೇ.12ರಂದು ಭಾನುವಾರ ಬೆಳಗ್ಗೆ ನಿಧನ ಹೊಂದಿದರು. ಪತ್ನಿ ಸುಮತಿ , ಮಗ ಸಂದೇಶ್ ಬಂಗಾಡಿ, ಮಗಳು ಸಂಧ್ಯಾ, ಅಳಿಯ ಹಿರೇಬೆಟ್ಟು ಕೇಶವ ಭಂಡಾರಿ ಮತ್ತು ಮೊಮ್ಮಕ್ಕಳು , ಕುಟುಂಬಸ್ಥರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ
ಅವರು ನೂರೈವತ್ತಕ್ಕೂ ಹೆಚ್ಚಿನ ಯಕ್ಷಗಾನ ಪ್ರಸಂಗಗಳ ರಚನಾಕಾರರು, ಜ್ಯೋತಿಷಿಗಳು, ಸಾಹಿತಿಗಳು, ಹರಿಕಥಾ ಪ್ರವಚನಕಾರರು, ನಾಟಕ ದಿಗ್ಧರ್ಶಕರು, ತೊಗಲು ಬೊಂಬೆಯಾಟ, ವರ್ಣಾಲಂಕಾರ, ವಸ್ತ್ರಾಲಂಕಾರ, ಪಾಡ್ದನ ಪರಿಣಿತರಾಗಿದ್ದರು. ಕಾಡ ಮಲ್ಲಿಗೆ, ಕಚ್ಚೂರ ಮಾಲ್ದಿ, ಬೊಳ್ಳಿ ಗಿಂಡೆ, ಪಟ್ಟದ ಪದ್ಮಲೆ ಮುಂತಾದ ಯಶಸ್ವಿ ಪ್ರಸಂಗಗಳನ್ನೊಳಗೊಂಡು ನೂರೈವತ್ತಕ್ಕೂ ಹೆಚ್ಚು ತುಳು ಕನ್ನಡ ಭಾಷೆಯ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದರು. ಜಾತಿ ಮತಧರ್ಮದ ಎಲ್ಲೆಯನ್ನು ಮೀರಿ ಕ್ರೈಸ್ತ ಸಂತರ ಕಥೆಗಳನ್ನು ಯಕ್ಷಗಾನಕ್ಕೆ ಅಳವಡಿಸಿದ್ದರು.
ಸಮಾನಮನಸ್ಕ ಸ್ನೇಹಿತರೊಡಗೂಡಿ ಸೌಹಾರ್ದ ಕಲಾವಿದರು ಯಕ್ಷರಂಗ ಬಂಗಾಡಿ ಎಂಬ ತಂಡ ಕಟ್ಟಿದ್ದರು. ಜ್ಯೋತಿಷ್ಯ ಕ್ಷೇತ್ರದಲ್ಲಿ ತುಳು ಜ್ಯೋತಿಷ್ಯ ಗ್ರಂಥವನ್ನು ಬರೆದಿದ್ದ ಅವರು, ಫಿನ್ ಲ್ಯಾಂಡ್ ಮತ್ತು ಭಾರತದ ಜಾನಪದ ಅಧ್ಯಯನಕ್ಕಾಗಿ ಮತ್ತು ತುಳು ಶಬ್ದಕೋಶ ರಚನೆಗಾಗಿ ತುಳು ನಿಘಂಟು ಕಾರ್ಯಾಗಾರದಲ್ಲಿಯೂ ಸೇವೆ ಸಲ್ಲಿಸಿದ್ದರು. ಭಾರತೀಯ ಜ್ಯೋತಿಷ್ಯ ಸಂಸ್ಥೆಯಿಂದ “ಜ್ಯೋತಿಷ್ಯ ಜ್ಞಾನರತ್ನ“ ಪ್ರಶಸ್ತಿ, “ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ“, “ಕುಬೆಯೂರು ಪ್ರತಿಷ್ಠಾನ ಯಕ್ಷಗಾನ ಪ್ರಸಂಗ ಸಾಹಿತ್ಯ ಪ್ರಶಸ್ತಿ“, “ಕೊರಗಪ್ಪ ಪ್ರಶಸ್ತಿ ಪ್ರತಿಷ್ಠಾನ ಪುರಸ್ಕಾರ“, “ಗಣಪಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ“, “ಪುಳಿಂಚ ರಾಮಯ್ಯ ಶೆಟ್ಟಿ ಪ್ರತಿಷ್ಠಾನ ಪ್ರಶಸ್ತಿ“, “ಅಖಿಲ ಭಾರತ ತುಳು ಸಾಹಿತ್ಯ ಸಮ್ಮೇಳನ ಪ್ರಶಸ್ತಿ“, “ವಿಶ್ವ ತುಳು ಸಮ್ಮೇಳನ ಪ್ರಶಸ್ತಿ“, “ತುಳುನಾಡ ಸಿರಿ ಪ್ರಶಸ್ತಿ“, “ಸ್ಕಂದ ಪುರಸ್ಕಾರ”ಮತ್ತು ಇತ್ತೀಚಿಗೆ ದೊರೆತ “ಯಕ್ಷದೇವ ಪ್ರಶಸ್ತಿ“. ಜೊತೆಗೆ ನೂರಾರು ಸಂಘ ಸಂಸ್ಥೆಗಳು ಅವರನ್ನು ಗೌರವಿಸಿವೆ.
Be the first to comment on "ಯಕ್ಷಗಾನ ಪ್ರಸಂಗಕರ್ತ, ಜ್ಯೋತಿಷ್ಯ ಜ್ಞಾನರತ್ನ ಅನಂತರಾಮ ಬಂಗಾಡಿ ನಿಧನ"