ಮದ್ರಾಸ್ ದೂರದರ್ಶನದಲ್ಲಿ ಕನ್ನಡ ವಿಭಾಗ ಉದ್ಘಾಟಿಸಿದ್ದರು ಡಾ. ರಾಜ್

ಹಿರಿಯ ಪತ್ರಕರ್ತ ಉದಯಕುಮಾರ ಪೈ ಬರೆಯುತ್ತಿರುವ ಡಾ. ರಾಜ್ ಕುರಿತ ಸರಣಿ ಲೇಖನವಿದು

 

 

ಉದಯಕುಮಾರ ಪೈ

ವಿಜಯಚಿತ್ರ, ರೂಪತಾರಾ ದಶಕಗಳ ಕಾಲ ಸಿನಿಮಾ ಪತ್ರಕರ್ತರಾಗಿ ಚೆನ್ನೈ, ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಉದಯ ಕುಮಾರ್ ಪೈ ಸದ್ಯ ಮಣಿಪಾಲದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಕನ್ನಡ ಸಿನಿಮಾದ ಬ್ಲ್ಯಾಕ್ ಅಂಡ್ ವೈಟ್ ಯುಗದಿಂದ ಇಂದಿನವರೆಗಿನ ಸಿನಿಮಾಗಳು, ನಟರ ಬದುಕನ್ನು ಹತ್ತಿರದಿಂದ ನೋಡಿರುವ ಅವರು ಡಾ. ರಾಜ್ ಕುಮಾರ್ ಕುರಿತು ಸರಣಿ ಬರೆಹಗಳನ್ನು ಬರೆದಿದ್ದಾರೆ. 

ಹಿಂದಿನ ಸಂಚಿಕೆಗೆ ಕ್ಲಿಕ್ ಮಾಡಿರಿ:

ನಾನು ನೋಡಿದ ರಾಜಕುಮಾರ

ಕನ್ನಡ ಕಾರ್ಯಕ್ರಮ ಪ್ರಸಾರವಾಗುವ ನಿಗದಿತ ದಿನ ಸಮೀಪಿಸುತ್ತಿದ್ದಂತೆ ಒಂದು ದಿನ ಪ್ರಸಾದ ಸ್ಟುಡಿಯೋದಿಂದ ಕರ್ನಾಟಕ ಸಂಘಕ್ಕೆ ಫೋನ್ ಕರೆ ಬಂದಿತು. ಎರಡು ದಿನ ಬಿಟ್ಟು ೧೧ ಗಂಟೆಗೆ ರಾಜಕುಮಾರ ಒಂದು ಹಾಡಿನ ರೆಕಾರ್ಡಿಂಗ್ ಗಾಗಿ ಪ್ರಸಾದ ಸ್ಟುಡಿಯೋಗೆ ಬರುತ್ತಾರೆ ಎಂದು ಕರೆ ಮಾಡಿದವರು ತಿಳಿಸಿದರು. ರಾಜಕುಮಾರ ಮನೆಯ ಕಡೆಯವರಿಂದಲೂ ಫೋನ್ ಮೂಲಕ ಇದೇ ಸುದ್ದಿ ತಿಳಿದುಬಂದಿತು.

ರಾಜಕುಮಾರ ಬರುವ ದಿನ ನಾನು ಕೆಲಸಕ್ಕೆ ರಜೆ ಹಾಕಿ ಸಂಘದ ಕಾರ್ಯದರ್ಶಿ (ಪಾಂಗಾಳ ಶ್ರೀನಿವಾಸರಾವ್) ಅವರೊಂದಿಗೆ ನಾನೂ (ಜತೆಗೆ ಇನ್ನೂ ಇಬ್ಬರಿದ್ದರು) ಸೇರಿಕೊಂಡು ಹತ್ತೂವರೆ ಗಂಟೆಗೆ ಸುಮಾರು ಪ್ರಸಾದ ಸ್ಟುಡಿಯೋಗೆ ಹೋದೆವು. ನಾವು ಸ್ಟುಡಿಯೋ ತಲುಪಿದ ಹತ್ತು ನಿಮಿಷಗಳೊಳಗೆ ರಾಜಕುಮಾರ ಬಂದರು. ಜತೆಗೆ ನಿರ್ಮಾಪಕರಿದ್ದರು. ಅವರು ಯಾರೆಂದು ಸರಿಯಾಗಿ ಗಮನಿಸಲಿಲ್ಲ. ನಾವು ಮೂವರು ರೆಕಾರ್ಡಿಂಗ್ ಸ್ಟುಡಿಯೋ ಒಳಗೆ ಹೋಗಲಿಲ್ಲ. ಕಾರ್ಯದರ್ಶಿಯವರು (ಅವರು ರಾಜಕುಮಾರ ಅವರಿಗೆ ಪರಿಚಿತರು, ‘ಚಕ್ರತೀರ್ಥ’ ಚಿತ್ರದಲ್ಲಿ ಜತೆಗೆ ಅಭಿನಯಿಸಿದವರು) ಮಾತ್ರ ಒಳಗೆ ಹೋದರು. ಹದಿನೈದು ನಿಮಿಷ ಕಳೆದು ಅವರು ಹೊರಗೆ ಬಂದು, ‘ಯಾವುದಕ್ಕೂ ತಿಳಿಸುತ್ತೇನೆ’ ಎಂದು ಹೇಳಿದುದಾಗಿ ತಿಳಿಸಿದರು. ಕಾರಣವೆಂದರೆ ಅದು ತುರ್ತು ಪರಿಸ್ಥಿತಿಯಾಗಿದ್ದು, ಅಂದಿನ ನಿಯಮಾವಳಿಯಂತೆ ಯಾವುದೋ ದೃಶ್ಯದ ಬದಲಿಸಲು, ಹಾಗೂ ಅದಕ್ಕೆ ಅನುಕೂಲವಾಗುವಂತೆ ಹಾಡನ್ನು ಚಿತ್ರೀಕರಿಸುವ ಉದ್ದೇಶದಿಂದ ಹಾಡನ್ನು ರೆಕಾರ್ಡ್ ಮಾಡಲು ನಿರ್ಮಾಪಕರು ರಾಜಕುಮಾರ ಅವರನ್ನು ಬೆಂಗಳೂರಿನಿಂದ ಹೆಲಿಕಾಪ್ಟರಿನಲ್ಲಿ ಕರೆ ತಂದಿದ್ದರು. ಹೆಲಿಕಾಪ್ಟರಿಗೆ ಪ್ರತಿ ತಾಸಿಗೆ ಹತ್ತು ಸಾವಿರ ರೂ. ಬಾಡಿಗೆ ಎಂಬ ವಿಷಯ ತಿಳಿದು ಬಂದಿತು. ಅಷ್ಟರಲ್ಲಿ ನಮಗೆಲ್ಲ ಕಾಫಿ-ತಿಂಡಿ ಸರಬರಾಜಾಯಿತು. ಆದರೆ ಸ್ಟುಡಿಯೋ, ರೆಕಾರ್ಡಿಂಗ್ ವೆಚ್ಚ ಮಾತ್ರವಲ್ಲದೆ ಹೆಲಿಕಾಪ್ಟರಿಗೆ ಪ್ರತಿ ತಾಸಿಗೆ ಬಾಡಿಗೆ ಕಟ್ಟಬೇಕೆಂಬ ವಿಷಯ ತಿಳಿದಾಗ ರಾಜಕುಮಾರ ಅವರು ದೂರದರ್ಶನ ಕೇಂದ್ರಕ್ಕೆ ಬರಲು ಸಾಧ್ಯವಾದೀತೇ ಎಂಬ ಅನುಮಾನ ನಮ್ಮನ್ನೆಲ್ಲ ಕಾಡಲಾರಂಭಿಸಿತು. ಹಾಡಿನ ರೆಕಾರ್ಡಿಂಗ್ ಮುಗಿಯುವಾಗ ೧.೩೦ ಗಂಟೆಯಾಗಿತ್ತು.

ವಾದ್ಯವೃಂದದವರು ಒಬ್ಬೊಬ್ಬರಾಗಿ ಹೊರ ಬರುತ್ತಿದ್ದಂತೆ, ಒಳಗೆ ಹೋದ ಕಾರ್ಯದರ್ಶಿಯವರು ಐದು ನಿಮಿಷದಲ್ಲಿ ಹೊರಬಂದು ‘ಊಟಕ್ಕೆ ಹೋಗೋಣ ಬನ್ನಿ ‘ ಎಂದರು. ಅವರ ಮುಖ ಗೆಲುವಾಗಿತ್ತು. ಅವರು ಬಂದ ಒಂದೆರಡು ನಿಮಿಷಗಳಲ್ಲೇ ರಾಜಕುಮಾರ, ಜಿ.ಕೆ.ವೆಂಕಟೇಶ ಮತ್ತಿತರರು ಹೊರಬಂದರು. ‘ಊಟ ಮಾಡೋಣ ಬನ್ನಿ’ ರಾಜಕುಮಾರ ಕರೆದರು. ಹಿಂಬಾಲಿಸಿದೆವು.

ಸುಮಾರು ಐವತ್ತು -ಐವತ್ತೈದು ಜನರಿರಬಹುದು. ಕಾರ್ಯದರ್ಶಿ ಅವರನ್ನು ರಾಜಕುಮಾರ ಪಕ್ಕದಲ್ಲೇ ಕುಳಿತುಕೊಳ್ಳಲು ಹೇಳಿದರು. ಊಟದ ಜತೆ ಮಾತುಕತೆಯೂ ಸಾಗಿತ್ತು. ಅಷ್ಟರಲ್ಲಿ ಸರದಿಯಂತೆ ತಿಳಿಸಾರು ಬಂದಿತು. ‘ಸ್ವಲ್ಪ ಹಾಕಪ್ಪ’ ಎಂದು ರಾಜಕುಮಾರ ಕೈ ಮುಂದೆ ಮಾಡಿದರು. ಬಡಿಸಲು ಬಂದಾತ ಕೈಗೆ ಸಾರು ಹಾಕಿದ. ಸುರ್ರ್ ಎಂದು ಸಶಬ್ದವಾಗಿ ಹೀರಿದರು. ಚೆನ್ನಾಗಿದೆ, ಇನ್ನೊಂದು ಸ್ವಲ್ಪ ಹಾಕಪ್ಪ ಎಂದು ಪುನಃ ಹಾಕಿಸಿಕೊಂಡು ಕುಡಿದರು. ಅನ್ನದ ಮೇಲೂ ಹಾಕಿಸಿಕೊಂಡು ಊಟ ಮಾಡುತ್ತ ಶ್ರೀನಿವಾಸರಾವ್ ಹತ್ತಿರ ‘ನಾನು ಗೋಕರ್ಣಕ್ಕೆ ಹೋದಾಗ ಅಲ್ಲಿ ಭಟ್ರ ಮನೆಯಲ್ಲಿ ಊಟಕ್ಕೆ ಒಂದು ಸಾರು ಮಾಡಿದ್ದರು. ಅದೇನೋ ಆ ಹಣ್ಣಿನ ಹೆಸರು ಮುರುಕು ಅಂತೇನೋ ‘ ಎಂದು ಹೇಳುತ್ತಿದ್ದಂತೆ, ಎದುರು ಪಂಙ್ತಿಯಲ್ಲಿ ಕೊನೆಯಲ್ಲಿ ಕುಳಿತ ನಾನು ‘ಅದು ಮುರುಗಲ ಹಣ್ಣಿನ ಸಾರು. ಅದನ್ನು ಕಡಿ ಅಂತಲೂ ನಮ್ಮೂರ ಕಡೆಗೆ ಹೇಳುತ್ತಾರೆ’ ನನಗರಿಯದಂತೆ ಹೇಳಿದೆ. ತತ್ ಕ್ಷಣ ಸಂಬಂಧವಿಲ್ಲದೇ ನಡುವೆ ಬಾಯಿ ಹಾಕಿದ್ದಕ್ಕೆ ಪೆಚ್ಚಾಗಿ ಕುಳಿತೆ. ‘ಹಾಂ ! ಅದೇ ಮುರುಗಲ ಹಣ್ಣಿನ ಸಾರು. ಹಣ್ಣಿನ ಸಿಪ್ಪೆ ಒಣಗಿಸಿಟ್ಟು ಸಾರು ಮಾಡಲು ಬಳಸುತ್ತಾರಂತೆ. ದೇವಾಮೃತ ಸ್ವಾಮಿ, ಅವರ ಮನೆಯಲ್ಲಿ ಕುಡಿದ ಸಾರಿನ ರುಚಿ ಈಗಲೂ ನನ್ನ ನಾಲಗೆಯ ಮೇಲಿದೆ’ ಎಂದು ಹೇಳಿ ನನ್ನನ್ನು ಉದ್ದೇಶಿಸಿ, ‘ಈಗ ನೀವು ಅಣ್ಣಯ್ಯನವರಲ್ಲಿ (ಜಿ.ಕೆ.ವೆಂಕಟೇಶ ಅವರನ್ನು ರಾಜಕುಮಾರ ಅಣ್ಣಯ್ಯ ಎಂದು ಕರೆಯುತ್ತಿದ್ದರು) ಇದ್ದೀರಾ?’ ಎಂದು ಕೇಳಿದರು. ಜಿ.ಕೆ.ವೆಂಕಟೇಶ ನನ್ನನ್ನು ನೋಡುತ್ತಿರುವಾಗಲೇ ಶ್ರೀನಿವಾಸರಾವ್ ಮಾತನಾಡಿ, ‘ಇಲ್ಲ, ಅವರು ಈಗ ಪ್ರೆಸ್ಸಿನಲ್ಲಿ ಕೆಲಸ ಮಾಡುತ್ತಿದ್ದಾರೆ. ನೀವು ಉದ್ಘಾಟಿಸಲಿರುವ ಮದರಾಸು ದೂರದರ್ಶನ ಕೇಂದ್ರದ ಕನ್ನಡ ವಿಭಾಗದಿಂದ ಪ್ರಸಾರವಾಗುವ ಮೊದಲ ಕಾರ್ಯಕ್ರಮ ಇವರು ಬರೆದ ಟೆಲಿ ನಾಟಕ, ಒಂದು ಸಣ್ಣ ಪಾತ್ರವನ್ನೂ ಮಾಡಿದ್ದಾರೆ’ ಎಂದು ನನ್ನ ಹೊಸ ಪರಿಚಯವನ್ನು ತಿಳಿಸಿದರು. ರಾಜಕುಮಾರ ನಗುತ್ತ ‘ಪರವಾಗಿಲ್ಲ ಕಣ್ರೀ ನೀವು. ಇನ್ನು ಮುಂದೆ ಏನೇನು ಆಗ್ತೀರೋ, ಅದು ನಿಮಗೆ ಮಾತ್ರ ಗೊತ್ತು. ಇವತ್ತು ನೋಡೇಬಿಡೋಣ’ ಎಂದು ಹೇಳಿದರು. ಊಟ ಮುಗಿಯಿತು. ಎಲ್ಲರಿಗೂ ವಿದಾಯ ಕೋರಿ, ದೂರದರ್ಶನ ಕೇಂದ್ರದತ್ತ ಪಯಣ (ಶ್ರೀನಿವಾಸರಾವ್ ಕಾರಿನಲ್ಲಿ ರಾಜಕುಮಾರ, ನಿರ್ಮಾಪಕರು ಮತ್ತು ಇನ್ನೂ ಒಬ್ಬರು , ಬೇರೊಂದು ಟ್ಯಾಕ್ಸಿಯಲ್ಲಿ ನಾವು ಮೂವರು) ಪ್ರಾರಂಭವಾಯಿತು. ವಸಂತ ಕಾಲ ಬಂದಾಗ ಕೋಗಿಲೆ ಕೋಗಿಲೆಯಂತೆ, ಕಾಗೆ ಕಾಗೆಯಂತೆ ಎಂದು ಶಾಲೆಯಲ್ಲಿ ಓದಿದ (ಸಂಸ್ಕೃತ ತರಗತಿಯಲ್ಲಿ) ಶ್ಲೋಕ ನೆನಪಾಗಿ, ಟೆಲಿ ನಾಟಕದಲ್ಲಿ ಪಾತ್ರ ಮಾಡಿದ್ದಕ್ಕಾಗಿ ಮನಸ್ಸಿನಲ್ಲಿ ಹಳಹಳಿಸುತ್ತಿದ್ದೆ.

ದೂರದರ್ಶನ ಕೇಂದ್ರದಲ್ಲಿ ಟೆಲಿ ನಾಟಕದ ತಂಡ ರಾಜಕುಮಾರ ಬರವಿಗೆ ಕಾಯುತ್ತಿತ್ತು. ಯಮುನಾಬಾಯಿ ಅವರು ರಾಜಕುಮಾರ ಅವರನ್ನು ಬರಮಾಡಿಕೊಂಡರು. ಬಳಿಕ ಪುಟ್ಟ ಸಮಾರಂಭ. ರಾಜಕುಮಾರ ಅವರನ್ನು ಯಮುನಾಬಾಯಿ ಸಮ್ಮಾನಿಸಿದರು. ಈ ಔಪಚಾರಿಕ ಕಾರ್ಯಕ್ರಮ ಹತ್ತು -ಹದಿನೈದು ನಿಮಿಷಗಳಲ್ಲಿ ಮುಗಿಯಿತು. ಕಾಫಿ-ತಿಂಡಿ ಉಪಚಾರವೂ ಆಯಿತು. ಬಳಿಕ ಕನ್ನಡ ವಿಭಾಗದ ಉದ್ಘಾಟನೆಯ ಅಂಗವಾಗಿ ಕ್ಯಾಮಿರಾ ಮುಂದೆ ಮಾತನಾಡಬೇಕಾಗಿದ್ದರಿಂದ (ಒಬ್ಬರೇ) ರಾಜಕುಮಾರ ಅವರಿಗೆ ಮಿತವಾದ ಪ್ರಸಾಧನ (ಮೇಕಪ್) ನಡೆಯಿತು. ಅನಂತರ ಯಮುನಾಬಾಯಿ ಹಾಗೂ ನಾಟಕದಲ್ಲಿ ಅಭಿನಯಿಸಿದವರೊಂದಿಗೆ ಕುಳಿತು ರಾಜಕುಮಾರ ಟೆಲಿ ನಾಟಕ ವೀಕ್ಷಿಸಿದರು. ಅನಂತರ ಮದರಾಸು ದೂರದರ್ಶನ ಕೇಂದ್ರದಲ್ಲಿ ಕನ್ನಡ ವಿಭಾಗ ಆರಂಭಗೊಳ್ಳುತ್ತಿರುವುದಕ್ಕೆ, ತನಗೆ ಅದನ್ನು ಉದ್ಘಾಟಿಸುವ ಅವಕಾಶ ದೊರಕಿದ್ದಕ್ಕೆ ಸಂತಸ ವ್ಯಕ್ತಪಡಿಸಿ, ಅಲ್ಲಿನ ಕನ್ನಡಿಗರ ಪರವಾಗಿ ಕೇಂದ್ರವನ್ನು ಅಭಿನಂದಿಸಿದರು. ಕನ್ನಡದಲ್ಲಿ ಒಳ್ಳೆಯ ಕಾರ್ಯಕ್ರಮಗಳು ಮೂಡಿ ಬರಲಿ ಎಂದು ಹಾರೈಸುವ ಮೂಲಕ ವಿಧ್ಯುಕ್ತವಾಗಿ ಕನ್ನಡ ವಿಭಾಗವನ್ನು ಉದ್ಘಾಟಿಸಿದರು.

ಇದೆಲ್ಲ ಮುಗಿಯುತ್ತಿದ್ದಂತೆ, ನಾಟಕದಲ್ಲಿ ಅಭಿನಯಿಸಿದ ಎಲ್ಲರನ್ನೂ ಪ್ರಪ್ರತ್ಯೇಕವಾಗಿ ಮಾತನಾಡಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ಕಿರುತೆರೆಯ ಮೇಲಣ ನನ್ನ ಎಡವಟ್ಟಿನಿಂದಾಗಿ ನನ್ನ ಮುಖ ಕಳೆಗುಂದಿತ್ತು. ಆರಂಭದಲ್ಲಿ ಹೀಗಾಗುವುದು ಸಹಜ. ಮುಂದೆ ಪಳಗಿದಂತೆ ಸರಿಹೋಗುತ್ತೆ ಬಿಡಿ. ನಾಟಕ ಸೊಗಸಾಗಿತ್ತು ಎಂದು ಮೆಲ್ಲಗೆ ಬೆನ್ನು ತಟ್ಟಿದರು. ರಾಜಕುಮಾರ ಏನೋ ಹಾಗೆ ಹೇಳಿದರು. ಆದರೆ ನಟನೆ ನನ್ನ ಬಾಬತ್ತಲ್ಲ ಎಂಬುದು ನನಗೆ ಎಂದೋ ಅರಿವಾಗಿ ಹೋಗಿತ್ತು.
ಇಲ್ಲಿನ ಒಂದು ವಿಶೇಷವೆಂದರೆ ೧೯೫೨ ರಲ್ಲಿ ಬಿ. ವಿಠಲಾಚಾರ್ಯರು ತಯಾರಿಸಿದ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ಮುತ್ತುರಾಜ (ರಾಜಕುಮಾರ ಎಂದು ನಾಮಾಂತರವಾಗುವ ಮೊದಲು) ಅವರಿಗೆ ಸಪ್ತರ್ಷಿಗಳಲ್ಲಿ ಒಬ್ಬ ಋಷಿಯ ಪಾತ್ರವನ್ನು ನೀಡಿದ್ದರಂತೆ. ಅದರಲ್ಲಿ ಅವರು ಎರಡು ವಾಕ್ಯಗಳ ಒಂದೇ ಒಂದು ಸಂಭಾಷಣೆ ಹೇಳಬೇಕಾಗಿತ್ತು. ಕಣ್ಣು ಕುಕ್ಕುವ ಲೈಟ್ ನಿಂದಾಗಿ ಕ್ಯಾಮಿರಾ ಮುಂದೆ ತನ್ನ ಪಾಲಿನ ಮಾತನಾಡಲು ಮುತ್ತುರಾಜ ತಡವರಿಸಿದ ವಿದ್ಯಮಾನ ಒಂದೆರಡು ವರ್ಷಗಳ ಬಳಿಕ ತಿಳಿಯಿತು. ಈ ವಿಷಯದಲ್ಲಿ ನಾನು ಮುತ್ತುರಾಜ ಅವರಿಗಗೂ, ನನಗೂ ಸಾಮ್ಯವಿದೆ ಎಂಬುದು ಒಂದು ಸಣ್ಣ ಸಮಾಧಾನ. ಹಾಗೆಯೇ ತುರ್ತು ಪರಿಸ್ಥಿತಿಯ ನಿಯಮಗಳಿಗೆ ಅನುಗುಣವಾಗಿ ಅವರು ಅಭಿನಯಿಸಿದ ಚಿತ್ರದ ದೃಶ್ಯ ಬದಲಾಯಿಸಿದಂತೆ, ಮಗಳ ಮದುವೆಯ ಸಮಯ ವರದಕ್ಷಿಣೆಯ ತಗಾದೆಯಿಂದ ಮನ ನೊಂದ ಹೆಣ್ಣು ಹೆತ್ತವರು, ತಮ್ಮ ಮಗನ ಮದುವೆಯ ಸಮಯ ವರದಕ್ಷಿಣೆ ಕೇಳತ್ತಾರೆ. ಮಕ್ಕಳನ್ನು ಹೆತ್ತವರ ಈ ಇಬ್ಬಗೆಯ ನೀತಿ ನಾಟಕದಲ್ಲಿ ಅನಾವರಣಗೊಳ್ಳುತ್ತದೆ. ವಿಚಿತ್ರವೆಂದರೆ ತುರ್ತು ಪರಿಸ್ಥಿತಿಯ ನಿಯಮಾವಳಿಗೆ ಈ ಕೊನೆಯ ದೃಶ್ಯ (ಮುರು ನಿಮಿಷ) ಸರಿ ಹೊಂದದಿದ್ದುದರಿಂದ ನಾಟಕ ಪ್ರಸಾರವಾಗುವಾಗ ಅದಕ್ಕೆ ಕತ್ತರಿ ಬಿದ್ದಿತು. ಇಲ್ಲಿಯೂ ಸುಮಾರು ಸಾಮ್ಯತೆ ಇರಗುವುದು ಒಂದು ವಿಶೇಷ.
(ಮುಂದುವರಿಯುವುದು)

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಮದ್ರಾಸ್ ದೂರದರ್ಶನದಲ್ಲಿ ಕನ್ನಡ ವಿಭಾಗ ಉದ್ಘಾಟಿಸಿದ್ದರು ಡಾ. ರಾಜ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*