ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಚುನಾವಣಾ ಮತಯಂತ್ರಗಳು ತಲುಪಬೇಕಾದ ಜಾಗಕ್ಕೆ ತಲುಪಿಯಾಗಿದೆ. ಮತದಾನ ಆರಂಭವಾಗಲು ಕೆಲವೇ ಗಂಟೆಗಳು ಬಾಕಿ. ಸಾಲು ಸಾಲು ರಜಾ ಇದೆ ಎಂದು ಟೂರಿಗೆ ಹೋಗಲು ಪ್ಲಾನ್ ಮಾಡಿಕೊಂಡವರೂ ಬೇಗನೆ ನಿಮ್ಮ ಮತಗಟ್ಟೆಗೆ ಮೊದಲು ತೆರಳಿ. ಓಟು ಮಾಡುವುದನ್ನು ಮರೀಬೇಡಿ.
ಹೀಗಿರುತ್ತದೆ ಓಟು:
ಹಿಂದೆಲ್ಲ ಪೇಪರ್ ನಲ್ಲಿ ಶಾಯಿಯ ಮುದ್ರೆ ಗುದ್ದಿ ಓಟು ಮಾಡುವ ಪರಿಪಾಠ ಇತ್ತು. ಬಳಿಕ ಮತಯಂತ್ರ ಬಂದು ವರ್ಷಗಳಾದವು. ಈಗ ಓಟು ಮಾಡುವುದು ಸುಲಭ. ಯಾವುದೇ ಗೊಂದಲಗಳಿಲ್ಲದೆ ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ) ಮತ್ತು ವಿವಿಪ್ಯಾಟ್ ಬಳಸಿ ನಿರಾಳವಾಗಿ ಯಾವ ರೀತಿ ಮತ ಚಲಾಯಿಸಬಹುದು.
ಮತದಾರರ ಫೋಟೋ ಗುರುತಿನ ಚೀಟಿ ಮತ್ತು ಮತದಾನದ ಚೀಟಿಯನ್ನು ಸಿದ್ಧವಾಗಿಟ್ಟುಕೊಂಡು ಸರತಿ ಸಾಲಿನಲ್ಲಿ ನಿಂತುಕೊಳ್ಳಬೇಕು. ಮತಗಟ್ಟೆಯ ಒಂದನೇ ಅಧಿಕಾರಿ ಮತದಾರರ ಪಟ್ಟಿಯಲ್ಲಿ ಮತದಾರನ ಹೆಸರನ್ನು ಮತ್ತು ಗುರುತಿನ ಚೀಟಿಯನ್ನು ಪರಿಶೀಲಿಸುತ್ತಾರೆ. 2ನೇ ಮತಗಟ್ಟೆ ಅಧಿಕಾರಿ ನಿಗದಿತ ಬೆರಳಿಗೆ ಶಾಯಿಯ ಗುರುತು ಹಾಕುತ್ತಾರೆ, ಮತದಾನದ ಚೀಟಿ ನೀಡಿ ಸಹಿ ಪಡೆದುಕೊಳ್ಳುತ್ತಾರೆ. 3ನೇ ಮತಗಟ್ಟೆ ಅಧಿಕಾರಿ 3 ಮತದಾನದ ಚೀಟಿ ಪಡೆದು ಶಾಯಿ ಹಾಕಿರುವ ಬೆರಳನ್ನು ಪರಿಶೀಲಿಸುತ್ತಾರೆ.
ಮತಗಟ್ಟೆಯ ಅಧ್ಯಕ್ಷಾಧಿಕಾರಿಯು ಮತದಾನದ ಸ್ಥಳಕ್ಕೆ ಹೋಗಿ ಎಂದು ಹೇಳಿದಾಗ ಅಲ್ಲಿಗೆ ತೆರಳಿ ಮತದಾನ ಮಾಡುವುದಕ್ಕೆ ಯಂತ್ರ ಸಿದ್ಧವಾಗಿರುವುದನ್ನು ಸೂಚಿಸುವ ಹಸುರು ದೀಪ ಉರಿಯುತ್ತಿದೆಯೇ ಎಂದು ನೋಡಬೇಕು. ಆಯ್ಕೆ ಮಾಡಿಕೊಂಡ ಅಭ್ಯರ್ಥಿಯ ಹೆಸರು- ಚಿಹ್ನೆಯ ಎದುರು ಇರುವ ಕೆಂಪು ದೀಪ ಉರಿಯುತ್ತದೆ. ಬ್ಯಾಲೆಟ್ ಯೂನಿಟ್‌ನಲ್ಲಿ ನಿಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರು/ ಚಿಹ್ನೆಯ ಎದುರು ಇರುವ ನೀಲಿ ಗುಂಡಿಯನ್ನು ಒತ್ತಿ.
ಆಯ್ಕೆ ಮಾಡಿಕೊಂಡ ಅಭ್ಯರ್ಥಿಯ ಕ್ರಮಸಂಖ್ಯೆ, ಹೆಸರು ಮತ್ತು ಚಿಹ್ನೆಯನ್ನು ಒಳಗೊಂಡಿರುವ ಬ್ಯಾಲೆಟ್ ಚೀಟಿಯನ್ನು ವಿವಿಪ್ಯಾಟ್ ಮುದ್ರಣ ಯಂತ್ರವು ಮುದ್ರಿಸಿ ಕೊಡುತ್ತದೆ. ಬ್ಯಾಲೆಟ್ ಚೀಟಿಯು ಏಳು ಸೆಕೆಂಡ್‌ಗಳವರೆಗೆ ಕಾಣಿಸುತ್ತದೆ. ಅನಂತರ ಅದು ಹರಿದುಕೊಂಡು ಮುದ್ರಣ ಯಂತ್ರದ ಡಬ್ಬದೊಳಗೆ ಬೀಳುತ್ತದೆ. ಆಗ ಬೀಪ್ ಶಬ್ದ ಕೇಳಿಸುತ್ತದೆ.
ವಿವಿಪ್ಯಾಟ್ (ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರೈಯಲ್) ವಿದ್ಯುನ್ಮಾನ ಮತಯಂತ್ರಕ್ಕೆ ಜೋಡಿಸಿರುವ ಪ್ರಿಂಟರ್‌ನಂತೆ ಕಾರ್ಯ ನಿರ್ವಹಿಸುವ ಸರಳ ಸಾಧನವಾಗಿದೆ. ಮತದಾರರು ಮತದಾನದ ವೇಳೆ ತಾವು ಯಾವ ಅಭ್ಯರ್ಥಿಗೆ ಅಥವಾ ಚಿಹ್ನೆಯ ಪರವಾಗಿ ಮತ ಚಲಾಯಿಸಿದ್ದಾರೆ ಎಂಬುದನ್ನು ಈ ಸಾಧನ ಪ್ರದರ್ಶಿಸುತ್ತದೆ. ನೀವು ಇವಿಎಂನಲ್ಲಿರುವ ಮತದಾನದ ಬಟನ್ ಒತ್ತಿದ ತಕ್ಷಣ ವಿವಿಪ್ಯಾಟ್‌ಗೆ ಇದರ ಸಂದೇಶ ರವಾನೆಯಾಗಿ ಸ್ವಯಂಚಾಲಿತವಾಗಿ ಮತದಾನ ಮಾಡಿದ ಚಿಹ್ನೆಯ ಮತ್ತಿತರೆ ವಿವರವುಳ್ಳ ಪೇಪರ್ ಚೀಟಿಯೊಂದು ಮುದ್ರಿತವಾಗಿ ಪ್ರದರ್ಶನಗೊಳ್ಳುತ್ತದೆ.
ಈ ಚೀಟಿ 7 ಸೆಕೆಂಡ್‌ಗಳ ಕಾಲ ಮತದಾರರಿಗೆ ಕಾಣಿಸಿಕೊಂಡ ಬಳಿಕ ಕಟ್ ಆಗಿ ಸೀಲ್ ಮಾಡಿರುವ ಬಾಕ್ಸ್‌ನಲ್ಲಿ ಬೀಳುತ್ತದೆ. ಈ ಮೂಲಕ ನೀವು ಮತ ಹಾಕಿರುವ ಪಕ್ಷಕ್ಕೆ ಅಥವಾ ವ್ಯಕ್ತಿಗೆ ಆ ಮತ ಹೋಗಿದೆಯೇ ಎಂಬುದನ್ನು ಆ ಸಮಯದಲ್ಲಿ ಖಾತ್ರಿಪಡಿಸಿಕೊಳ್ಳಬಹುದು.
ವಿವಿಪ್ಯಾಟ್‌ನ ಉದ್ದೇಶವು ಇವಿಎಂ ಮಷಿನ್‌ಗಳ ವಿಶ್ವಾಸಾರ್ಹತೆಯನ್ನು ಸ್ಪಷ್ಟಪಡಿಸಿಕೊಳ್ಳಲು ಎನ್ನಬಹುದು. ಆದರೆ, ಮತದಾರನು ವಿವಿಪ್ಯಾಟ್‌ನಲ್ಲಿ ಬರುವ ಚೀಟಿಯನ್ನು ಕೇವಲ ನೋಡಬಹುದೇ ಹೊರತು ಆ ಚೀಟಿಯನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ.
ಗಮನಿಸಿ:
- ಅಂಗವಿಕಲರಿಗೆ ಅನುಕೂಲವಾಗುವಂತೆ ರ್‍ಯಾಂಪ್ ಸೌಲಭ್ಯ, ವೀಲ್ ಚೇರ್, ಸಾರಿಗೆ ಸೌಲಭ್ಯ ಮತ್ತು ಸಹಾಯಕ ಸಿಬಂದಿ, ಮಂದ ದೃಷ್ಟಿ ಹೊಂದಿರುವವರಿಗೆ ಭೂತಗಾಜಿನ ಸೌಲಭ್ಯ, ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಮೊದಲ ಆದ್ಯತೆ ಇಲ್ಲಿವೆ. ಈ ಸೌಲಭ್ಯಗಳನ್ನು ಕೇಳಿ ಪಡೆದುಕೊಳ್ಳಿ.
- ಮತಗಟ್ಟೆಯಲ್ಲಿ ಕುಡಿಯುವ ನೀರು, ಪ್ರಾಥಮಿಕ ಚಿಕಿತ್ಸೆ, ಶೌಚಾಲಯ ಸೌಲಭ್ಯ ಮತದಾರರಿಗೆ ನೆರವಾಗಲು ಮಾರ್ಗಸೂಚಿಗಳ ಅಳವಡಿಕೆ, ಪುರುಷ ಮತ್ತು ಮಹಿಳಾ ಮತದಾರರಿಗೆ ಪ್ರತ್ಯೇಕ ಸಾಲು ಇರುತ್ತದೆ.
- ಪ್ರತಿ ಪುರುಷರು ಮತಗಟ್ಟೆ ಪ್ರವೇಶಿಸುವ ವೇಳೆಯಲ್ಲಿ ಇಬ್ಬರು ಮಹಿಳಾ ಮತದಾರರಿಗೆ ಪ್ರವೇಶಿಸಲು ಅನುವು ಮಾಡಿಕೊಡಲಾಗುತ್ತದೆ.
ಗಮನಿಸಿ:
- ಎಪಿಕ್ ಕಾರ್ಡು ಇಲ್ಲದಿದ್ದರೆ….
ಎಪಿಕ್ ಕಾರ್ಡ್ ಇಲ್ಲದಿದ್ದರೆ ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ , ಕೇಂದ್ರ/ರಾಜ್ಯ ಸಾರ್ವಜನಿಕ ವಲಯದ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ನೀಡಿರುವ ಭಾವಚಿತ್ರ ಇರುವ ಗುರುತಿನ ಚೀಟಿ, ಅಂಚೆ ಕಚೇರಿ, /ಬ್ಯಾಂಕ್‌ಗಳಲ್ಲಿ ತೆರೆದ ಉಳಿತಾಯ ಖಾತೆಯ ಕುರಿತು ನೀಡಿದ ಭಾವಚಿತ್ರವಿರುವ ಪಾಸ್‌ಪುಸ್ತಕ, ಪಾನ್‌ಕಾರ್ಡ್, ಆರ್‌ಜಿಐ, ಎನ್‌ಪಿಆರ್ ಬಾಬ್ತು ಸ್ಮಾರ್ಟ್‌ಕಾರ್ಡ್, ಎಂಎನ್‌ಆರ್‌ಇಜಿಎ ಜಾಬ್ ಕಾರ್ಡ್, ಕೇಂದ್ರ ಸರಕಾರದ ಕಾರ್ಮಿಕ ಇಲಾಖೆಯು ನೀಡಿರುವ ಆರೋಗ್ಯ ವಿಮೆಯ ಸ್ಮಾರ್ಟ್‌ಕಾರ್ಡ್, ಭಾವಚಿತ್ರ ಇರುವ ಪಿಂಚಣಿ ದಾಖಲೆಗಳು, ಸಂಸದರು /ಶಾಸಕರುಗಳಿಗೆ ನೀಡಲಾದ ಅಧಿಕೃತ ಕಾರ್ಡ್, ಆಧಾರ್ ಕಾರ್ಡ್ ಗಳಲ್ಲಿ ಯಾವುದಾದರೂ ಒಂದನ್ನು ಮತದಾನಕ್ಕೆ ಗುರುತು ದಾಖಲೆಯಾಗಿ ಬಳಸಬಹುದು.
ತಡವೇಕೆ, ಸಮಯ ಮೀರುವ ಮೊದಲು ಮತ ಚಲಾಯಿಸಿ.
Be the first to comment on "ಮತಗಟ್ಟೆಗೆ ಬನ್ನಿ, VOTE ಮಾಡ್ಲಿಕ್ಕೆ ಮರೀಬೇಡಿ"