ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ನಾಟಕ ಹಾಗೂ ಪ್ರೇಕ್ಷಕರ ನಡುವಣ ನಂಟು ಮತ್ತಷ್ಟು ಗಟ್ಟಿಯಾಗಬೇಕಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಾಸುಮ ಕೊಡಗು ಹೇಳಿದರು.
ಖ್ಯಾತ ರಂಗಕರ್ಮಿ ಬಿ.ವಿ. ಕಾರಂತ ಹುಟ್ಟೂರಾದ ಬಂಟ್ವಾಳ ತಾಲೂಕಿನ ಮಂಚಿ ಕುಕ್ಕಾಜೆಯಲ್ಲಿರುವ ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ವತಿಯಿಂದ ಕರ್ನಾಟಕ ನಾಟಕ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಲಯನ್ಸ್ ಕ್ಲಬ್ ಸಾಲೆತ್ತೂರು ಮಂಚಿ ಸಹಕಾರದೊಂದಿಗೆ ಬುಧವಾರ ಸಂಜೆ ಲಯನ್ಸ್ ಸಭಾಭವನ ಮಂಚಿಯಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆಯ ಅಧ್ಯಕ್ಷತೆ ವಹಿಸಿ, ಹಿರಿಯ ರಂಗ ಕಲಾವಿದ ಮಂಜು ವಿಟ್ಲ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ರಂಗಚಟುವಟಿಕೆಗಳನ್ನು ನಡೆಸಲು ಹಾಗೂ ನಾಟಕದ ಕುರಿತು ಅರಿವು ಮೂಡಿಸಲು ರಂಗಮಂದಿರಗಳ ನಿರ್ಮಾಣದ ಅವಶ್ಯಕತೆಯನ್ನು ಒತ್ತಿ ಹೇಳಿದ ಅವರು, ಪ್ರತಿಯೊಂದು ತಾಲೂಕಿನಲ್ಲೂ ರಂಗಮಂದಿರಗಳನ್ನು ನಿರ್ಮಿಸುವ ಅವಶ್ಯಕತೆ ಇದ್ದು, ಈ ಕುರಿತು ಕಲಾವಿದರು ಮತ್ತು ಕಲಾಸಕ್ತರು ಸಂಘಟಿತರಾಗಿ ಹಕ್ಕೊತ್ತಾಯ ಮಂಡಿಸುವ ಅವಶ್ಯಕತೆ ಇದೆ ಎಂದು ಬಾಸುಮ ಅಭಿಪ್ರಾಯಪಟ್ಟರು.
ಹೊಸತನಗಳು ಆಧುನಿಕ ರಂಗಭೂಮಿಯಲ್ಲಿ ನಿತ್ಯನಿರಂತರವಾಗಿದೆ. ಯಾವುದೇ ನಾಟಕಗಳು ನಾಟಕಕಾರ, ನಿರ್ದೇಶಕನ ಪರಿಕಲ್ಪನೆಯಲ್ಲಿ ಮೂಡಿಬಂದರೂ ರಂಗಭೂಮಿಯಲ್ಲಿ ನಟನೇ ಸವ್ಯಸಾಚಿ. ಕ್ಯೂಬಾದ ರಂಗಕರ್ಮಿ ಕಾರ್ಲೋಸ್ ಸೆಲ್ಡ್ರಾನ್ ನ ಈ ಬಾರಿಯ ರಂಗಸಂದೇಶದಂತೆ ಪ್ರತಿಯೊಬ್ಬರು ರಂಗಕಾಯಕಗಳಿಗೆ ಜಾಗ ಹುಡುಕಬೇಕಿಲ್ಲ, ನೀನೆಲ್ಲಿರುವೆಯೋ ಅಲ್ಲೇ ಪ್ರೇಕ್ಷಕರಿದ್ದಾರೆ ಎಂಬುವುದನ್ನು ರಂಗಕರ್ಮಿಗಳು ಮನನ ಮಾಡಿಕೊಂಡು ಮುನ್ನಡೆಯಬೇಕಿದೆ ಎಂದು ಅವರು ಹೇಳಿದರು.
ಈ ಸಂದರ್ಭ ಹಿರಿಯ ರಂಗ ಕಲಾವಿದ ಹಾಗೂ ಸಂಘಟಕ ಮಹಾಬಲೇಶ್ವರ ಹೆಬ್ಬಾರ ಅವರು ಆಧುನಿಕ ರಂಗಭೂಮಿಯ ಸ್ಥಿತಿಗತಿಗಳ ಕುರಿತು ಉಪನ್ಯಾಸ ನೀಡಿದರು.
ಹಿರಿಯ ರಂಗಕಲಾವಿದ ಮಂಜು ವಿಟ್ಲ ಅವರನ್ನು ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಸನ್ಮಾನಿಸಲಾಯಿತು. ಈ ಸಂದರ್ಭ ಮಂಜು ವಿಟ್ಲ ಅವರು ವಿಟ್ಲದಲ್ಲಿ ದಶಕಗಳ ಹಿಂದೆ ಅಭಿನಯಿಸಿದ ತುಳು ಭಾಷೆಯಲ್ಲಿ ಪ್ರಯೋಗವಾದ ಚೋಮನ ದುಡಿಯ ಚೋಮನ ಪಾತ್ರವನ್ನು ಕಟ್ಟಿಕೊಟ್ಟ ವಿಚಾರವನ್ನು ಹಿರಿಯ ರಂಗಕರ್ಮಿ ಮೂರ್ತಿ ದೇರಾಜೆ, ಮಂಜು ಅವರ ಜೀವನಸಾಧನೆಯನ್ನು ತೆರೆದಿಟ್ಟರು.
ಮುಖ್ಯ ಅತಿಥಿಗಳಾಗಿದ್ದ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ, ರಂಗಕರ್ಮಿ, ಪತ್ರಕರ್ತ ಮೌನೇಶ ವಿಶ್ವಕರ್ಮ ಮತ್ತು ಮಂಚಿ-ಸಾಲೆತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ ಮನರಂಜನ್ ಶುಭ ಹಾರೈಸಿದರು.
ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಷ ನ್ಯಾಯವಾದಿ ಕಜೆ ರಾಮಚಂದ್ರ ಭಟ್ ಸ್ವಾಗತಿಸಿದರು. ಸದಸ್ಯ ರಮಾನಂದ ನೂಜಿಪ್ಪಾಡಿ ವಂದಿಸಿದರು. ನ್ಯಾಯವಾದಿ ರವೀಂದ್ರ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಸೀತಾರಾಮ ಕೇವಳ ನೇತೃತ್ವದಲ್ಲಿ ಪುತ್ತೂರಿನ ರಂಗದೀಪ ತಂಡದ ಕಲಾವಿದರು ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ರಂಗಗೀತೆಗಳನ್ನು ಹಾಡಿದರು.
Be the first to comment on "ನಾಟಕ, ಪ್ರೇಕ್ಷಕನ ಸಂಬಂಧ ಗಟ್ಟಿಗೊಳಿಸಲು ಪ್ರಯತ್ನ ಅಗತ್ಯ: ಬಾಸುಮ ಕೊಡಗು"