ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲರ ಸಂಘ ಬಂಟ್ವಾಳ, ಸಾರ್ವಜನಿಕ ಶಿಕ್ಷಣ ಇಲಾಖೆ, ಬಂಟ್ವಾಳ ತಾಲೂಕು ಪಂಚಾಯತ್, ಕಂದಾಯ ಇಲಾಖೆ ಹಾಗೂ ಇತರ ಸರಕಾರಿ ಇಲಾಖೆಗಳ ಸಹಯೋಗದೊಂದಿಗೆ ಕಾನೂನು ಸಾಕ್ಷರತಾ ರಥ ಮತ್ತು ಸಂಚಾರಿ ನ್ಯಾಯಾಲಯಕ್ಕೆ ಮಂಗಳವಾರ ಬಂಟ್ವಾಳ ನ್ಯಾಯಾಲಯದ ಆವರಣದಲ್ಲಿ ಚಾಲನೆ ನೀಡಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶ ಮುಹಮ್ಮದ್ ಇಮ್ತಿಯಾಝ್ ಅಹ್ಮದ್ ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ ನೀಡಿ ಮಾತನಾಡಿ, ಮಾ. 29ರವರೆಗೆ ದಿನಕ್ಕೆ ಮೂರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ರಥವು ಪ್ರತೀ ಗ್ರಾಮ ಪಂಚಾಯತ್ ಹಾಗೂ ಶಾಲೆಯ ವಠಾರದಲ್ಲಿ ಚಲಿಸುವುದರಿಂದ ಪಿಡಿಒ, ಸಿಡಿಪಿಒ ಹಾಗೂ ಶಿಕ್ಷಣ ಇಲಾಖೆಯ ಸಹಕಾರ ಅಗತ್ಯವಾಗಿದ್ದು, ಕಾರ್ಯಕ್ರಮದ ಉದ್ದೇಶವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದು ಶುಭ ಹಾರೈಸಿದರು.
ಪ್ಯಾನೆಲ್ ವಕೀಲ ಆಶಾಮಣಿ ಡಿ.ರೈ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಹಿಳಾ ದೌರ್ಜನ್ಯ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಹಾಗೂ ಸಿಡಿಪಿಒ ಹಿರಿಯ ಮೇಲ್ವಿಚಾರಕಿ ಉಷಾ ಕುಮಾರಿ ಎಂ. ಮಾತನಾಡಿದರು. ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶಯಾದ ಪ್ರತಿಭಾ ಡಿ.ಎಸ್., ಶಿಲ್ಪಾ ಜಿ., ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ರಮೇಶ್ ಉಪಾಧ್ಯಾಯ ಹಾಜರಿದ್ದರು. ವಕೀಲ ನರೇಂದ್ರನಾಥ ಭಂಡಾರಿ ಕಾನೂನು ಸಾಕ್ಷರತಾ ರಥದ ಬಗ್ಗೆ ಪ್ರಸ್ತಾವಿಸಿ, ಸ್ವಾಗತಿಸಿದರು. ವಕೀಲೆ ಶೈಲಜಾ ರಾಜೇಶ್ ವಂದಿಸಿದರು. ಕಾನೂನು ಸಾಕ್ಷರತಾ ರಥವು ಮಧ್ಯಾಹ್ನ ಕೊಡಂಗೆ ಸರಕಾರಿ ಪ್ರೌಢಶಾಲೆ ಆಗಮಿಸಿ, ಸಂಜೆ ಪುದು ಗ್ರಾಪಂ ವಠಾರದಲ್ಲಿ ಸಂಚರಿಸಿತು.
Be the first to comment on "ಕಾನೂನು ಸಾಕ್ಷರತಾ ರಥ, ಸಂಚಾರಿ ನ್ಯಾಯಾಲಯಕ್ಕೆ ಬಂಟ್ವಾಳದಲ್ಲಿ ಚಾಲನೆ"