ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್ ಗಳು ಚುನಾವಣೆಗೆ ಪ್ರಭಾವ ಬೀರುವ ರೀತಿಯಲ್ಲಿ ಇರಬಾರದು ಎಂಬ ಕಟ್ಟುನಿಟ್ಟಿನ ನಿಯಮ ಇರುವುದು ಸಾಮಾನ್ಯ. ಆದರೆ ಸೋಮವಾರ ಬೆಳಗಿನ ಜಾವ ನೀತಿ ಸಂಹಿತೆ ಕಟ್ಟುನಿಟ್ಟಿನ ಜಾರಿಗೆ ಮುಂದಾದ ಪುರಸಭೆಯ ಸಿಬ್ಬಂದಿ, ಬಂಟ್ವಾಳ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಆಸುಪಾಸಿನಲ್ಲಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಶುಭ ಕೋರುವ ಭಕ್ತರ ಬ್ಯಾನರ್, ಫ್ಲೆಕ್ಸ್ ಅನ್ನು ತೆರವುಗೊಳಿಸುವ ಮೂಲಕ ಭಕ್ತರ ಆಕ್ರೋಶಕ್ಕೆ ಕಾರಣರಾದರು.
ಚುನಾವಣಾ ನೀತಿ ಸಂಹಿತೆ ಇರುವುದಾದರೂ ಈ ಮೊದಲೇ ಹಾಕಿದ ಫ್ಲೆಕ್ಸ್ ಗಳನ್ನು ತೆರವುಗೊಳಿಸಿರುವುದು ಹಾಗೂ ಮಾ.13ರಂದು ಬ್ರಹ್ಮಕಲಶೋತ್ಸವ ನಡೆಯಲಿರುವುದರಿಂದ ಎರಡು ದಿನಗಳವರೆಗೆ ತಾಳ್ಮೆ ವಹಿಸದೆ ಕಟ್ಟುನಿಟ್ಟಿನ ಜಾರಿಗೆ ಮುಂದಾಗಿರುವ ಪುರಸಭೆಯ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಪುರಸಭೆ ಸಿಬ್ಬಂದಿ ಮತ್ತು ಭಕ್ತರ ಮಧ್ಯೆ ಕೆಲ ಸಮಯ ಮಾತಿನ ಚಕಮಕಿಯೂ ನಡೆಯಿತು. ಯಾವುದೇ ರಾಜಕೀಯ ಪ್ರಚಾರದ ಉದ್ದೇಶದಿಂದ ನಾವು ಬ್ಯಾನರ್ ಅಳವಡಿಸಿಲ್ಲ, ಇಲ್ಲಿನ ಇತಿಹಾಸ ಪ್ರಸಿದ್ಧ ಹಾಗೂ ಭಕ್ತರ ಭಕ್ತಿಯ ನೆಲೆಯಾದ ಪೊಳಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ಇಲ್ಲಿ ಬ್ಯಾನರ್ ಗಳನ್ನು ಹಾಕಲಾಗಿದೆ ಇದನ್ನು ತೆರವುಮಾಡಬಾರದು ಎಂದು ಭಕ್ತಸಮುದಾಯ ಪುರಸಭೆ ಸಿಬ್ಬಂದಿಗೆ ತಿಳಿಸಿದರು. ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಸ್ಥಳಕ್ಕೆ ಬೇಟಿ ಪರಿಶೀಲಿಸಿದರು. ಬಳಿಕ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ ನಂತರ ತೆರವು ಕಾರ್ಯಕ್ಕೆ ಬ್ರೇಕ್ ಹಾಕಲಾಯಿತು. ಹೀಗಾಗಿ ಪೊಳಲಿ ಕೈಕಂಬ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಎದುರು ಸಹಿತ ಹಲವೆಡೆ ಹಾಕಲಾದ ಬ್ಯಾನರ್ ನೆಲಕ್ಕುರುಳಲಿಲ್ಲ. ಮಾತುಕತೆ ಸಂದರ್ಭ ವಿವಿಧ ಸಮುದಾಯಗಳ ಮುಖಂಡರು, ಪುರಸಭೆ ಸಿಬ್ಬಂದಿ ಹಾಜರಿದ್ದರು.
Be the first to comment on "ಪೊಳಲಿ ಬ್ರಹ್ಮಕಲಶೋತ್ಸವ ಫ್ಲೆಕ್ಸ್ ಗೆ ನೀತಿಸಂಹಿತೆ ಬಿಸಿ, ಭಕ್ತರ ಆಕ್ರೋಶ"