- ಬಂಟ್ವಾಳ ಪೊಲೀಸ್ ಉಪವಿಭಾಗದಿಂದ ದೇವಸ್ಥಾನಗಳ ಮುಖ್ಯಸ್ಥರ ಸಮಾಲೋಚನಾ ಸಭೆ
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ: ಸಾರ್ವಜನಿಕರ ಭಾವನೆಗಳಿಗೆ ಸ್ಪಂದಿಸಿ ಪೊಲೀಸರು ಕೆಲಸ ಮಾಡುತ್ತಿದ್ದು, ಇದಕ್ಕೆ ಜನರ ಸಹಕಾರವೂ ಅಗತ್ಯ ಎಂದು ಬಂಟ್ವಾಳ ಉಪವಿಭಾಗ ಎಎಸ್ಪಿ ಸೈದುಲು ಅಡಾವತ್ ಹೇಳಿದರು.
ಬಂಟ್ವಾಳ ಪೊಲೀಸ್ ಉಪವಿಭಾಗದಿಂದ ಇಲ್ಲಿನ ರೋಟರಿ ಕ್ಲಬ್ ಸಭಾಂಗಣದಲ್ಲಿ ಬುಧವಾರ ಸಂಜೆ ವ್ಯಾಪ್ತಿಯ ದೇವಸ್ಥಾನಗಳ ಮುಖ್ಯಸ್ಥರ ಸಮಾಲೋಚನಾ ಸಭೆಯಲ್ಲಿ ಕಳ್ಳರು, ಸಮಾಜಘಾತುಕರಿಂದ ದೇಗುಲ ಪರಿಸರವನ್ನು ಕಾಪಾಡಿಕೊಳ್ಳಲು ಬೇಕಾದ ಸಲಹೆ ಸೂಚನೆಗಳನ್ನು ಆಲಿಸಿದ ಬಳಿಕ ಮಾತನಾಡಿದ ಅವರು, ಪ್ರತಿಯೊಂದು ದೇವಸ್ಥಾನಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ, ಸ್ವಯಂಚಾಲಿತ ಅಲಾರ್ಮ್ ಸಹಿತ ಸುರಕ್ಷತಾ ಕ್ರಮಕ್ಕೆ ಗಮನ ನೀಡಿ, ಯಾವುದೇ ಸಮಸ್ಯೆಗಳಿದ್ದಲ್ಲಿ ಪೊಲೀಸರಿಗೆ ಕರೆ ಮಾಡಲು ಸೂಚಿಸಿದರು.
ರಾತ್ರಿ ಎರಡು ಗಂಟೆಯ ಬಳಿಕ ಆರಾಧನಾಲಯಗಳ ಸಮೀಪ ಪೊಲೀಸ್ ಬೀಟ್ ಜಾಗೃತಗೊಳಿಸಬೇಕು, ಆಯಕಟ್ಟಿನ ಜಾಗಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು, ದೇವಸ್ಥಾನದಲ್ಲಿ ಜನಜಂಗುಳಿ ಇದ್ದಾಗ ಕಳ್ಳರ ಕುರಿತು ನಿಗಾ ಇಡಬೇಕು, ಜಾತ್ರೆ ಸಮಯದಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಸಹಕರಿಸಬೇಕು, ಗಾಂಜಾ ಸಹಿತ ಮಾದಕ ವಸ್ತುಗಳನ್ನು ಸೇವಿಸಿ ದೇವಸ್ಥಾನಗಳ ಆಸುಪಾಸುಗಳಲ್ಲಿ ಸಂಚರಿಸುವವರನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು ಎಂಬಿತ್ಯಾದಿ ಸಲಹೆಗಳು ಕೇಳಿಬಂದವು.
ನಾನಾ ದೇವಸ್ಥಾನಗಳ ಪ್ರಮುಖರಾದ ಜಿನರಾಜ ಆರಿಗ, ಪ್ರಕಾಶ ಶೆಟ್ಟಿ ಶ್ರೀಶೈಲ ತುಂಬೆ, ಉಮೇಶ್ ಬಂಟ್ವಾಳ, ಅರಳ ಗೋವಿಂದ ಪ್ರಭು, ಮುಳ್ಳುಂಜ ವೆಂಕಟೇಶ್ವರ ಭಟ್, ಎಸ್. ಕೃಷ್ಣ ನಾಯ್ಕ, ಪುರುಷೋತ್ತಮ ಶೆಣೈ, ರಾಜಾ ಬಂಟ್ವಾಳ, ನಾರಾಯಣ ಬೆಳ್ಚಡ, ಕೃಷ್ಣ ನಾಯ್ಕ, ಪುರುಷೋತ್ತಮ ಬಂಗೇರ, ಡಿ.ಸುರೇಶ್ ರೈ, ಜಯಕೀರ್ತಿ ವೈ.ಎಂ, ಜಗದೀಶ ಹೊಳ್ಳ, ಕೆ.ನರಸಿಂಹ ಕಾಮತ್, ಭಾಮಿ ನಾರಾಯಣ ಶೆಣೈ, ಪದ್ಮನಾಭ ಎಂ.ಸಿ. ಮತ್ತಿತರರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.
ಬಂಟ್ವಾಳ ಪೊಲೀಸ್ ವೃತ್ತನಿರೀಕ್ಷಕ ನಾಗರಾಜ್, ಎಸೈಗಳಾದ ಚಂದ್ರಶೇಖರ್, ಪ್ರಸನ್ನ, ಪ್ರೊಬೆಷನರಿ ಡಿವೈಎಸ್ಪಿ ಗೋವಿಂದರಾಜ್ ಮತ್ತಿತರರು ಅಹವಾಲು ಆಲಿಸಿದರು.
ಸೂಚನೆಗಳು: ದೇವಸ್ಥಾನದ ಪ್ರಮುಖ ದ್ವಾರಗಳು, ಒಳಭಾಗಗಳಲ್ಲಿ ಸಿಸಿ ಟಿವಿ, ಭದ್ರತಾ ಸಿಬ್ಬಂದಿ ನೇಮಕ, ಸ್ವಯಂಚಾಲಿತ ಅಲಾರಂ, ಸುತ್ತ ಬೇಲಿ, ಕೌಂಪೌಂಡ್ ನಿರ್ಮಾಣ, ಸೆನ್ಸಾರ್ ಅಳವಡಿಕೆ, ಕಾಣಿಕೆ ಡಬ್ಬಿಗಳನ್ನು ಪ್ರತಿ ೧೫ ದಿನಗಳೊಳಗೆ ತೆರೆದು ಹುಂಡಿ ಹಣ ವಿಲೇವಾರಿ, ಅಮೂಲ್ಯ ಆಭರಣ ಇಡಲು ಲಾಕರ್ ವ್ಯವಸ್ಥೆ, ರಸ್ತೆ ಬದಿ ಸಾರ್ವಜನಿಕ ಸ್ಥಳದಲ್ಲಿ ಕಾಣಿಕೆ ಡಬ್ಬಿ ಇರಿಸಿದರೆ ಅದರ ಭದ್ರತೆಯ ಜವಾಬ್ದಾರಿ, ವಿಐಪಿಗಳ ಭೇಟಿ ಸಂದರ್ಭ ಮುಂಚಿತವಾಗಿ ಪೊಲೀಸರಿಗೆ ಮಾಹಿತಿ ನೀಡುವುದು, ಅನಪೇಕ್ಷಿತ ಘಟನೆ, ಸಂಶಯಾಸ್ಪದ ವಸ್ತು, ವ್ಯಕ್ತಿಗಳ ಕಂಡರೆ, ಕಾನೂನುಬಾಹಿರ ಚಟುವಟಿಕೆಗಳಿದ್ದರೆ, ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಯಿತು.
ಜಾತ್ರೋತ್ಸವಗಳ ಸಂದರ್ಭ ೧೦ ದಿನ ಮುಂಚಿತವಾಗಿ ಮಾಹಿತಿ ನೀಡಬೇಕು, ರಥೋತ್ಸವ, ಮೆರವಣಿಗೆಗಳ ಮಾರ್ಗಗಳನ್ನು ಪೊಲೀಸರಿಗೆ ಮುಂಚಿತವಾಗಿ ಒದಗಿಸಬೇಕು, ಸ್ವಯಂಸೇವಕರ ಮಾಹಿತಿ ನೀಡಬೇಕು, ಬಂಟಿಂಗ್, ಬ್ಯಾನರ್ ಗೆ ಪೂರ್ವಾನುಮತಿ, ಕಿರಿದಾದ ಸ್ಥಳದಲ್ಲಿ ಜನಸಂದಣಿ ಉಂಟಾಗದಂತೆ ಅವಶ್ಯಕ ಕ್ರಮ, ಲೈಟಿಂಗ್ಸ್ ಸಂದರ್ಭ ಎಚ್ಚರಿಕೆ, ಪ್ರಸಾದ, ಆಹಾರ ಗುಣಮಟ್ಟದ ಕುರಿತು ನಿಗಾ ಇರಿಸಿ, ಅನಪೇಕ್ಷಿತ ಘಟನೆಗಳಿಗೆ ಆಸ್ಪದ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಎಎಸ್ಪಿ ಸೂಚಿಸಿದರು.
Be the first to comment on "ಸಾರ್ವಜನಿಕರ ಭಾವನೆಗಳಿಗೆ ಪೊಲೀಸ್ ಸ್ಪಂದನೆ: ಎಎಸ್ಪಿ"