ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ: ತಾಲೂಕಿನಲ್ಲಿ ಇದುವರೆಗೂ ಯಾವುದೇ ಪ್ರಕರಣಗಳು ಮಂಗನ ಕಾಯಿಲೆಗೆ ಸಂಬಂಧಿಸಿ ವರದಿಯಾಗಿಲ್ಲ. ಕಾರಿಂಜ ಸಮೀಪ ಕೆಲ ಪ್ರದೇಶಗಳಲ್ಲಿ ಕಾರ್ಯಾಚರಣೆ ಸಂಬಂಧಿಸಿ ರಕ್ತದ ಮಾದರಿ ಸಂಗ್ರಹಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಹೇಳಿದ್ದಾರೆ.
ಬಂಟ್ವಾಳ ತಾಲೂಕು ಪಂಚಾಯತ್ ಮಾಸಿಕ ಕೆಡಿಪಿ ಸಭೆಯು ಮಂಗಳವಾರ ಬಿ.ಸಿ.ರೋಡ್ ನ ತಾಪಂ ಎಸ್. ಜಿ.ಎಸ್.ವೈ ಸಭಾಂಗದಲ್ಲಿ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಮಾಹಿತಿ ನೀಡಿದ ಅವರು, ಕಾರಿಂಜ ಸಹಿತ ತಾಲೂಕಿನ ಇತರ ಭಾಗದಲ್ಲಿ ಕಾರ್ಯಾಚರಣೆ ನಡೆಸಿ, ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ರಕ್ತ ಮಾದರಿ ಸಂಗ್ರಹಿಸಿ ಶಿವಮೊಗ್ಗ ಲ್ಯಾಬ್ಗೆ ಕಳುಹಿಸಲಾಗಿದೆ ಮುಂಜಾಗೃತಾ ಕ್ರಮವಾಗಿ ಅರಣ್ಯ ಸಿಬ್ಬಂದಿ, ಕಾಡಂಚಿನ ಪ್ರದೇಶ ಜನರನ್ನು ಗುರುತಿಸಿ ಮೈಗೆ ಹಚ್ಚುವ ರೋಗ ನಿರೋಧಕ ಡಿಎಂಪಿ ಆಯಿಲ್ ಅನ್ನು ವಿತರಣೆ ಮಾಡಲಾಗಿದೆ ಎಂದರು. ಬಂಟ್ವಾಳ ತಹಶೀಲ್ದಾರ್ ರಶ್ಮಿ ಕಿಶೋರ್ ಉಪಸ್ಥಿತರಿದ್ದು, ಸಲಹೆ ನೀಡಿದರು. ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ ಹಾಜರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು.
ಫೆಬ್ರವರಿ ತಿಂಗಳಿನಿಂದ ಮುಂದಿನ ಮೇ ವರೆಗೆ ಗ್ರಾಮೀಣ ಭಾಗದಲ್ಲಿ ಕುಡಿಯುವ ಮೀರಿನ ಸಮಸ್ಯೆ ಉಂಟಾಗದಂತೆ ಮೇಲ್ವಿಚಾರಣೆ ವಹಿಸುವಂತೆ ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮೆಸ್ಕಾಂ ಇಂಜಿನಿಯರ್ ಗೆ ಸೂಚಿಸಿದರು.
ಕುಡಿಯುವ ನೀರಿನ ಅಭಾವವಿರುವ ಗ್ರಾಮದಲ್ಲಿ ಜಿಪಂ ಅನುದಾನ ಬಳಸಿ ಹೊಸ ಕೊಳವಿ ಬಾವಿಯನ್ನು ನಿರ್ಮಿಸಿ, ಅಲ್ಲದೆ, ಪಾಳುಬಿದ್ದ ಕೊಳವೆ ಬಾವಿಯನ್ನು ನವೀಕರಿಸುವ ಅಥವಾ ಇನ್ನೊಂದು ಕಡೆ ಜೋಡಿಸುವ ಕಾಮಗಾರಿಯನ್ನು ನಡೆಸುವ ವೇಳೆ ಅಗತ್ಯ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅವರು ನಿರ್ದೇಶಿಸಿದರು.
ಬಂಟ್ವಾಳ ಅರಣ್ಯ ವಲಯಾಧಿಕಾರಿ ಸುರೇಶ್ ಸಭೆಗೆ ಮಾಹಿತಿ ನೀಡಿ, ಅರಣ್ಯ ಇಲಾಖೆಯ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಎಸ್ಸಿ, ಎಸ್ಟಿ ಹಾಗೂ ಅರಣ್ಯ ಪ್ರದೇಶದ ನಿವಾಸಿಗಳಿಗೆ ಎಲ್ ಪಿಜಿ ಗ್ಯಾಸ್ ಸೌಲಭ್ಯ ವಿದ್ದು, ಈ ಬಗ್ಗೆ ೫೦ ಗ್ರಾಮಗಳಿಗೆ ಅರ್ಜಿ ಸಹಿತ ಮಾಹಿತಿ ನೀಡಲಾಗಿದೆ. ಆದರೆ, ೪ ಗ್ರಾಮಗಳ ೧೭ ಅರ್ಜಿಗಳು ಮಾತ್ರ ಬಂದಿವೆ ಎಂದು ತಿಳಿಸಿದರು. ಎಸ್ಸಿ, ಎಸ್ಟಿ ಗ್ಯಾಸ್ ಯೋಜನೆಯ ಫಲಾನುಭವಿಗಳ ಆಯ್ಕೆಗೆ ಅಧ್ಯಕ್ಷರಿಗೆ ಜವಾಬ್ದಾರಿ ನೀಡಿ, ಮತ್ತೊಮ್ಮೆ ಪರಿಶೀಲನೆ ನಡೆಸುವ ಬಗ್ಗೆ ಸಭೆಯಲ್ಲಿ ನಿರ್ಣಯ ಮಾಡಲಾಯಿತು. ತಾಲೂಕಿನ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದು,ಇಲಾಖಾ ಪ್ರಗತಿಯ ಮಾಹಿತಿ ನೀಡಿದರು.
Be the first to comment on "ಮಂಗನ ಕಾಯಿಲೆ ಬಂಟ್ವಾಳ ತಾಲೂಕಿನಲ್ಲಿ ವರದಿಯಾಗಿಲ್ಲ"