ಫೆ.2 ರಂದು 3 ಗಂಟೆಗೆ ಮರೋಡಿ ಗ್ರಾಮದಲ್ಲಿ ಮನೆ ಭೇಟಿ ಕಾರ್ಯಕ್ರಮ ಆರಂಭಗೊಳ್ಳಲಿದೆ. ಮನೆ ಭೇಟಿಯ ಮೂಲಕ ಸರಕಾರಿ ಶಾಲೆ ಉಳಿಸಲು ಗ್ರಾಮಸ್ಥರ ಸಹಕಾರ ಹಾಗೂ ಸರಕಾರಿ ಶಾಲೆ ಉಳಿಸುವ ಅನಿವಾರ್ಯತೆಯ ಬಗ್ಗೆ ತಂಡ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಿದೆ. ರಾತ್ರಿ ೮ ಗಂಟೆಗೆ ಕೂಕ್ರಬೆಟ್ಟು ಶಾಲೆಯಲ್ಲಿ ವಾಸವ್ಯ ಹೊಂದಿ ಫೆ. ೩ರಂದು ಬೆಳಿಗ್ಗೆ ೮ ಗಂಟೆಯಿಂದ ಮತ್ತೆ ಮನೆ ಭೇಟಿ ಕಾರ್ಯ ಮುಂದುವರೆಯಲಿದೆ. ಬೆಳಿಗ್ಗೆ ೯ ಗಂಟೆಯಿಂದ ಶಾಲೆಯಲ್ಲಿ ಶೈಕ್ಷಣಿಕ ಸಂವಾದ ಹಾಗೂ ಊರಿನ ಶಾಲೆ ಉಳಿಸಿ ಬೆಳೆಸುವ ಪ್ರತಿಜ್ಞೆಯೊಂದಿಗೆ ಸಮಾರೋಪ ನಡೆಯಲಿದೆ.
ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಕೂಕ್ರಬೆಟ್ಟು ಶಾಲೆಗೆ ೬೦ ವರ್ಷಗಳ ಇತಿಹಾಸವಿದೆ. ನೂರಾರು ಮಂದಿಗೆ ವಿದ್ಯಾದಾನವನ್ನು ನೀಡಿದ ಆ ವಿದ್ಯಾದೇಗುಲ ಮಕ್ಕಳ ಕೊರತೆಯಿಂದ ಮುಚ್ಚುವ ಸ್ಥಿತಿಗೆ ತಲುಪಿದೆ. ಕೂಕ್ರಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ದಶಕಗಳ ಹಿಂದೆ ನೂರಾರು ಮಕ್ಕಳಿದ್ದರು. ಆಂಗ್ಲ ಮಾಧ್ಯಮ ಶಿಕ್ಷಣದ ಪ್ರಭಾವದಿಂದ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಇಳಿಮುಖವಾಗಿದೆ. ಈಗ ಕೇವಲ 16 ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ.
ಮುಚ್ಚುವ ಹಂತದಲ್ಲಿದ್ದ ಬಂಟ್ವಾಳ ತಾಲೂಕಿನ ದಡ್ಡಲಕಾಡು ಶಾಲೆಗೆ ಮರುಜೀವ ನೀಡಿರುವ ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿಯ ಅಧ್ಯಕ್ಷ ಪ್ರಕಾಶ್ ಅಂಚನ್ ಅವರು ಇದೀಗ ಕೂಕ್ರಬೆಟ್ಟು ಶಾಲೆ ಉಳಿಸುವತ್ತ ಮುಖ ಮಾಡಿರುವುದು ಗ್ರಾಮದ ಶಿಕ್ಷಣಾಭಿಮಾನಿಗಳಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ಈ ಶಾಲೆಯ ಸ್ಥಿತಿಗತಿಯನ್ನು ಅರಿತುಕೊಂಡು, ಅದಕ್ಕೆ ಪುನಶ್ಚೇತನ ನೀಡಲು ಯೋಜನೆ ರೂಪಿಸಲಾಗಿದೆ. ಅದರಂತೆ ಫೆ.೨ರಂದು ಮರೋಡಿ ಗ್ರಾಮದಲ್ಲಿ ಮನೆ ಮನೆ ಭೇಟಿ, ಗ್ರಾಮ ವಾಸ್ತವ್ಯ ಮತ್ತು ೩ರಂದು ಗ್ರಾಮಸ್ಥರು, ಪೋಷಕರೊಂದಿಗೆ ಸಂವಾದವನ್ನು ಹಮ್ಮಿಕೊಳ್ಳಲಾಗಿದೆ. ಶಾಸಕರು ಸೇರಿದಂತೆ ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು, ಶಿಕ್ಷಣಾಭಿಮಾನಿಗಳನ್ನು, ಮಕ್ಕಳ ಪೋಷಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
Be the first to comment on "ಸರಕಾರಿ ಶಾಲೆ ಉಳಿಸಿ ತಂಡದಿಂದ ಗ್ರಾಮವಾಸ್ತವ್ಯ"