ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಕೆಡಿಪಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಂಜನಪದವಿನ ಕ್ರೀಡಾಂಗಣ ನಿರ್ಮಾಣ ಕಾರ್ಯದ ಕುರಿತು ಮಾಹಿತಿ ಕೇಳಿದ ಸಂದರ್ಭ, ಕ್ರೀಡಾಧಿಕಾರಿ ಉತ್ತರಿಸಿ, ಜಮೀನಿನ ಸರ್ವೇ ಕಾರ್ಯ ಪೂರ್ಣಗೊಂಡಿದೆ, ಮೈದಾನ ನಿರ್ಮಾಣಕ್ಕಾಗಿ ಅನುದಾನ ಇನ್ನು ಬಂದಿಲ್ಲ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಸೂಚಿಸಲಾಗಿರುವ ಜಮೀನಿನ ಸರ್ವೇ ಕಾರ್ಯ ನಡೆಸಿ, ಈ ಜಾಗ ಸೂಕ್ತವಾಗಿದೆಯೇ ಎಂಬುದನ್ನು ಪರಿಶೀಲನೆ ಮಾಡಿ ವರದಿ ನೀಡುವಂತೆ ಹೇಳಿದ ಶಾಸಕರು, ಸರಕಾರದ ಹಣವನ್ನು ದುರುಪಯೋಗ ಮಾಡವುದು ಸರಿಯಲ್ಲ. ಅದನ್ನು ನಾನು ಬಿಡುವುದಿಲ್ಲ ಎಂದರು.
ತಾಲೂಕಿನಲ್ಲಿ ಸುಮಾರು 8 ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿ 7 ಸಾವಿರ ಹೆಕ್ಟೇರ್ ಬರಡು ಬಿದ್ದಿರುವ ಜಮೀನಿನ ಸರ್ವೇ ಕಾರ್ಯವನ್ನು ವೈಜ್ಞಾನಿಕ ರೀತಿಯಲ್ಲಿ ನಡೆಸಿ, ಸರಕಾರದ ಮತ್ತು ಸಂಘಸಂಸ್ಥೆಗಳ ನೆರವಿನಿಂದ ಪುನಶ್ಚೇತನ ಕಾರ್ಯಕ್ಕೆ ಕ್ರಮವಹಿಸಬೇಕು. ತಾಲೂಕಿನಲ್ಲಿ ಬರಡು ಭೂಮಿಯಲ್ಲಿ ಫಲವತ್ತಾದ ಕೃಷಿ ಮಾಡಿ ಇತರ ತಾಲೂಕಿಗೆ ಮಾದರಿಯಾಗಬೇಕು ಎಂದು ಶಾಸಕರು ಸಭೆಗೆ ತಿಳಿಸಿದರು.
ಸಭೆಗೆ ಸ್ಥಳಿಯ ಜನಪ್ರತಿನಿಗಳ ಗೈರು, ಕಿಂಡಿ ಅಣೆಕಟ್ಟುಗಳ ಅವ್ಯವಸ್ಥೆ, ಪೋಡಿ ಮುಕ್ತ ಗ್ರಾಮದ ಬಗ್ಗೆ ಚರ್ಚೆ ನಡೆಯಿತು. ಈ ಸಂದರ್ಭ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ ಹಾಜರಿದ್ದರು.
ಮಂಗನ ಕಾಯಿಲೆ ಆತಂಕ ಬೇಡ:
ಬಂಟ್ವಾಳ ತಾಲೂಕಿನಲ್ಲಿ ಮಂಗನಕಾಯಿಲೆ ಬಗ್ಗೆ ಇದುವರೆಗೂ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಸಾರ್ವಜನಿಕರರು ರೋಗದ ಬಗ್ಗೆ ಆತಂಕಪಡಬೇಕಾಗಿಲ್ಲ ಎಂದು ತಾಲೂಕು ವೈದ್ಯಾಧಿಕಾರಿ ದೀಪಾ ಪ್ರಭು ಸಭೆಗೆ ಮಾಹಿತಿ ನೀಡಿದರು. ಆರೋಗ್ಯ, ಅರಣ್ಯ ಹಾಗೂ ಇತರ ಇಲಾಖೆಯ ಸಹಯೋಗದಲ್ಲಿ ತಾಲೂಕು ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಅರಣ್ಯ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಜಾಗೃತಿ ಕಾರ್ಯ ನಡೆಸಲಾಗುತ್ತಿದ್ದು, ಕರಪತ್ರಗಳನ್ನು ಹಂಚಲಾಗಿದೆ. ಅದಲ್ಲದೆ, ಕಾಡಿನಂಚಿನ ಪ್ರದೇಶಗಳಿಗೆ ಪ್ರವೇಶ ನಿರ್ಬಂದಿಸಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ವಿತರಣೆ ಆಗದ ಸಮವಸ್ತ್ರ:
ಶೈಕ್ಷಣಿಕ ಅವ ಮುಗಿಯುತ್ತಾ ಬಂದರೂ ಜಿಲ್ಲೆಯ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ 2ನೆ ಸೆಟ್ ಸಮವಸ್ತ್ರವನ್ನು ವಿತರಣೆ ಮಾಡಿಲ್ಲ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಬಡ ಮಕ್ಕಳಿಗೆ ಶೀಘ್ರ ವಿತರಣೆ ಮಾಡುವಂತೆ ಕ್ರಮ ಕೈಗೊಳ್ಳುವಂತೆ ಜಿಪಂ ಸದಸ್ಯ ಎಂ.ಎಸ್. ಮುಹಮ್ಮದ್ ಸಭೆಯನ್ನು ಒತ್ತಾಯಿಸಿದರು. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಿದ್ದು, ಸರಕಾರ ಹಾಗೂ ಶಿಕ್ಷಣ ಸಚಿವರ ಗಮನಕ್ಕೂತರಲಾಗಿದೆ. ಕೆಲವೊಂದು ತಾಂತ್ರಿಕ ದೋಷದಿಂದ ಸಮವಸ್ತ್ರ ಸಿಗುವಲ್ಲಿ ತಡವಾಗಿದೆ. ಮತ್ತೆ ಶಿಕ್ಷಣ ಸಚಿವರನ್ನು ಭೇಟಿಯಾಗಿ ಶೀಘ್ರ ವಿತರಣೆಗೆ ಕೋರಲಾಗುವುದು ಎಂದರು.
ವೃದ್ಧಾಪ್ಯವೇತನ, ವಿಧವಾ ವೇತನ ವಿತರಣೆ ವಿಳಂಬ:
ತಾಲೂಕಿನಲ್ಲಿ ವೃದ್ಧಾಪ್ಯ, ಅಂಗವಿಕಲ ವೇತನವನ್ನು ತಡೆಹಿಡಿಯಲಾಗಿದೆ. ಸಾವಿರಾರು ಫಲಾನುಭವಿಗಳಿಗೆ ವೇತನ ವಿತರಣೆಯಾಗಿಲ್ಲ ಎಂದು ಜಿಪಂ ಸದಸ್ಯ ತುಂಗಪ್ಪ ಬಂಗೇರ ಸಭೆಯ ಗಮನಸೆಳೆದಾಗ ಮುಖ್ಯಕಾರ್ಯನಿರ್ವಹಣಾಕಾರಿ ರಾಜಣ್ಣ ಪ್ರತಿಕ್ರಿಯಿಸಿ, ಈ ಬಗ್ಗೆ ಫಲಾನುಭವಿಗಳು ಶಾಸಕರಲ್ಲಿಯೂ ದೂರಿಕೊಂಡಿದ್ದಾರೆ ಎಂದರು. ಮಂಜೂರಾತಿ ನೀಡಿದ ಫಲಾನುಭವಿಗಳಿಗೆ ವಿತರಣೆ ಮಾಡಲಾಗಿದೆ ಖಜಾನ ಇಲಾಖೆ ಅಧಿಕಾರಿ ಸಭೆಗೆ ತಿಳಿಸಿದಾಗ, ಈ ಪೈಕಿ ಶೇ. 75ರಷ್ಟು ವೃದ್ಧಾಪ್ಯ ವೇತನ, ಶೇ. 50ರಷ್ಟು ವಿಧವಾ ವೇತನ ವಿತರಣೆಯಾಗಿಲ್ಲ ಎಂಬುವುದು ಅಂಕಿ ಅಂಶ ಸಹಿತ ಸಭೆ ಮುಂದಿಟ್ಟ ಶಾಸಕರು, ಈ ಬಗ್ಗೆ ಖಜಾನೆ ಹಾಗೂ ಕಂದಾಯ ಅಧಿಕಾರಿಗಳು ತುರ್ತು ಸಭೆ ನಡೆಸಿ, ಶೀಘ್ರ ವಿತರಣೆಗೆ ಕ್ರಮಗೊಳ್ಳುವಂತೆ ಸೂಚನೆ ನೀಡಿದರು.
Be the first to comment on "ಕ್ರೀಡಾಂಗಣಕ್ಕೆ ಬೆಂಜನಪದವು ಸೂಕ್ತವೇ ಎಂದು ಪರಿಶೀಲಿಸಿ – ಶಾಸಕ ರಾಜೇಶ್ ನಾಯ್ಕ್ ಸೂಚನೆ"