ಬಂಟ್ವಾಳ ವರದಿ: ಜೇಸಿಐ ಬಂಟ್ವಾಳದ ನೂತನ ಅಧ್ಯಕ್ಷ ಯತೀಶ್ ಕರ್ಕೇರಾ ಹಾಗೂ ಇತರ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ಸಂಜೆ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು. ವಲಯ 15 ಪ್ರಾಂತ್ಯ ಎಫ್‌ನ ವಲಯ ಉಪಾಧ್ಯಕ್ಷ ದಾಮೋದರ ಪಾಟಳಿ ನೂತನ ಅಧ್ಯಕ್ಷರಿಗೆ ಪದಗ್ರಹಣ ನೆರವೇರಿಸಿದರು.
ಮುಖ್ಯ ಅತಿಥಿಯಾಗಿದ್ದ ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿಯ ರಾಜಾಧ್ಯಕ್ಷ ಪ್ರಕಾಶ್ ಅಂಚನ್ ಮಾತನಾಡಿ ಬಡ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಅವರನ್ನು ಉತ್ತಮ ನಾಗರೀಕರನ್ನಾಗಿ ಮಾಡುವ ಜವಾಬ್ದಾರಿ ನಮ್ಮಲ್ಲೆರ ಮೇಲಿದೆ. ಆಂಗ್ಲ ಭಾಷೆ ಕಲಿಕೆ ಪ್ರಸ್ತುತ ಕಾಲಘಟ್ಟದಲ್ಲಿ ಅನಿವಾರ್ಯವಾಗಿದ್ದು ಬಡ ಮಕ್ಕಳು ಸರಕಾರಿ ಶಾಲೆಯಲ್ಲಿಯೇ ಆಂಗ್ಲ ಭಾಷೆ ಕಲಿಯುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಮಂಗಳೂರು ಕೆನರಾ ಬ್ಯಾಂಕ್ ವೃತ್ತ ಕಚೇರಿಯ ವ್ಯವಸ್ಥಾಪಕ ರಮೇಶ್ ನಾಕ್ ಮಾತನಾಡಿ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದರೂ ನಾವು ಅವುಗಳನ್ನು ಸದ್ಬಳಕೆ ಮಾಡುವ ಬದಲು ಟೀಕೆಗಳನ್ನು ಮಾಡುತ್ತೇವೆ. ಒಳ್ಳೆಯ ಯೋಜನೆಗಳು ಬಂದಾಗ ಪಕ್ಷ ಭೇದ ಮರೆತು ಅವುಗಳನ್ನು ಪ್ರೋತ್ಸಾಹಿಸ ಬೇಕು ಎಂದರು. ವ್ಯಕ್ತಿ ಅಭಿವೃದ್ಧಿ ಹೊಂದಲು ಸಾಕಷ್ಟು ಅವಕಾಶಗಳಿವೆ, ಬ್ಯಾಂಕುಗಳಲ್ಲಿಯೂ ಕೂಡ ಸಾಕಷ್ಟು ಯೋಜನೆಗಳಿದ್ದು ಅವುಗಳನ್ನು ಜೇಸಿಯಂತಹ ಸಂಸ್ಥೆಗಳ ಮೂಲಕ ಜನರಿಗೆ ತಲುಪಿಸುವ ಕಾರ್ಯ ಆಗಬೇಕು ಎಂದರು.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಮಾಂಬಾಡಿ ಮಾತನಾಡಿ ಜನರ ನೋವಿಗೆ ಸ್ಪಂದಿಸುವ ಗುಣ ನಮ್ಮಲ್ಲಿ ಮೂಡಬೇಕು, ಜೇಸಿ ಸಂಸ್ಥೆ ಇಂತಹ ಕಾರ್ಯ ಮಾಡುತ್ತಿದ್ದು ಸಮಾಜದಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಗಳು ಮೂಡಿ ಬರಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭ ದಶಮ ಸಂಭ್ರಮಕ್ಕೆ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಲಾಯಿತು. ನಿರ್ಗಮನ ಅಧ್ಯಕ್ಷ ಡಾ. ಬಾಲಕೃಷ್ಣ ಅಗ್ರಬೈಲು ಅವರನ್ನು ಸನ್ಮಾನಿಸಲಾಯಿತು.
ನಿಕಟಪೂರ್ವ ಅಧ್ಯಕ್ಷ ದಯಾನಂದ ರೈ, ನಿಟಪೂರ್ವ ಕಾರ್ಯದರ್ಶಿ ಉಮೇಶ್ ಆರ್ ಮೂಲ್ಯ ನೂತನ ಕಾರ್ಯದರ್ಶಿ ಉಮೇಶ್ ಪೂಜಾರಿ, ಕೋಶಾಧಿಕಾರಿ ಗಣೇಶ್ ಕೆ.ಕುಲಾಲ್ ವೇದಿಕೆಯಲ್ಲಿದ್ದರು. ಉಪಾಧ್ಯಕ್ಷರುಗಳಾಗಿ ರಾಜೇಂದ್ರ, ಸದಾನಂದ ಬಂಗೇರ, ಉಮೇಶ್ ಮೂಲ್ಯ, ವೆಂಕಟೇಶ್ ಕೃಷ್ಣಾಪುರ, ಮೋಹನ್ ನೆಟ್ಲ ಉಪಾಧ್ಯಕ್ಷರುಗಳಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಲೋಕೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಬಂಟ್ವಾಳ ಜೇಸಿ ಪದಗ್ರಹಣ, ದಶಮಾನೋತ್ಸವಕ್ಕೆ ಚಾಲನೆ"