ವಿಟ್ಲ ವರದಿ: www.bantwalnews.com
ಮಕ್ಕಳಲ್ಲಿ ಸಾಹಿತ್ಯ ಪ್ರವೃತ್ತಿ ಬೆಳೆಸಬೇಕು. ಮಕ್ಕಳು ಬರೆದ ಸಾಹಿತ್ಯವನ್ನು ಹಿರಿಯರು ಓದಬೇಕು. ಇದರಿಂದ ಮಕ್ಕಳ ಮನಸ್ಸು ಅರ್ಥವಾಗಲು ಸಾಧ್ಯವಾಗುತ್ತದೆ ಎಂದು ಚಿಂತಕ, ಸಾಹಿತಿ ಅರವಿಂದ ಚೊಕ್ಕಾಡಿ ಹೇಳಿದರು.
ಪೆರುವಾಯಿಯಲ್ಲಿ ಶನಿವಾರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಂಟ್ವಾಳ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಕ್ಕಳ ಲೋಕ ಆಶ್ರಯದಲ್ಲಿ ನಡೆದ ೧೪ನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪೆರುವಾಯಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ವೀಕ್ಷಿತ, ಸಾಹಿತ್ಯದಲ್ಲಿ ಮಾತು, ಓದು, ಬರಹ ಇರಲೇಬೇಕು. ಕಲೆ ಸಾಹಿತ್ಯ, ಸಂಗೀತ ಮೊದಲಾದವುಗಳಲ್ಲಿ ಸಾಹಿತ್ಯ ಇನ್ನೂ ಜೀವಂತವಾಗಿದೆ. ಸಾಹಿತ್ಯ ಸಮ್ಮೇಳನ ಎಂಬುದು ಒಂದು ಸಾಂಸ್ಕೃತಿಕ ಹಬ್ಬವಾಗಿದೆ. ಸಾಹಿತ್ಯದ ಬಗ್ಗೆ ಅರಿವು ಮೂಡಿಸುವ ಒಂದು ಶೈಕ್ಷಣಿಕ ಜಾತ್ರೆಯಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಯಶಸ್ವಿ ಅವರು ಮಕ್ಕಳಲ್ಲಿ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಅಭಿಮಾನ ಮೂಡಿಸಲು ಇಂತಹ ಸಾಹಿತ್ಯ ಸಮ್ಮೇಳನಗಳು ಪೂರಕವಾಗಿದೆ ಎಂದರು.
ಬಂಟ್ವಾಳ ತಾಲ್ಲೂಕು ಸಾಹಿತ್ಯ ಪರಿಷತ್ನ ಅಧ್ಯಕ್ಷ ಕೆ ಮೋಹನ ರಾವ್ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣಗೈದರು. ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಲ್ಫ್ ಡಿಸೋಜ ಅವರು ಮೆರವಣಿಗೆ ಉದ್ಘಾಟಿಸಿದರು. ಪೆರುವಾಯಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ಸಚಿನ್ ಎ ಕನ್ನಡ ಧ್ವಜಾರೋಹಣಗೈದರು. ಹರ್ಷಕೃಷ್ಣ ಎ ಅಡ್ವಾಯಿ ನೂತನ ಶಾಲಾ ಕಟ್ಟಡ ಉದ್ಘಾಟಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಸಾದ್, ಸ್ವಾಗತ ಸಮಿತಿ ಗೌರವಾಧ್ಯಕ್ಷೆ ಸವಿತಾ ಎಸ್ ಭಟ್ ಅಡ್ವಾಯಿ, ಶಾಲಾ ಮುಖ್ಯ ಶಿಕ್ಷಕ ಕುಂಞನಾಯ್ಕ, ಪೈವಳಿಕೆ ಸರ್ಕಾರಿ ಹೈಯರ್ ಸೆಕೆಂಡರಿ ಸ್ಕೂಲ್ನ ವಿದ್ಯಾರ್ಥಿ ಮೇಧ ನಾಯರ್ಪಲ್ಲ ಉಪಸ್ಥಿತರಿದ್ದರು.
ಮಕ್ಕಳ ಲೋಕದ ಅಧ್ಯಕ್ಷ ಮಹಾಬಲ ಭಟ್ ನೆಗಳಗುಳಿ ಪ್ರಸ್ತಾವನೆಗೈದರು. ಮುರುವ ಶಾಲೆಯ ವಿದ್ಯಾರ್ಥಿನಿ ಪ್ರಣತಿ ಸ್ವಾಗತಿಸಿದರು. ನೀರ್ಕಜೆ ಶಾಲೆಯ ವಿದ್ಯಾರ್ಥಿ ಅರುಣ್ ವಂದಿಸಿದರು. ಪೆರುವಾಯಿ ಶಾಲೆಯ ವಿದ್ಯಾರ್ಥಿನಿ ಅನುಪ ಸಿಲ್ವಿಯಾ ಮತ್ತು ತಂಡ ನುಡಿಗೀತೆ ಹಾಡಿದರು. ನಿಶ್ಮಿತ ವಿ.ಜಿ ನಿರೂಪಿಸಿದರು.
Be the first to comment on "ಮಕ್ಕಳು ಬರೆದದ್ದನ್ನು ಹಿರಿಯರು ಓದಬೇಕು"